ನ್ಯೂಸ್

ಲಕ್ಷ್ಮೇಶ್ವರ ಬಂದ್: ಪರ- ವಿರುದ್ಧ ಕೂಗು ಜೋರು

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಅ. 18ರ ರಾತ್ರಿ 10ಗಂಟೆಯಿಂದ ಅ. 20 ಬೆಳಗ್ಗೆ 6 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ತಿಳಿಸಿದರು.
ಪಟ್ಟಣದಲ್ಲಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, ಅ. 12ರಂದು ಗೋಸಾವಿ ಸಮಾಜದವರು ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ದುರ್ಗಾದೇವಿ ಮೂರ್ತಿ ವಿಸರ್ಜನೆ ಮೆರವಣಿಗೆಯ ದಿನ ಗೋಸಾವಿ ಮತ್ತು ಮುಸ್ಲಿಂ ಸಮಾಜದ ಕೆಲ ಯುವಕರ ನಡುವೆ ಗಲಾಟೆಯಾಗಿದೆ. ಮರುದಿನ ಬೆಳಗ್ಗೆ ಗೋಸಾವಿ ಸಮಾಜ ಮತ್ತು ಶ್ರೀರಾಮ ಸೇನೆ ಸಂಘಟನೆಯವರು ಠಾಣೆಗೆ ಗುಂಪಾಗಿ ಬಂದು ವಿನಾಕಾರಣ ತಂಟೆ-ತಕರಾರು ಮಾಡಿದ ಮುಸ್ಲಿಂ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಈ ವೇಳೆ ಪಿಎಸ್‌ಐ ಗುಂಪು ಚದುರಿಸಲು ಲಾಠಿ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪಿಎಸ್‌ಐ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು.
ಕೆಲವು ಪ್ರಗತಿಪರ, ಕನ್ನಡಪರ ಸಂಘಟನೆಯವರು, ಮುಖಂಡರು ಲಕ್ಷ್ಮೇಶ್ವರ ಬಂದ್‌ಗೆ ಅವಕಾಶ ಕೊಡಬಾರದು ಎಂದಿದ್ದಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಯಾರಿಗೂ ಪ್ರತಿಭಟನೆ ಮಾಡಲು ಮತ್ತು ಬಂದ್ ಮಾಡಲು ಅವಕಾಶ ನೀಡಿಲ್ಲ. ಪಟ್ಟಣದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ವ್ಯಾಪಾರ- ವಹಿವಾಟು, ಶಾಲಾ ಕಾಲೇಜು, ಸಾರಿಗೆ ಸಂಚಾರ ಎಲ್ಲವೂ ಎಂದಿನಂತಿರುತ್ತದೆ ಎಂದರು. ತಹಸೀಲ್ದಾರ್ ವಾಸುದೇವ ಎಂ. ಸ್ವಾಮಿ, ತಾಪಂ ಇಒ ಕೃಷ್ಣಪ್ಪ ಧರ್ಮರ, ತನಿಖಾಧಿಕಾರಿ ಮಹಾಂತೇಶ ಸಜ್ಜನ ಇದ್ದರು.

ವಿಚಾರಣಾಧಿಕಾರಿ ನೇಮಕ
ಲಕ್ಷ್ಮೇಶ್ವರ ಠಾಣೆಯ ಪಿಎಸ್‌ಐ ಈರಪ್ಪ ರಿತ್ತಿ ಅವರ ಮೇಲೆ ದೂರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ಡಿವೈಎಸ್‌ಪಿ ಮಹಾಂತೇಶ ಸಜ್ಜನ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಲಾಗಿದೆ. ಅವರು ತನಿಖೆ ಕೈಗೊಂಡಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯಗಳು ಸಾರ್ವಜನಿಕರಿಂದ ಬಂದರೆ ಅದನ್ನು ಪರಿಗಣಿಸಲಾಗುವುದು ಎಂದು ಎಸ್‌ಪಿ ತಿಳಿಸಿದರು.

ಬೆಂಬಲಿಸಲು ಗೋಸಾವಿ ಮುಖಂಡರ ಮನವಿ
ಲಕ್ಷ್ಮೇಶ್ವರ: ಕಸ ಆರಿಸಿ ಜೀವನ ನಡೆಸುವ ಚಿಕ್ಕ ಸಮಾಜಕ್ಕೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಅ.19ರಂದು ಬಂದ್ ಕರೆ ನೀಡಿದ್ದೇವೆ. ಇದಕ್ಕೆ ಸಂಘಟನೆಯವರು, ವ್ಯಾಪಾರಸ್ಥರು ಹಾಗೂ ಹಿರಿಯರು ಬೆಂಬಲ ನೀಡಬೇಕು ಎಂದು ಗೋಸಾವಿ ಸಮಾಜದ ಮುಖಂಡ ಬಾಳಪ್ಪ ಗೋಸಾವಿ ಮನವಿ ಮಾಡಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜಯದಶಮಿಯನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಅಂದು ಮುಸ್ಲಿಂ ಯುವಕರಿಂದ ನಮ್ಮ ಸಮಾಜದ ಯುವಕರಿಗೆ ಹಲ್ಲೆ ಆಗಿತ್ತು. ಈ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಪಿಎಸ್‌ಐ ಈರಪ್ಪ ರಿತ್ತಿ ಅವರು ನಮ್ಮ ಸಮಾಜದ ಯುವಕರು ಹಾಗೂ ಹೆಣ್ಣುಮಕ್ಕಳ ಮೇಲೆ ಲಾಠಿ ಪ್ರಯೋಗ ಮಾಡಿದ್ದಾರೆ. ಸುಖಾಸುಮ್ಮನೆ ನಮ್ಮ ಸಮಾಜದ ಯುವಕರನ್ನು ಹೊಡೆದಿದ್ದಾರೆ. ನಮ್ಮ ಜನಾಂಗವನ್ನು ಗುರಿಯಾಗಿಸಿಕೊಂಡು ಪದೇಪದೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆಪಾದಿಸಿದರು. ನಮಗೆ ಪಿಎಸ್‌ಐ ಅವರಿಂದ ಜೀವ ಬೆದರಿಕೆ ಇದೆ. ಸೂಕ್ತ ರಕ್ಷಣೆ ಬೇಕು. ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಗೋವಿಂದ ಗೋಸಾವಿ, ಸುರೇಶ ಗೋಸಾವಿ, ರಾಮು ಗೋಸಾವಿ, ರಾಜು ಗೋಸಾವಿ ಇದ್ದರು.