ನ್ಯೂಸ್

ದಾರ್ಶನಿಕ ಲೋಕದ ಮುಕುಟಮಣಿ

ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯರು ಪಂಚಸೂತ್ರಗಳ ಮುಖಾಂತರ ಜಗತ್ತಿಗೆ ಆತ್ಮಜ್ಞಾನವನ್ನು ನೀಡಿದ ಆದ್ಯ ಸೂತ್ರಕಾರರು. ಅಂತಹ ಆದ್ಯಸೂತ್ರಕಾರರಾದ ಶ್ರೀಜಗದ್ಗುರು ರೇಣುಕಾಚಾರ್ಯರು ದಾರ್ಶನಿಕ ಲೋಕದ ಮುಕುಟಮಣಿಯಾಗಿದ್ದು, ಫಾಲ್ಗುಣ ಶುದ್ಧ ತ್ರಯೋದಶಿ (ಮಾರ್ಚ್ 12) ಶ್ರೀ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ.

| ಪ್ರಶಾಂತ ರಿಪ್ಪನ್​ಪೇಟೆ

ಭಾರತದ ಸನಾತನ ಸಂಸ್ಕೃತಿಯಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿವಿಶಿಷ್ಟಾದ್ವೈತ ಎಂಬ ನಾಲ್ಕು ಸಿದ್ಧಾಂತಗಳು ಪ್ರಚಲಿತದಲ್ಲಿವೆ. ಅಸೇತು ಹಿಮಾಚಲ ಪರ್ಯಂತ ಈ ಸಿದ್ಧಾಂತಗಳನ್ನು ಅನುಸರಿಸುವ ವರ್ಗವಿದೆ. ಇವುಗಳಲ್ಲಿ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯರು.

ಸರಳ ಸೂತ್ರಗಳ ಮೂಲಕ ಮಾನವ ಮಹಾದೇವನಾಗುವ, ಜೀವಿ ಶಿವನಾಗುವ ಅದ್ಭುತ ಸಿದ್ಧಾಂತದ ಅಡಿಪಾಯದಲ್ಲಿ ವೀರಶೈವ ಮತವನ್ನು ಭೂತಲದಲ್ಲಿ ಸಂಸ್ಥಾಪಿಸಿದ್ದಾರೆ. ಶ್ರೀಜಗದ್ಗುರು ರೇಣುಕಾಚಾರ್ಯರು ಪಡ್ವಿಡಿ ಸೂತ್ರದ ಮೂಲಕ ದಾರ್ಶನಿಕ ಪರಿಭಾಷೆಗೆ ಹೊಸ ವ್ಯಾಖ್ಯಾನ ನೀಡಿದ್ದಾರೆ. ಪದ+ವಿಧಿ= ಪದ್ವಿಧಿ ಅಂದರೆ ಹುಟ್ಟಿದ ಜೀವಾತ್ಮ ಪರಮ ಪದವಿಯನ್ನು ಪಡೆಯಲು ಅನುಸರಿಸಬೇಕಾದ ಉತ್ಕೃಷ್ಟ ನಿಯಮಗಳನ್ನು ಈ ಸೂತ್ರದ ಮೂಲಕ ಉಪದೇಶಿಸಿದ್ದಾರೆ. ಪಡ್ವಿಡಿ ಸೂತ್ರದ ವಿಸõತ ವ್ಯಾಖ್ಯಾನವೇ ಅಗಸ್ಱ ಮಹರ್ಷಿಗೆ ಬೋಧಿಸಿರುವ ಶಿವಾದ್ವೈತ ಸಿದ್ಧಾಂತದ ಸಾರಸಂಗ್ರಹವಾಗಿರುವ ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ.

ಜಾತಿ, ಮತ, ಭಾಷೆ, ಪ್ರದೇಶ ಎಂಬ ಎಲ್ಲ ಸಂಕುಚಿತ ಸಂಕೋಲೆಗಳನ್ನು ಮೀರಿ, ಮಾನವ ಧರ್ಮದ ಉನ್ನತಿಗೆ ಬೇಕಾದ ಸೈದ್ಧಾಂತಿಕ ತಳಹದಿಯನ್ನು ಭದ್ರವಾಗಿ ಕಟ್ಟಿಕೊಟ್ಟ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಯಾವುದೇ ಜಾತಿ-ಜನಾಂಗದಲ್ಲಿ ಹುಟ್ಟಿದ ವ್ಯಕ್ತಿ, ತನ್ನ ಸತ್ಯ-ಶುದ್ಧ ಆಚರಣೆಯಿಂದ ಸದ್ಗುರುವಿಗೆ ಶರಣಾಗಿ; ಗುರು ನೀಡಿದ ಬೋಧಾಮೃತವನ್ನು ಅಳವಡಿಸಿಕೊಂಡು ಜೀವನದಲ್ಲಿ ಉತ್ತುಂಗಕ್ಕೇರಲು ಸಾಧ್ಯ ಎಂಬುದನ್ನು ಸಿದ್ಧಾಂತ ಶಿಖಾಮಣಿಯಲ್ಲಿ ತಿಳಿಹೇಳಿದ್ದಾರೆ.

