ಉಡುಪಿ: ರಾಜ್ಯದಲ್ಲಿ (ಜೂ.1) ನಾಳೆಯಿಂದ ದೇವಾಲದಲ್ಲಿ ಪೂಜೆ ಆರಂಭವಾಗುತ್ತದೆ ಎಂದು ನಿರೀಕ್ಷಿಸಿದ್ದ ಭಕ್ತರಿಗೆ ನಿರಾಸೆಯಾಗಿದೆ.
ಸೋಮವಾರದಿಂದ ದೇವಾಲಯಗಳ ಬಾಗಿಲು ತೆರೆದು ಪೂಜೆ ಆರಂಭಿಸಲು ಅನುಮತಿ ಕೋರಿ ರಾಜ್ಯ ಸಲ್ಲಿಸಿದ್ದ ಮನವಿಯನ್ನು ಸ್ವೀಕರಿಸಿರುವ ಕೇಂದ್ರ ಸರ್ಕಾರ ಜೂ.1ರ ಬದಲಿಗೆ ಜೂ. 8ರಿಂದ ಬಾಗಿಲು ತೆರೆಯುವಂತೆ ಸೂಚನೆ ನೀಡಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ವಾರದ ಹಿಂದೆ ಕೇಂದ್ರ ಸರ್ಕಾರಕ್ಕೆ ಜೂ.1 ರಿಂದ ದೇವಾಲಯಗಳ ಬಾಗಿಲು ತೆರೆದು ಪೂಜೆ ಸಲ್ಲಿಸಲು ಅನುಮತಿ ಕೋರಿ ಪತ್ರ ಬರೆದಿತ್ತು.
ಖಾಸಗಿ ದೇವಾಲಯಗಳು ಬಾಗಿಲು ತೆರೆಯುವುದು ಆಡಳಿತ ಮಂಡಳಿಗೆ ಬಿಟ್ಟಿದ್ದೇವೆ. ಎಲ್ಲ ರೀತಿಯ ಸುರಕ್ಷತೆ ಕ್ರಮ ಅನುಸರಿಸಿ ದೇವಾಲಯಗಳ ಬಾಗಿಲು ತೆರೆಯುವಂತೆ ಸೂಚನೆ ನೀಡಲಾಗುವುದು ಎಂದು ಅವರು ಹೇಳಿದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧ ರಿಸುವುದು ಕಡ್ಡಾಯ. ಅಲ್ಲದೆ ದೇವಾಲದ ಇಡೀ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಗರ್ಭಗುಡಿಗೆ ಕೇವಲ ಅರ್ಚರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ದೇವಾಲಯಗಳಲ್ಲಿ ಗಂಧ, ಕುಂಕುಮ ನೀಡಲಾಗುವುದು. ತೀರ್ಥ ಹಾಗೂ ಪ್ರಸಾದ ನೀಡುವ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಅಧಿಕಾರಿಗಳ ಜತೆ ಚರ್ಚಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು.
ಲಾಕ್ಡೌನ್ನಿಂದ ಮುಜರಾಯಿ ದೇವಾಲಯಗಳಿಗೆ ನಷ್ಟವಾಗಿದೆ. ಶೇ.30 ಆದಾಯ ನಷ್ಟವಾಗಿದೆ. ಅಲ್ಲದೆ ಏಪ್ರಿಲ್ ಹಾಗೂ ಮೇ ತಿಂಗಳ ಪ್ರವಾಸೋದ್ಯಮಕ್ಕೆ ಹಿನ್ನಡೆಯಾಯಿತು ಎಂದು ಸಚಿವರು ಹೇಳಿದರು.