ನ್ಯೂಸ್

ಕೋವಿಡ್ ಅವ್ಯವಹಾರ; ಮಧ್ಯಂತರ ವರದಿಗೇ ಬಿಜೆಪಿಯವರು ಅಲ್ಲಾಡುತ್ತಿದ್ದಾರೆ: ಪ್ರಿಯಾಂಕ್ ಖರ್ಗೆ|covid scandal interim report

ಬೆಂಗಳೂರು: ಕೋವಿಡ್ ಅವ್ಯವ್ಯವಹಾರ(covid scandal) ಕ್ಕೆ ಸಂಬಂಧಿಸಿದ ನ್ಯಾ.ಕುನ್ಹಾ ಮಧ್ಯಂತರ ವರದಿಗೇ ಬಿಜೆಪಿಯವರು ಅಲ್ಲಾಡುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಜನರಿಗೆ ಖಂಡಿತ ನಾವು ನ್ಯಾಯ ಕೊಡಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyankh Kharge) ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇನ್ನೂ ಅಂತಿಮ ವರದಿ ಬಂದಿಲ್ಲ. ಮಧ್ಯಂತರ ವರದಿಗೇ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಮೈಕಲ್ ಡಿ. ಕುನ್ಹಾ ಕಾಂಗ್ರೆಸ್ ಏಜೆಂಟ್ ಎಂದು ಹೇಳುತ್ತಿರುವುದನ್ನು ನೋಡಿದರೆ ಅವರು ಭಯಗೊಂಡಿರುವುದು ನಿಶ್ಚಿತ ಎಂದು ವ್ಯಂಗ್ಯವಾಡಿದರು.

ಐಸಿಎಂಆರ್ ಗೈಡ್ ಲೈನ್ ಮೀರಿ ಕೋವಿಡ್ ನಿರ್ವಹಣೆ ಮಾಡಿದ್ದಾರೆ. ಲಕ್ಷಾಂತರ ಜನರು ಮೃತಪಟ್ಟಿದ್ದಾರೆ. ಅದರೆ ಬಿಜೆಪಿ ರಿಪೋರ್ಟ್ ಕೊಟ್ಟಿದ್ದು 30 ಸಾವಿರ ಜನರು ಸತ್ತಿದ್ದಾರೆ ಎಂದಿದೆ.

ನ್ಯಾ.ಕುನ್ಹಾ ಅವರ ಮಧ್ಯಂತರ ವರದಿಯ ಎರಡು ಅಂಶಗಳು ಬಹಿರಂಗಗೊಳ್ಳುತ್ತಲೇ ಬಿಜೆಪಿಯವರು ಅಲ್ಲಾಡುತ್ತಿದ್ದಾರೆ. ಮೋದಿಯವರು ಬೇರೆ ವಿಚಾರದ ಬಗ್ಗೆ ಮಾತನಾಡುತ್ತಾರೆ. ಕೋವಿಡ್ ಬಗ್ಗೆ ಮೋದಿ ಏಕೆ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೋವಿಡ್ ಹಗರಣದ ವರದಿ ಸರ್ಕಾರದಿಂದ ರಿಲೀಸ್ ಆಗಿಲ್ಲ. ಎರಡು ದಿನದಲ್ಲಿ ಬಂದಿರುವ ಮಾಧ್ಯಮ ವರದಿಯಂತೆ ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿರೋದು ಸಾಬೀತಾಗಿದೆ.

ಸಾವಿನಲ್ಲೂ ಬಿಜೆಪಿಯವರು ದುಡ್ಡು ಮಾಡಿಕೊಂಡಿದ್ದಾರೆ. ಕೋವಿಡ್‌ನಿಂದ ಸತ್ತಿರುವವರ ಕುಟುಂಬಗಳಿಗೆ ನ್ಯಾಯ ಸಿಗಬೇಕಿದೆ ಎಂದರು.

ಯೋಗಿಗೆ ಖರ್ಗೆ ಇತಿಹಾಸ ಗೊತ್ತಿಲ್ಲ

ರಜಾಕಾರರಿಂದ ಖರ್ಗೆಯವರ ತಾಯಿ, ಸಹೋದರಿ ಸುಟ್ಟು ಹೋದರೂ ಖರ್ಗೆ ಮೌನ ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆರೋಪ ಕುರಿತು, ಯೋಗಿ ಆದಿತ್ಯನಾಥ್ ಅವರಿಗೆ ಖರ್ಗೆ ಅವರ ಇತಿಹಾಸ ಗೊತ್ತಿಲ್ಲ. ಹೌದು ರಜಾಕಾರರು ನಮ್ಮನೆ ಸುಟ್ಟು ಹಾಕಿದರು. ಸುಟ್ಟಿದ್ದು ರಜಾಕಾರರು, ಮುಸ್ಲಿಮರಲ್ಲ, ಮುಸ್ಲಿಂ ಸಮುದಾಯ ಅಲ್ಲ. ಬೇರೆ ಬೇರೆ ಸಮುದಾಯದ ಕೆಲವರಿಂದ ಮೋಸ ಆಗುತ್ತದೆ ಎಂದು ಇಡೀ ಒಂದು ಸಮುದಾಯವನ್ನೇ ದೂರಲು ಆಗುತ್ತದೆಯೆ? ಮುಸ್ಲಿಮರಿಗೆಲ್ಲ ಆರೋಪ ಮಾಡಲು ಆಗುತ್ತದೆಯೆ?. ಇದೆಲ್ಲ ಈಗ ಅಪ್ರಸ್ತುತ ಚರ್ಚೆ ಎಂದರು.