ಆಧುನಿಕತೆ, ವಿಜ್ಞಾನ, ಪರಿವರ್ತನೆ ಹೆಸರಿನಲ್ಲಿ ಏನೆಲ್ಲ ಬದಲಾವಣೆಗಳಾದರೂ; ಮನುಷ್ಯನ ಆತ್ಮಜ್ಞಾನವನ್ನು ಹೆಚ್ಚಿಸುವುದಕ್ಕೆ ಇರುವ ಏಕೈಕ ಮಾರ್ಗ ದರ್ಶನ ಶಾಸ್ತ್ರಗಳು. ಅಂತಹ ದಾರ್ಶನಿಕ ಜಗತ್ತಿನಲ್ಲಿ ಬಹು ಪ್ರಾಚೀನ ಕಾಲದಿಂದ ಜೀವಾತ್ಮ, ಪರಮಾತ್ಮ, ಜಗತ್ತು, ಬಂಧ ಮತ್ತು ಮೋಕ್ಷ ಎಂಬ ಪಂಚ ವಿಷಯಗಳ ಕುರಿತು ಚಿಂತನೆಗಳು ನಡೆಯುತ್ತಿವೆ. ಅವುಗಳ ರಹಸ್ಯವನ್ನು ಪಂಚಸೂತ್ರಗಳು ವಿಷದವಾಗಿ ವಿವರಿಸಿವೆ.

ಶ್ರೀಜಗದ್ಗುರು ರೇಣುಕಾಚಾರ್ಯರ ಪ್ರಾಕಟ್ಯ: ಪರಶಿವನ ಪಂಚಮುಖಗಳಿಂದ ಉದಯಿಸಿದ ಜಗದ್ಗುರು ಪಂಚಾಚಾರ್ಯರು ಭೂತಲದಲ್ಲಿ ಲಿಂಗೋದ್ಭವರಾಗಿ ಅವತರಿಸಿದ ಮಹಿಮಾನ್ವಿತರು. ಅಂತೆಯೇ ಶ್ರೀಜಗದ್ಗುರು ರೇಣುಕಾಚಾರ್ಯರು ನೆರೆಯ ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಕೊಲ್ಲಿಪಾಕಿಯ ಸ್ವಯಂಭು ಸೋಮೇಶ್ವರ ಲಿಂಗದಿಂದ ಫಾಲ್ಗುಣ ಶುದ್ಧ ತ್ರಯೋದಶಿಯಂದು ಅವತರಿಸಿದ್ದಾರೆ.

ಆ ದಿನವನ್ನೇ ಪ್ರತಿವರ್ಷ ಎಲ್ಲೆಡೆ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವವಾಗಿ ಆಚರಿಸಲಾಗುತ್ತದೆ. ಯುಗ ಯುಗಗಳ ನಂಟು ಬೆಸೆದುಕೊಂಡಿರುವ ಪಂಚಾಚಾರ್ಯರ ಪರಂಪರೆಯಲ್ಲಿ ಜಗದ್ಗುರು ರೇಣುಕಾಚಾರ್ಯರು ಪ್ರಾಚೀನ ಕಾಲದಲ್ಲೇ ಅಸ್ಪ ೃ್ಯತೆಯನ್ನು ತೊಡೆದು ಸರ್ವಜನಾಂಗಕ್ಕೂ ಧಾರ್ವಿುಕ ಸ್ವಾತಂತ್ರ್ಯ ನೀಡಿದ ಕ್ರಾಂತಿಪುರುಷ.

ಕಳೆದ ಕೆಲ ವರ್ಷಗಳಿಂದ ರಾಜ್ಯ ಸರ್ಕಾರ ಕೂಡ ಅಧಿಕೃತವಾಗಿ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಆಚರಿಸುತ್ತಿದೆ. ಇಂದು (ಮಾ.12) ರಾಜಧಾನಿ ಬೆಂಗಳೂರು ಸೇರಿದಂತೆ, ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹಮ್ಮಿಕೊಂಡಿರುವುದು ಸಂತಸದ ವಿಷಯ.

