ಹತ್ತಾರು ವರ್ಷಗಳಿಂದ ಖಾಲಿ ಇರುವ ಪದವಿ ಕಾಲೇಜು ಪ್ರಾಂಶುಪಾಲರ ಹುದ್ದೆ ಭರ್ತಿಗೆ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದ್ದರೂ, ವಯೋಮಿತಿ ನಿಗದಿಯಿಂದ ಈ ಹುದ್ದೆಗಳಿಗೆ ಅರ್ಹರು ಸಿಗುವುದು ಅಪರೂಪ!
ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಹೊರತುಪಡಿಸಿ ರಾಜ್ಯದ 414 ಪದವಿ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಕಾಯಂ ಪ್ರಾಂಶುಪಾಲರೇ ಇಲ್ಲ. ಖಾಲಿ ಇರುವ ಹುದ್ದೆಗಳ ಪೈಕಿ 310 ಹುದ್ದೆ ಭರ್ತಿಗೆ ಈಗ ಸರ್ಕಾರ ಮುಂದಾಗಿದ್ದು, ಕರಡು ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆ ಅನ್ವಯ ರಾಜ್ಯದಲ್ಲಿ ಪ್ರಾಂಶುಪಾಲರ ಹುದ್ದೆಗೆ ಅರ್ಹರಾಗುವವರು ಕೇವಲ 10-20 ಮಂದಿ ಮಾತ್ರ!!
ಕಾಯಂ ಪ್ರಾಂಶುಪಾಲರಿಲ್ಲದೆ ಬಹುತೇಕ ಕಾಲೇಜುಗಳಲ್ಲಿ ಆಡಳಿತ ಶಿಸ್ತು ಹದಗೆಟ್ಟಿದೆ. ಅನುಭವದ ಕೊರತೆಯಿಂದ ಸುಧಾರಣಾ ಕ್ರಮಗಳ ಅನುಷ್ಠಾನ ಕ್ಲಿಷ್ಟವಾಗಿತ್ತು. 2017ರಲ್ಲಿ ನೇಮಕಗೊಂಡು ಸೇವಾ ಪೂರ್ವ ಅವಧಿ ಘೋಷಣೆಯಾಗದ ಸಹಾಯಕ ಪ್ರಾಧ್ಯಾಪಕರೂ ಅನೇಕ ಕಡೆ ಪ್ರಸ್ತುತ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಪೋಷಕರು, ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘಗಳ ಒತ್ತಡದ ಹಿನ್ನೆಲೆ ಕೊನೆಗೂ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
15 ವರ್ಷ ಸೇವೆ, ಪಿಎಚ್ಡಿ ಕಡ್ಡಾಯ: ಪದವಿ ಕಾಲೇಜು ಪ್ರಾಂಶುಪಾಲರಾಗಲು ಪ್ರಾಧ್ಯಾಪಕರಾಗಿ 15 ವರ್ಷ ಸೇವೆ ಪೂರ್ಣಗೊಳಿಸಿ, ಸಹ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿ ಪಿಎಚ್ಡಿ ಪದವಿ ಪಡೆದಿರುವುದು ಕಡ್ಡಾಯ. ಪರಿಶಿಷ್ಟ ಜಾತಿ ಮತ್ತು ಪಗಂಡದ ಅಭ್ಯರ್ಥಿಗಳಿಗೆ 45, ಒಬಿಸಿ 43, ಸಾಮಾನ್ಯ ವರ್ಗಕ್ಕೆ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
1984, 85, 86, 92, 96, 97, 2003 , 2004, 2006ರಲ್ಲಿ ನೇಮಕಗೊಂಡ ಪ್ರಾಧ್ಯಾಪಕರು ಈಗ ಅಸೋಸಿಯೇಟ್ ಪ್ರೋಫೆಸರ್ ಆಗಿದ್ದಾರೆ. ಇವರಲ್ಲಿ ಡಾಕ್ಟರೇಟ್ ಪದವಿ ಪಡೆದವರ ಸಂಖ್ಯೆ ಕಡಿಮೆ. ಹಾಗಾಗಿ ಪ್ರಸ್ತುತ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವಯೋಮಿತಿಗೆ ಅನ್ವಯಗೊಂಡು ನೇಮಕ ಮಾಡಲು ಹೊರಟರೆ ಹತ್ತಿಪ್ಪತ್ತು ಮಂದಿ ಕೂಡ ಅರ್ಹರು ಸಿಗುವುದಿಲ್ಲ. ಆದಕಾರಣ ಪ್ರಾಂಶುಪಾಲರ ಹುದ್ದೆ ಮತ್ತೆ ಖಾಲಿ ಉಳಿಯುವ ಸಾಧ್ಯತೆಗಳಿವೆ.
