ನ್ಯೂಸ್

ಜಾಕ್ವೆಲಿನ್​ರನ್ನು ಏಕೆ ಬಂಧಿಸಿಲ್ಲವೆಂದು ಕೋರ್ಟ್ ತರಾಟೆ; ಜಾಮೀನು ಅರ್ಜಿ ತೀರ್ಪು ಇಂದು ಸಂಭವ ಬೇಲ್ ಸಿಕ್ಕರೆ ಪರಾರಿ ಎಂದ ಇಡಿ

ನವದೆಹಲಿ: ಹಣಕಾಸು ದುರ್ಬಳಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್​ರನ್ನು ಇನ್ನೂ ಬಂಧಿಸದಿರುವುದಕ್ಕೆ ದೆಹಲಿ ನ್ಯಾಯಾಲಯ ಗುರುವಾರ ತೀವ್ರ ಅತೃಪ್ತಿ ವ್ಯಕ್ತಪಡಿಸಿ ಜಾರಿ ನಿರ್ದೇಶನಾಲಯವನ್ನು (ಇ.ಡಿ.) ತರಾಟೆಗೆ ತೆಗೆದು ಕೊಂಡಿದೆ. ಕೆಲವ ರನ್ನು ಮಾತ್ರ ಆಯ್ದು ಬಂಧಿಸುವ ನೀತಿಯನ್ನು ಅನುಸರಿಸುತ್ತಿರುವುದೇಕೆ? ಜಾಕ್ವೆಲಿನ್ ವಿಚಾರದಲ್ಲಿ ಲುಕ್ ಔಟ್ ನೋಟಿಸ್ (ಎಲ್​ಒಸಿ) ಹೊರಡಿಸಿದ್ದರೂ ಇದುವರೆಗೆ ಬಂಧಿಸಿಲ್ಲವೇಕೆ ಎಂದು ಇ.ಡಿ.ಯನ್ನು ಕೋರ್ಟ್ ಪ್ರಶ್ನಿಸಿದೆ. ಜಾಕ್ವೆಲಿನ್ ನಿರೀಕ್ಷಣಾ ಜಾಮೀನು ಅರ್ಜಿ ಬಗ್ಗೆ ಕೋರ್ಟ್ ಶುಕ್ರವಾರ ತೀರ್ಪು ಪ್ರಕಟಿಸುವ ಸಂಭವವಿದೆ.

ವಂಚಕ ಸುಕೇಶ್ ಚಂದ್ರಶೇಖರ್ ಒಳಗೊಂಡಿರುವ 200 ಕೋಟಿ ರೂಪಾಯಿ ಲೂಟಿ ಪ್ರಕರಣದಲ್ಲಿ ಜಾಕ್ವೆಲಿನ್ ಆರೋಪ ಎದುರಿಸುತ್ತಿದ್ದಾರೆ.

ಜಾಕ್ವೆಲಿನ್​ಗೆ ಜಾಮೀನು ನೀಡಿದರೆ ಅವರು ದೇಶದಿಂದ ಪಲಾಯನ ಮಾಡಬಹುದು, ತನಿಖಾಧಿಕಾರಿಗಳಿಗೆ ಸರಿಯಾಗಿ ಸಹಕರಿಸು ತ್ತಿಲ್ಲ ಮತ್ತು ಅವರ ಗಂಭೀರ ಆರೋಪಗಳಿವೆ ಎಂದಿದೆ. ‘ಸಾಮಾನ್ಯ ಜನರು ಇಡೀ ಜೀವಮಾನದಲ್ಲಿ 50 ಲಕ್ಷ ರೂಪಾಯಿ ಕಾಣುವುದ ಕಷ್ಟ. ಅಂಥದ್ದರಲ್ಲಿ ಜಾಕ್ವೆಲಿನ್ ತಮಾಷೆಗಾಗಿ 7.14 ಕೋಟಿ ರೂಪಾಯಿಗಳನ್ನು ಹೊಂದಿದ್ದು ಹೇಗೆ’ ಎಂಬುದು ಇ.ಡಿ. ಪ್ರಶ್ನೆಯಾಗಿದೆ.

ಜ್ಞಾನವಾಪಿ ಕೇಸ್​ಗೆ ಇಂದು ಪೀಠ ರಚನೆ

ವಾರಾಣಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿರುವ ಶಿವಲಿಂಗದ ರಕ್ಷಣೆ ಕುರಿತಂತೆ ಹಿಂದು ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿರುವ ಸುಪ್ರೀಂಕೋರ್ಟ್, ಶುಕ್ರವಾರ ಪೀಠ ರಚನೆ ಮಾಡುವುದಾಗಿ ಹೇಳಿದೆ.

ಶಿವಲಿಂಗಕ್ಕೆ ರಕ್ಷಣೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಕಳೆದ ಮೇ 17ರಂದು ನೀಡಿರುವ ತೀರ್ಪಿನ ವಾಯ್ದೆ ನ.12ಕ್ಕೆ ಮುಗಿಯಲಿದ್ದು, ಇದನ್ನು ವಿಸ್ತರಣೆ ಮಾಡುವಂತೆ ಕೋರಿ ಹಿಂದು ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ.

ಈ ಮಧ್ಯೆ, ಆದಿಲ್ ಶಾಹಿ ಸುಲ್ತಾನರ ದಂಡನಾಯಕನಾಗಿದ್ದ ಅಫ್ಜಲ್ ಖಾನ್ ಸಮಾಧಿ ಸ್ಥಳದಲ್ಲಿ ಮಹಾರಾಷ್ಟ್ರ ಸರ್ಕಾರ ಮಾಡುತ್ತಿರುವ ಅನಧಿಕೃತ ಕಟ್ಟಡಗಳ ನೆಲಸಮ ಕುರಿತ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಶುಕ್ರವಾರ ನಡೆಯಲಿದೆ.

  • ದ್ವೇಷ ಭಾಷಣದ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ರಾಮ ಪುರದ ಸೆಷನ್ಸ್ ಕೋರ್ಟ್ ತಿರಸ್ಕರಿಸಿದೆ.
  • ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಗೌತಮ್ ನವ್ಲಾಖಾಗೆ ಒಂದು ತಿಂಗಳು ಷರತ್ತುಬದ್ಧ ಗೃಹ ಬಂಧನದಲ್ಲಿ ಇರಿಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ.
  • ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವೆಂದು ಗುರುತಿಸುವಂತೆ ಕೋರಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ದಾಖಲಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಹೆಚ್ಚುವರಿ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ. ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಈ ಕುರಿತು ಪಿಐಎಲ್ ಸಲ್ಲಿಸಿದ್ದಾರೆ.