ಕಡಬೂರಿನಲ್ಲಿ ತೆಗೆದಿರುವ ಕಂದಕವನ್ನು ಮುಚ್ಚುವಂತೆ ಆಗ್ರಹಿಸಿ ಗ್ರಾಮಸ್ಥರು ರೈತ ಸಂಘಟನೆಯ ಜತೆಗೂಡಿ ಪ್ರತಿಭಟನೆ ನಡೆಸಿದರು. ಮಾದಪ್ಪ, ಶ್ರೀನಿವಾಸ್, ಮಾದೇಶ್ ಇತರರು ಇದ್ದರು. 
ನ್ಯೂಸ್

ಮ.ಬೆಟ್ಟಕ್ಕೆ ತೆರಳುವ ದಾರಿಯಲ್ಲಿ ತೆಗೆದಿರುವ ಕಂದಕ ಮುಚ್ಚಿ

ಹನೂರು: ತಾಲೂಕಿನ ಕಡಬೂರಿನಲ್ಲಿ ಅರಣ್ಯ ಪ್ರದೇಶದ ಮೂಲಕ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ದಾರಿಯಲ್ಲಿ ತೆಗೆದಿರುವ ಕಂದಕವನ್ನು ಮುಚ್ಚುವಂತೆ ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ರೈತ ಸಂಘಟನೆಯ ಜತೆಗೂಡಿ ಪ್ರತಿಭಟನೆ ನಡೆಸಿದರು.

ಕಂದಕವನ್ನು ತೆಗೆದಿರುವ ಸ್ಥಳದಲ್ಲಿ ನೆರೆದಿದ್ದ ಗ್ರಾಮಸ್ಥರು ಹಾಗೂ ರೈತರು ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹನೂರು ರೈತ ಸಂಘದ ಹನೂರು ಗ್ರಾಮ ಘಟಕದ ಅಧ್ಯಕ್ಷ ಮಾದಪ್ಪ ಮಾತನಾಡಿ, ಈ ಭಾಗದ ಅರಣ್ಯ ಪ್ರದೇಶದಲ್ಲಿ ಕಳೆದ ತಿಂಗಳು ಚಿರತೆಯೊಂದು ಮೃತಪಟ್ಟಿತ್ತು. ಆದರೆ ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಅಮಾಯಕ ರೈತನನ್ನು ಬಂಧಿಸಿ ಚಿರತೆ ಕೊಂದಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಡವೇರಿ ಹಲ್ಲೆ ನಡೆಸಿ ಬಿಡುಗಡೆಗೊಳಿಸಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಇದನ್ನು ಸಹಿಸದ ಅರಣ್ಯ ಇಲಾಖೆ ಅಧಿಕಾರಿಗಳು ಕಡಬೂರು ಮಾರ್ಗದ ಅರಣ್ಯ ಪ್ರದೇಶದ ಮೂಲಕ ಜನರು ತಲೆತಲಾಂತರದಿಂದ ಮಾದಪ್ಪನ ನೆಲೆಬೀಡಾದ ಮ.ಬೆಟ್ಟ ಹಾಗೂ ತಪಸಾರೆ ಬೆಟ್ಟಕ್ಕೆ ದಾರಿಯಲ್ಲಿ ತೆರಳುತ್ತಿದ್ದ ಮಾರ್ಗದಲ್ಲಿ ಕಂದಕವನ್ನು ತೆಗೆದು ತೆರಳದಂತೆ ನಿರ್ಬಂಧ ವಿಧಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ತೆಗೆದಿರುವ ಗುಂಡಿಯನ್ನು ಮುಚ್ಚುವಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಯಥಾಸ್ಥಿತಿ ಕಾಪಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಇದರಿಂದ ಈ ಭಾಗದ ಜನರು ಮ.ಬೆಟ್ಟಕ್ಕೆ ತೆರಳಲು ತುಂಬ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ 24 ಗಂಟೆಯೊಳಗೆ ತೆಗೆದಿರುವ ಕಂದಕವನ್ನು ಮುಚ್ಚುವುದರ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಹನೂರು ಹಾಗೂ ಕೌದಳ್ಳಿಯಲ್ಲಿ ರೈತ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ರೈತ ಮುಖಂಡರಾದ ಶ್ರೀನಿವಾಸ್, ನಂದೀಶ್, ಮಾದೇಶ್, ಜಗದೀಶ್, ಮಹದೇವಸ್ವಾಮಿ, ಶಿವಬಸಪ್ಪ ಹಾಗೂ ಇನ್ನಿತರರು ಇದ್ದರು.