1992ಕ್ಕಿಂತ ಮೊದಲು ನೇಮಕಗೊಂಡ ಪ್ರಾಧ್ಯಾಪಕರಲ್ಲಿ ಬಹುತೇಕ ಮಂದಿ ನಿವೃತ್ತಿ ಅಂಚಿನಲ್ಲಿದ್ದಾರೆ. 1992 ಮತ್ತು 1996ರ ಬ್ಯಾಚ್ನಲ್ಲಿ ನೇಮಕಗೊಂಡವರ ಪೈಕಿ ಬಹುತೇಕ ಮಂದಿ ಗರಿಷ್ಠ ವಯೋಮಿತಿ ದಾಟಿದ್ದಾರೆ. 2003-04ರಲ್ಲಿ ಬ್ಯಾಕ್ಲಾಗ್ ಮತ್ತು ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕಾಯಂಗೊಂಡವರಲ್ಲೂ ಬಹುತೇಕ ಮಂದಿ ವಯೋಮಿತಿ ಮೀರಿದ್ದಾರೆ. ಇನ್ನು 2006ರ ಬ್ಯಾಚ್ನಲ್ಲಿ ಆಯ್ಕೆಯಾಗಿರುವ ಸಹಾಯಕ ಪ್ರಾಧ್ಯಾಪಕರು 2021ರ ವೇಳೆಗೆ 15 ವರ್ಷ ಸೇವೆ ಪೂರ್ಣಗೊಳಿಸುತ್ತಾರೆ. ಹಾಗಾಗಿ ಅವರು ಕೂಡ ಪ್ರಾಂಶುಪಾಲರ ಹುದ್ದೆಗೆ ಅರ್ಹರಾಗುವುದಿಲ್ಲ.
ಇವರ್ಯಾರಿಗೂ ಈಗ ಹುದ್ದೆ ಇಲ್ಲ: 2007ರ ಬ್ಯಾಚ್ನಲ್ಲಿ ನೇಮಕಗೊಂಡವರು 2022, 2009ರ ಬ್ಯಾಚನ್ನವರು 2024, 2017ರ ಬ್ಯಾಚ್ನಲ್ಲಿ ನೇಮಕಗೊಂಡವರು 2032ಕ್ಕೆ ನಿಗದಿತ ಅರ್ಹತೆ ಪಡೆಯಲಿದ್ದಾರೆ. ಹೀಗಾಗಿ ಸರ್ಕಾರ ಈಗ ಹೊರಡಿಸಿರುವ ಅಧಿಸೂಚನೆ ಪ್ರಕಾರ ನೇಮಕ ಮಾಡಲು ಹೊರಟರೆ, ಅರ್ಹರು ಸಿಗುವುದು ವಿರಳಾತಿ ವಿರಳ.
ಪ್ರಾಂಶುಪಾಲರ ನೇಮಕಕ್ಕೆ ಅರ್ಜಿ ಆಹ್ವಾನಿಸಿರುವ 310 ಹುದ್ದೆಗಳಲ್ಲಿ 45 ಕಲ್ಯಾಣ ಕರ್ನಾಟಕ ಭಾಗದವರಿಗೆ ಮೀಸಲಿರಿಸಲಾಗಿದೆ. ಉಳಿದ 265 ಹುದ್ದೆಗಳನ್ನು ವರ್ಗವಾರು ಮೀಸಲಾತಿಯಲ್ಲಿ ಹಂಚಿಕೆ ಮಾಡಲಾಗುತ್ತದೆ. ಒಬಿಸಿ ಅಭ್ಯರ್ಥಿಗಳು ಎಲ್ಲರೂ ವಾರ್ಷಿಕ 8 ಲಕ್ಷ ರೂ. ಆದಾಯ ಮಿತಿ ದಾಟಿದ್ದು, ಆ ವರ್ಗದ ಅಸೋಸಿಯೇಟ್ ಪ್ರೋಫೆಸರ್ಗಳು ಒಬಿಸಿ ಕೆಟಗರಿಯಲ್ಲಿ ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಆದ್ದರಿಂದ ಆ ವರ್ಗದ ಹುದ್ದೆಗಳು ಖಾಲಿ ಉಳಿಯುತ್ತವೆ. ಈ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಪರಿವರ್ತಿಸಿದಾಗ ಮಾತ್ರ ಭರ್ತಿ ಆಗುತ್ತವೆ.
ಪ್ರಾಂಶುಪಾಲರ ಹುದ್ದೆ ಭರ್ತಿಗೆ ಕರಡು ಅಧಿಸೂಚನೆ ಪ್ರಕಟಿಸಿರುವುದು ಸ್ವಾಗತಾರ್ಹ. ಆದರೆ ಈ ಕರಡಿನಲ್ಲಿರುವ ವಯೋಮಿತಿ ಸೇರಿ ವಿವಿಧ ಲೋಪ ಸರಿಪಡಿಸಿ ಹುದ್ದೆ ಭರ್ತಿ ಮಾಡಬೇಕು. | ಡಾ.ಟಿ.ಎಂ.ಮಂಜುನಾಥ್ ಅಧ್ಯಕ್ಷರು, ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ
| ವಿಲಾಸ ಮೇಲಗಿರಿ ಬೆಂಗಳೂರು