ನ್ಯೂಸ್

ಚಾಲೆಂಜ್​​... ದರ್ಶನ್ ಬರ್ತ್​ಡೇ ಪ್ರಯುಕ್ತ The Devil ಟೀಸರ್​ ರಿಲೀಸ್​; ದಾಸನ ಆ್ಯಕ್ಷನ್​ಗೆ ಫ್ಯಾನ್ಸ್​ ಫಿದಾ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರು ಇಂದು (ಫೆಬ್ರವರಿ 16) ತಮ್ಮ 48ನೇ ಜನುಮದಿನಕ್ಕೆ ಕಾಲಿಟ್ಟಿದ್ದು, ಅನಾರೋಗ್ಯದ ಕಾರಣ ಈ ವರ್ಷ ಬರ್ತ್​ಡೇ ಆಚರಿಸಿಕೊಳ್ಳುವುದಿಲ್ಲ ಎಂದು ಮೊದಲೇ ತಿಳಿಸಿದ್ದರು. ನೆಚ್ಚಿನ ನಟ ಜನುಮದಿನವನ್ನು ಆಚರಿಸಿಕೊಳ್ಳದಿದ್ದರೂ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದ್ದು, ದರ್ಶನ್ ನಟನೆಯ ದಿ ಡೆವಿಲ್ (The Devil) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

ಈ ಹಿಂದೆ ಘೋಷಣೆಯಾದಂತೆ ದರ್ಶನ್ ಅವರ ಜನುಮದಿನದಂದೇ ದಿ ಡೆವಿಲ್ (The Devil) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮವನ್ನು ಡಬಲ್ ಮಾಡಿದೆ. ಟೀಸರ್​ನ ಕೊನೆಯಲ್ಲಿ ದರ್ಶನ್ ಅವರ ಡೈಲಾಗ್​​ಗೆ ಫ್ಯಾನ್ಸ್ ಫಿದಾ ಆಗಿದ್ದು, ದರ್ಶನ್‌ ಲುಕ್‌‌, ಆ್ಯಕ್ಷನ್‌, ಫೈಟಿಂಗ್‌ ಸೀನ್‌, ಮ್ಯೂಸಿಕ್‌ ಎಲ್ಲವೂ ಮಸ್ತ್‌‌ ಅಂತಿದ್ದಾರೆ ಫ್ಯಾನ್ಸ್‌.

1:04 ನಿಮಿಷ ಅವಧಿಯ ಟೀಸರ್​ನಲ್ಲಿ ಸಖತ್ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿರುವ ನಟ ದರ್ಶನ್ ಭರ್ಜರಿ ಸ್ಟಂಟ್ ಹಾಗೂ ಆ್ಯಕ್ಷನ್​ ಮೂಲಕವೇ ಅಬ್ಬರಿಸಿದ್ದು, ಟೀಸರ್​ನ ಕೊನೆಯಲ್ಲಿ ಚಾಲೆಂಜ್​ .. ಹೂಂ ಎಂದು ಡೈಲಾಗ್ ಹೊಡೆದಿದ್ದಾರೆ. ಟೀಸರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸಿದ್ದು, ದರ್ಶನ್​ಗೆ ಶುಭಹಾರೈಸಿ ಸಿನಿಮಾ ರಿಲೀಸ್ ಡೇಟ್​ಅನ್ನು ರಿವೀಲ್ ಮಾಡುವಂತೆ ಕಮೆಂಟ್ ಹಾಕುತ್ತಿದ್ದಾರೆ.

ಟೀಸರ್ ಬಿಡುಗಡೆಗೆ ಮುನ್ನವೇ ಡೆವಿಲ್​ ಸಿನಿಮಾದ ಟೈಟಲ್‌ನಲ್ಲಿ ಬದಲಾವಣೆಯಾಗಿತ್ತು. ಸಿನಿಮಾ ಸೆಟ್ಟೇರಿದಾಗ 'ಡೆವಿಲ್ ದಿ ಹೀರೋ' ಅಂತಿದ್ದ ಟೈಟಲ್ ಈಗ 'ದಿ ಡೆವಿಲ್' (The Devil) ಎಂದು ಬದಲಾವಣೆಯಾಗಿದೆ. ದಿಢೀರ್ ಎಂದು ಟೈಟಲ್‌ನಲ್ಲಿ ಮಾರ್ಪಾಡು ಮಾಡಿದ್ಯಾಕೆ ಎಂದು ಚಿತ್ರತಂಡವಾಗಲಿ, ನಿರ್ದೇಶಕರಾಗಲಿ ಎಲ್ಲೂ ಸ್ಪಷ್ಟನೆ ಕೊಟ್ಟಿಲ್ಲ.