ತೀರ್ಥಹಳ್ಳಿ: ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಪಟ್ಟಣ ಪಂಚಾಯಿತಿಯ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿದ್ದು ಅಧ್ಯಕ್ಷರು ಪಕ್ಷಪಾತ ಧೋರಣೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಈವರೆಗೆ ಯಾವುದೇ ಅನುದಾನ ಬಂದಿಲ್ಲ ಎಂದು ಆರೋಪಿಸಿ ಮಂಗಳವಾರ ಬಿಜೆಪಿ ಸದಸ್ಯರು ಪಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಹಿರಿಯ ಸದಸ್ಯ ಸಂದೇಶ್ ಜವಳಿ, ಕಳೆದ 22 ವರ್ಷಗಳ ಕಾಲ ನಿರಂತರವಾಗಿ ಬಿಜೆಪಿ ಆಡಳಿತ ನಡೆಸಿದ್ದು ಜನರು ಬದಲಾವಣೆ ಬಯಸಿದ ಕಾರಣ ಅಧಿಕಾರಕ್ಕೆ ಬಂದಿರುವ ಈ ಕೌನ್ಸಿಲ್, ಪಟ್ಟಣ ಪಂಚಾಯಿತಿ ಘನತೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿರುವ ಅಧ್ಯಕ್ಷರು, ಪ್ರತಿಪಕ್ಷದ ಸದಸ್ಯರು ಪ್ರತಿನಿಧಿಸುವ ವಾರ್ಡ್‌ಗಳನ್ನು ಕಡೆಗಣಿಸುತ್ತಿದ್ದಾರೆ. ಈ ಧೋರಣೆಯನ್ನು ಬದಲಿಸಿಕೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪಪಂ ಕಚೇರಿಯಲ್ಲಿ ಅಧ್ಯಕ್ಷರ ಗಮನಕ್ಕೆ ಬಾರದೆ ಸಾರ್ವಜನಿಕರ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಸ್ಥಳೀಯವಾಗಿ ಸಂಗ್ರಹವಾಗುವ ಸುಮಾರು ಐದು ಕೋಟಿ ರೂ. ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸದೆ ಅನಗತ್ಯವಾಗಿ ವೆಚ್ಚ ಮಾಡಲಾಗುತ್ತಿದೆ. ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಾರೆ. ಅನಿವಾರ್ಯವಾಗಿ ಆಡಳಿತವನ್ನು ಎಚ್ಚರಿಸಲು ಹಾಗೂ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವ ಸಲುವಾಗಿ ಈ ಪ್ರತಿಭಟನೆ ನಡೆಸಬೇಕಾಗಿದೆ ಎಂದು ಹೇಳಿದರು.
ನೀರಿನ ತೆರಿಗೆ ಸಂಗ್ರಹದಲ್ಲಿ ಸೋರಿಕೆಯಾಗುತ್ತಿದ್ದರೂ ಯಾರೂ ಗಮನಹರಿಸುತ್ತಿಲ್ಲ. ರಂಗಮಂದಿರ ನಿರ್ವಹಣೆ ಇಲ್ಲದೆ ಗಬ್ಬೆದ್ದು ಹೋಗಿದೆ. ಕೌನ್ಸಿಲ್ ಒಪ್ಪಿಗೆ ಪಡೆಯದೆ ಸಾವಿರಾರು ರೂ.ಗಳನ್ನು ಅನಗತ್ಯ ಕಾರ್ಯಗಳಿಗೆ ವೆಚ್ಚ ಮಾಡಲಾಗುತ್ತಿದೆ. ಟೆಂಡರ್ ಕರೆಯದೆ ತಮ್ಮವರಿಗೆ ಕೆಲಸ ನೀಡಲಾಗುತ್ತಿದೆ. ಅಧಿಕಾರಿಗಳು ಕೂಡ ಭಯದಿಂದ ಕೆಲಸ ಮಾಡುವಂತಾಗಿದೆ ಎಂದು ಆರೋಪಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ನವೀನ್ ಯತಿರಾಜ್, ಜ್ಯೋತಿ ಮೋಹನ್, ಜ್ಯೋತಿ ಗಣೇಶ್, ರವೀಶ್ ಭಟ್, ಬಿಜೆಪಿ ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಕುಕ್ಕೆ ಪ್ರಶಾಂತ್, ಪಪಂ ಮಾಜಿ ಸದಸ್ಯರಾದ ವೆಂಕಟೇಶ ಪಟವರ್ಧನ್, ಟಿ.ಎನ್.ಅನಿಲ್, ರಾಜೀವನ್ ಮುಂತಾದವರಿದ್ದರು.