ಭದ್ರಾತೀರದಲ್ಲಿ ವೀರಸಿಂಹಾಸನ: ಮಲಯಾಚಲದಲ್ಲಿದ್ದ ಅಗಸ್ಱಮುನಿಗೆ ಶಿವಾದ್ವೈತ ಸಿದ್ಧಾಂತವನ್ನು ಉಪದೇಶಿಸಿ, ಭದ್ರಾನದಿ ತೀರದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಪೀಠವನ್ನು ಸಂಸ್ಥಾಪಿಸಿದ ಜಗದ್ಗುರು ರೇಣುಕಾಚಾರ್ಯರು ಭೂಗರ್ಭ ಸಂಜಾತ ಶ್ರೀರುದ್ರಮುನಿದೇವರಿಗೆ ಉತ್ತರಾಧಿಕಾರವನ್ನು ದಯಪಾಲಿಸಿದ ನಂತರ ಈವರೆಗೆ ಬಾಳೆಹೊನ್ನೂರಿನ ಶ್ರೀರಂಭಾಪುರಿ ಪೀಠದಲ್ಲಿ 120 ಜಗದ್ಗುರುಗಳು ವೀರ ಸಿಂಹಾಸನವನ್ನು ಆರೋಹಣ ಮಾಡಿದ್ದಾರೆ.

ಸದ್ಯ ಇರುವ ಡಾ.ವೀರಸೋಮೇಶ್ವರ ಜಗದ್ಗುರುಗಳು 121ನೇಯವರಾಗಿ ಸತ್ಪರಂಪರೆಯ ತೇರನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಶ್ರೀಜಗದ್ಗುರು ರೇಣುಕಾಚಾರ್ಯರ ಮಂದಿರ, ಗೋತ್ರಪುರುಷ ವೀರಭದ್ರಸ್ವಾಮಿ ಮಂದಿರದ ಜೊತೆಗೆ, ಪೀಠದ ಪುಣ್ಯ ಪರಿಸರದಲ್ಲಿ ಶ್ರೀಸೋಮೇಶ್ವರ ಶಿಲಾದೇಗುಲ ನಿರ್ವಿುಸಿ ಇತಿಹಾಸಕ್ಕೆ ಸುವರ್ಣಲೇಪ ನೀಡಿದ ಜಗದ್ಗುರುಗಳು, 51 ಅಡಿ ಎತ್ತರದ ಶ್ರೀಜಗದ್ಗುರು ರೇಣುಕಾಚಾರ್ಯರ ಶಿಲಾಮೂರ್ತಿ ಸ್ಥಾಪನೆ ಹಾಗೂ ಥೀಮ್ಾರ್ಕ್ ನಿರ್ವಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕಾಮಗಾರಿ ಭರದಿಂದ ಸಾಗಿದ್ದು, ಭಕ್ತರ ಸಹಕಾರ ದೊರೆತಲ್ಲಿ ಬಹುಬೇಗ ಸಂಪನ್ನಗೊಳ್ಳುವ ಮೂಲಕ ಪೀಠದ ಇತಿಹಾಸ ಸುವರ್ಣಮಯವಾಗಲಿದೆ.

ವಾರ್ಷಿಕ ಜಾತ್ರೆ, ಪ್ರಶಸ್ತಿ ಪ್ರದಾನ ಸಮಾರಂಭ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ಶ್ರೀಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀರೇಣುಕಾಚಾರ್ಯ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ, ಶ್ರೀಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಖ್ಯಾತ ಕೃಷಿ ತಜ್ಞೆ ಡಾ.ಕವಿತಾ ಮಿಶ್ರಾ ಅವರಿಗೆ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮವನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಉದ್ಘಾಟಿಸಲಿದ್ದಾರೆ. ಅಭಾವೀಮ ಅಧ್ಯಕ್ಷ ಶಂಕರ ಬಿದರಿ ಸೇರಿದಂತೆ ವಿವಿಧ ಮುಖಂಡರು, ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಮಾ.13ರಂದು ಶಯನೋತ್ಸವ, ಕೆಂಡಾರ್ಚನೆ, ಶಿವಾನಂದ ಎಸ್ಟೇಟ್​ನಲ್ಲಿ ಪೂಜೆ, ಮಾ.14ರಂದು ವಸಂತೋತ್ಸವ, ಭದ್ರಾನದಿ ತೀರದಲ್ಲಿ ಸುರಗಿ ಸಮಾರಾಧನೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.