ನ್ಯೂಸ್

ಟ್ರೆಕ್ಕಿಂಗ್ ವೇಳೆ 20 ಅಡಿ ಮೇಲಿಂದ ಬಿದ್ದಿದ್ದ ವಿದೇಶಿ ಯುವತಿ ಗುಣಮುಖ

ಮಂಗಳೂರು: ಭಾರತದ ಪ್ರವಾಸಿ ತಾಣಗಳನ್ನು ಸುತ್ತಾಡುವ ಇಚ್ಛೆಯಲ್ಲಿ ಆಗಮಿಸಿದ ಚಾರಣಾಸಕ್ತ ವಿದೇಶಿ ಯುವತಿ ಗೋಕರ್ಣದಲ್ಲಿ 20 ಅಡಿ ಮೇಲಿಂದ ಬಿದ್ದು ತೀವ್ರ ಗಾಯಗೊಂಡು ಇದೀಗ ಗುಣಮುಖಳಾಗಿದ್ದಾಳೆ.

ಸ್ಪೇನ್ ದೇಶದ ಮಾರ್ತಾ ಮಾರ್ಟಿನ್ ಇಸ್ಲಾಸ್ ಜ. 9ರಂದು ಭಾರತಕ್ಕೆ ಬಂದು ಒಂದೂವರೆ ತಿಂಗಳ ಕಾಲ ಉತ್ತರ ಭಾರತ ಸುತ್ತಾಡಿದ್ದರು. ಬಳಿಕ ಗೋವಾ ನೋಡಿ ಫೆಬ್ರವರಿಯಲ್ಲಿ ಗೋಕರ್ಣಕ್ಕೆ ಕಾಲಿಟ್ಟರು. ಅಲ್ಲಿ ಅವರಿಗೆ ಬೆಂಗಳೂರಿನ ಸುಕೇಶ್ ಎಂಬವರ ಪರಿಚಯ ಆಯಿತು.

ಏಕಾಂಗಿಯಾಗಿ ಫೆ. 26ರಂದು ಗೋಕರ್ಣದ ಹಾಫ್ ಮೂನ್ ಬೀಚ್ ಹಾಗೂ ಓಂ ಬೀಚ್ ಮಧ್ಯೆ ಚಾರಣಕ್ಕೆ ತೆರಳಿದ್ದರು. ದಾರಿ ತಪ್ಪಿದ್ದ ಅವರು ಗೊಂದಲದಲ್ಲಿ ಇರುವಾಗಲೇ ಬೀಚ್ ಬದಿಯ ಗುಡ್ಡದಿಂದ ಜಾರಿ ಸುಮಾರು 6-7 ಮೀಟರ್ (ಸುಮಾರು 20 ಅಡಿ) ಕೆಳಗೆ ಬಂಡೆ ಮೇಲೆ ಬಿದ್ದು ಬಿಟ್ಟರು; ಕಾಲು ಮುರಿಯಿತು ಬೆನ್ನಿಗೂ ಪೆಟ್ಟಾಯಿತು.

ಆಂಬುಲೆನ್ಸ್‌ಗೆ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ. ಪರಿಚಿತನಾಗಿದ್ದ ಸುಕೇಶ್‌ನೂ ಕರೆ ಸ್ವೀಕರಿಸಲಿಲ್ಲ. ಕೆಲ ಸಮಯದ ಬಳಿಕ ಸುಕೇಶ್ ತಾವೇ ಕರೆ ಮಾಡಿದರು. ವಿಚಾರ ತಿಳಿದು ಸ್ಥಳಕ್ಕೆ ಬಂದರು. ಅಷ್ಟೊತ್ತಿಗೆ ಆಕೆಯ ಮಿತ್ರ ಬ್ರಿಟನ್ನಿನ ಮಾರ್ಕ್‌ಗೂ ವಿಷಯ ತಿಳಿದು ಅಲ್ಲಿಗೆ ತಲುಪಿದರು. ಮಾರ್ತಾಳನ್ನು ರಕ್ಷಿಸಿ, ಹಾಫ್ ಮೂನ್ ಬೀಚ್‌ಗೆ ಕರೆದೊಯ್ದರು.

ಪ್ರಥಮ ಚಿಕಿತ್ಸೆ ಬಳಿಕ ಮಾರ್ಕ್ ತಮ್ಮ ಪರಿಚಯದ ಫಾರ್ಮಸಿಸ್ಟ್ ನಿರ್ಮಲಾ ಜೈನ್ ಅವರೊಂದಿಗೆ ಮಾತನಾಡಿದಾಗ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ತೇಜಸ್ವಿ ಆಸ್ಪತ್ರೆಗೆ ಕಳುಹಿಸುವುದು ಸೂಕ್ತ ಎಂಬ ಸಲಹೆ ಬಂತು, ಅದರಂತೆ ರಾತ್ರಿಯೇ ಅವರನ್ನು ಮಂಗಳೂರಿಗೆ ತರಲಾಯಿತು. ಬಳಿಕ ಮಾರ್ತಾ ಅವರ ತಾಯಿ ಡಯಾನಾ ನೋರಿಸ್ ಅವರಿಗೆ ಸುಕೇಶ್ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಬರುವಂತೆ ಕೋರಿದರು. ಫೆ.29ರಂದು ತಾಯಿ ಆಗಮಿಸಿದರು. ಮಾ.3ರಂದು ಮಾರ್ತಾಗೆ ಆಪರೇಶನ್ ಆಯಿತು.

ಬಲ ಮಣಕಟ್ಟಿನಲ್ಲಿ ಕೀಲು ಜಾರಿತ್ತು. ಎಡಗಾಲು, ಮುಂಗಾಲು, ಎಡಗೈ, ಬೆನ್ನುಹುರಿಗಳಿಗೆ ಪೆಟ್ಟಾಗಿತ್ತು. ತೆರೆದ ಗಾಯವೂ ಇದ್ದುದರಿಂದ ಪ್ಲಾಸ್ಟಿಕ್ ಸರ್ಜರಿ ಸಹಿತ ಹಲವು ಚಿಕಿತ್ಸೆ ನಡೆಸಲಾಯಿತು.

ಎರಡು ತಿಂಗಳಲ್ಲಿ ಚೇತರಿಸಿಕೊಂಡಿರುವ ಆಕೆಗೆ, ಕೋವಿಡ್ ಲಾಕ್‌ಡೌನ್ ಕಾರಣದಿಂದ ತನ್ನ ತಾಯ್ನಡಿಗೆ ಹೋಗಲು ಆಗಿರಲಿಲ್ಲ. ಸದ್ಯ ಊರಿಗೆ ತೆರಳಲು ವಿಮಾನ ನಿಗದಿಯಾಗಿದ್ದು, ಬೆಂಗಳೂರಿನಿಂದ ಗುರುವಾರ ತೆರಳಿದ್ದಾರೆ.