ಇಷ್ಟೆಲ್ಲ ಮಾತನಾಡುವ ಇವರು ದಲಿತರಿಗೆ ದೇವಸ್ಥಾನಗಳಿಗೆ ಪ್ರವೇಶ ಕೊಡುತ್ತಾರಾ? ಮೊದಲು ಬಿಜೆಪಿ, ಆರ್‌ಎಸ್‌ಎಸ್ ಸಿದ್ಧಾಂತಗಳಲ್ಲಿ ಸಮಾನತೆ ತರಲಿ. ಬಿಜೆಪಿಯವರು ಅಪಾಯದಲ್ಲಿದ್ದರೆ ಮಾತ್ರ ಆಗ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಬಿಂಬಿಸುತ್ತಾರೆ. ನಿಜಕ್ಕೂ ಅಪಾಯದಲ್ಲಿ ಇರುವವರು ಬಿಜೆಪಿಯವರು, ಹಿಂದೂಗಳಲ್ಲ. ತಾವು ಅಪಾಯದಲ್ಲಿ ಇದ್ದಾಗ ಹಿಂದೂಗಳ ಹೆಸರು ಬಳಸಿಕೊಳ್ಳುತ್ತಾರೆ ಎಂದು ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.

ಸುಟ್ಟಿದ್ದು ನಮ್ಮನೆ, ಯೋಗಿಗೆ ಏನು?

ಸುಟ್ಟಿದ್ದು ನಮ್ಮನೆ, ಜೀವ ಹೋಗಿದ್ದು ನಮ್ಮವರದ್ದು, ಯೋಗಿಗೆ ಏನಾಗಬೇಕು ಇದರಿಂದ ಆ ಘಟನೆಗೆ ಇಡೀ ಮುಸ್ಲಿಂ ಸಮುದಾಯವನ್ನು ದೂರುವುದಕ್ಕೆ ಆಗುತ್ತಾ? ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಕೋರ್ಟ್ ತೀರ್ಪು ಸ್ವಾಗತಾರ್ಹ

ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಕೋರ್ಟ್ ನಕಾರ ಕುರಿತ ಪ್ರಶ್ನೆಗೆ, ಹೈಕೋರ್ಟ್ ರಾಜ್ಯ ಸರ್ಕಾರದ ಪರವಾಗಿ ಆದೇಶ ಹೊರಡಿಸಿದೆ. ಸರ್ಕಾರದ ವ್ಯಾಪ್ತಿಗೆ ಏನು ಬರುತ್ತದೆ ಎಂದು ಕೋರ್ಟ್ ಹೇಳಿದೆ. ಹೈಕೋರ್ಟ್ ತೀರ್ಪು ಸ್ವಾಗತಿಸುತ್ತೇವೆ ಎಂದು ಹೇಳಿದರು.

ನ್ಯಾ.ಕುನ್ಹಾ ಮಧ್ಯಂತರ ವರದಿಯಲ್ಲಿ ಬಲವಾದ ಸಾಕ್ಷ್ಯಗಳಿದ್ದರೆ ಕ್ರಮಕ್ಕೆ ಹಿಂಜರಿಯುವುದಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ , ಮಾಜಿ ಸಚಿವ ಶ್ರೀರಾಮುಲು ಮೇಲೆ ಎ್ಐಆರ್ ಮಾಡಬೇಕು ಎಂದು ವರದಿಯಲ್ಲಿ ಕೊಟ್ಟಿದ್ದಾರೆ. ಜನರು ಸಾಯುವಾಗಲೂ ಬಿಜೆಪಿಯವರಿಗೆ ಹಣದ ಮೇಲೆ ಆಸೆ ಇತ್ತು. 15 ಸಾವಿರ ಕೋಟಿ ಖರ್ಚು ಮಾಡಿದಾರೆ. ಅಲ್ಲಿ ಎಷ್ಟು ಅವ್ಯವಹಾರ ಆಗಿದೆ ಎನ್ನುವುದು ಪೂರ್ಣ ವರದಿ ಬಂದ ಮೇಲೆ ಗೊತ್ತಾಗುತ್ತದೆ.

-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ.