ಶಿವಮೊಗ್ಗ ತಾಲೂಕು ಪುರದಾಳು ಭಾಗದಲ್ಲಿ ಮಳೆಯಿಂದ ಗದ್ದೆಯಲ್ಲೇ ಮೊಳೆಕೆಯೊಡೆದ ಭತ್ತದ ಫಸಲು.  
ನ್ಯೂಸ್

ಗದ್ದೆಯಲ್ಲೇ ಮೊಳಕೆಯೊಡೆದ ಫಸಲು

ಶಿವಮೊಗ್ಗ: ಅವಧಿಪೂರ್ವ ಮುಂಗಾರು, ಅದಕ್ಕೂ ಮುನ್ನ ವಾಯುಭಾರ ಕುಸಿತದಿಂದ ಸುರಿದ ಮಳೆಯಿಂದಾಗಿ ಕೃಷಿಕರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಬೇಸಿಗೆಯಲ್ಲಿ ಭತ್ತ ಬೆಳೆದಿದ್ದ ರೈತರು ಲಾಭದ ಮಾತಿರಲಿ ಹಾಕಿದ ಬಂಡವಾಳ ಸಹ ಬಾರದಷ್ಟು ನಷ್ಟವಾಗಿದೆ.

ಇನ್ನೇನು ಫಸಲು ಕಟಾವಿಗೆ ಬಂತು ಎನ್ನುವಾಗಲೆ ನಿರಂತರ ಸುರಿದ ಮಳೆ ಬೆಳೆಯನ್ನು ಆಪೋಷನ ತೆಗೆದುಕೊಂಡಿದೆ. ಗದ್ದೆಯಲ್ಲೇ ಭತ್ತ ಮೊಳಕೆಯೊಡೆದಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆಗೆ ನಿರಂತರ ನೀರು ಹರಿಸಿದ್ದರಿಂದ ರೈತರು ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಎಲ್ಲದಕ್ಕೂ ತಣ್ಣೀರೆರಚಿದೆ.

ಶಿವಮೊಗ್ಗ ಗ್ರಾಮಾಂತರ ಪುರದಾಳು ಸುತ್ತಮುತ್ತ ನೂರಾರು ಎಕರೆಯಲ್ಲಿ ಬೆಳೆದಿದ್ದ ಭತ್ತ ಮೊಳೆಯೊಡೆದಿದೆ. ಎಕರೆಗೆ 20-25 ಕ್ವಿಂಟಾಲ್ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಆಘಾತವಾಗಿದೆ. ಹಾಕಿದ ಬಂಡವಾಳ ಹಾಗೂ ಶ್ರಮ ನೀರಲ್ಲಿ ಹೋಮ ಮಾಡಿದಂತಾಗಿದೆ.

ಕಾಡಾನೆ ಕಾಟದಿಂದ ಹೇಗೋ ಬೆಳೆ ಉಳಿಸಿಕೊಂಡಿದ್ದ ರೈತರಿಗೆ ವರುಣ ಇನ್ನಿಲ್ಲದ ಹೊಡೆತ ನೀಡಿದ್ದಾನೆ. ಭತ್ತ ಬೆಳೆದ ಬಹುತೇಕ ರೈತರು ಎಕರೆಗೆ ಸುಮಾರು 75 ಸಾವಿರ ರೂ. ನಷ್ಟ ಅನುಭವಿಸುವಂತಾಗಿದೆ. ನಿರಂತರ ಮಳೆಯಿಂದ ಕಟಾವು ಸಾಧ್ಯವಾಗಿಲ್ಲ. ನೆಲಕ್ಕೆ ಬಿದ್ದ ಪೈರು ಮೊಳೆಕೆಯೊಡೆದಿದೆ. ಭತ್ತವೂ ಇಲ್ಲ. ಹುಲ್ಲು ಕೂಡ ಇಲ್ಲದಂತಾಗಿದೆ.

ಒಂದೂವರೆ ಎಕರೆಯಲ್ಲಿ ಭತ್ತ ಬೆಳೆದಿದ್ದೆ. ಮಳೆ ಬಿಡುತ್ತಿಲ್ಲ. ಹೀಗಾಗಿ ತೆನೆ ಮೊಳೆಕೆ ಒಡೆದಿದೆ. ಕಾರ್ಮಿಕರ ಮೂಲಕ ಕೊಯ್ಲು ಮಾಡುವುದು ಕಷ್ಟ. ಕಟಾವು ಯಂತ್ರ ಗದ್ದೆಗೆ ಇಳಿಯುವುದೂ ಕಷ್ಟ. ಈ ಸಮಯದಲ್ಲಿ ಯಾರೂ ಮಳೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಈ ಭಾಗದಲ್ಲಿ ಅರ್ಧ ಎಕರೆಯಿಂದ ಐದು ಎಕರೆಯವರೆಗೂ ಭತ್ತ ಬೆಳೆದಿದ್ದಾರೆ. ಕ್ವಿಂಟಾಲ್‌ಗೆ ಎರಡು ಸಾವಿರ ರೂ.ಗೂ ಹೆಚ್ಚು ಭತ್ತದ ಧಾರಣೆಯಿತ್ತು. ಈಗ ಎಲ್ಲವೂ ವ್ಯರ್ಥವಾಗಿದೆ ಎಂದು ಪುರದಾಳು ಸಮೀಪದ ಕೊಟ್ಟಿಗೆಮನೆಯ ರೈತ ಅಣ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.