ಶಿವಮೊಗ್ಗ: ನಮ್ಮ ಸಮಾಜವನ್ನು ಭಾಷೆ, ಕಲೆ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಕಟ್ಟಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸಾಂಸ್ಕೃತಿಕ ತವರೂರು. ಆಧುನಿಕತೆಯ ಅಂಧತ್ವದಲ್ಲಿ ಸಂಸ್ಕೃತಿ, ಸಂಸ್ಕಾರಗಳು ಕಣ್ಮರೆ ಆಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಸೃಜನಶೀಲ ಬರವಣಿಗೆ ಕಣ್ಮರೆಯಾಗುತ್ತಿದೆ ಎಂಬ ಆತಂಕದ ನಡುವೆ ಪತ್ರಿಕೆಗಳು ಹಾಗೂ ರಂಗಭೂಮಿಯ ಕ್ರಿಯಾಶೀಲ ಚಟುವಟಿಕೆಗಳು ಅಂತಹ ಆತಂಕಗಳನ್ನು ಒಂದಷ್ಟು ದೂರವಾಗಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಸೃಜನಶೀಲ ಸಾಹಿತ್ಯ ಮತ್ತು ಪ್ರಚಲಿತ ಜ್ಞಾನಕ್ಕಾಗಿ ಪತ್ರಿಕೆಗಳನ್ನು ಓದಬೇಕು ಎಂದರು.
ಈಗಿನ ಕಿರುತೆರೆಯಲ್ಲಿ ಯಾವ ನೈತಿಕ ಮೌಲ್ಯಗಳನ್ನೂ ತೋರಿಸುತ್ತಿಲ್ಲ. ಇದು ನೋಡುಗರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಕುರಿತು ಪಾಲಕರು ಜಾಗೃತರಾಗಬೇಕು. ಮಕ್ಕಳಿಗೆ ಪುಸ್ತಕಗಳನ್ನು ಪರಿಚಯಿಸುವ ಕಾರ್ಯ ಮಾಡಬೇಕು. ಆಧುನಿಕತೆಯೇ ಸರ್ವಸ್ವ ಎಂಬ ಭ್ರಮೆ ಬಿಡಬೇಕು ಎಂದು ಹೇಳಿದರು.
ಸುಗಮ ಸಂಗೀತ ಕಲಾವಿದ ಪ್ರಹ್ಲಾದ್ ದೀಕ್ಷಿತ್ ಮಾತನಾಡಿ, ಕನ್ನಡ ಸಾಹಿತ್ಯವನ್ನು ಜನರ ಮನದಾಳದಲ್ಲಿ ಉಳಿಸುವಲ್ಲಿ ಸಂಗೀತ ಪ್ರಮುಖ ಪಾತ್ರ ವಹಿಸಿದೆ. ಸಾಹಿತ್ಯಲೋಕಕ್ಕೆ ಅದ್ಭುತ ಕೊಡುಗೆ ನೀಡಿದ ಕವಿಗಳು ಎಂದೆಂದಿಗೂ ಅಮರ. ಇಂದಿನ ಚಲನಚಿತ್ರ ಗೀತೆಗಳಲ್ಲಿ ಜೀವಕಳೆ ಎಂಬುದು ಕಣ್ಮರೆಯಾಗಿದೆ. ಕೇವಲ ಮನರಂಜನೆಯೊಂದೇ ಮೂಲ ಆಶಯವಾಗಿ ಉಳಿದುಬಿಡುತ್ತಿದೆ. ಇದು ಆತಂಕಕಾರಿ ವಿಚಾರ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಎನ್‌ಇಎಸ್ ನಿರ್ದೇಶಕ ಶಿವಕುಮಾರ್, ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಲೆಕ್ಕಪತ್ರ ವಿಭಾಗದ ಅಧಿಕಾರಿ ಗುರುರಾಜ್, ಸಂಯೋಜಕ ಬಿ.ವಿ.ಶ್ರೀನಿವಾಸಮೂರ್ತಿ ಮತ್ತಿತರರಿದ್ದರು. ಇಂಜಿನಿಯರಿಂಗ್‌ನ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.