ನ್ಯೂಸ್

ಶಂಕಿತರು 10 ದಿನ ಎನ್‌ಐಎ ಕಸ್ಟಡಿಗೆ ನೀಡಿದ ಕೋರ್ಟ್

ಬೆಂಗಳೂರು: ನಗರದ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಇಬ್ಬರು ಶಂಕಿತ ಉಗ್ರರನ್ನು ನ್ಯಾಯಾಲಯ ೧೦ ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಶಕ್ಕೆ ನೀಡಿ ಆದೇಶಿಸಿದೆ.
ಮಾ.೧ರಂದು ನಡೆದಿದ್ದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ಕೈಗೊಂಡಿದ್ದ ಎನ್‌ಐಎ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಬಾಂಬರ್ ಮುಸಾವೀರ್ ಹುಸೇನ್ ಶಾಜೀಬ್ ಮತ್ತು ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ಪಶ್ಚಿಮ ಬಂಗಾಳದ ಖಾಸಗಿ ಹೋಟೆಲ್‌ವೊಂದರಲ್ಲಿ ಏ.೧೨ ರಂದು ಬಂಧಿಸಿ, ಶುಕ್ರವಾರ ಮಧ್ಯರಾತ್ರಿ ೨ ಗಂಟೆಯ ಸುಮಾರಿಗೆ ವಿಮಾನದಲ್ಲಿ ಬೆಂಗಳೂರಿಗೆ ಕರೆ ತಂದಿದ್ದರು. ನಂತರ ಶನಿವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆರೋಪಿಗಳು ಕಳೆದ ಕೆಲ ವರ್ಷಗಳ ಹಿಂದೆ ರಾಜ್ಯದಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಹಾಗೂ ಇತರೆ ಕಾರಣಗಳನ್ನು ನೀಡಿ ೧೦ ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್‌ಐಎ ಪರ ವಕೀಲ ಪಿ. ಪ್ರಸನ್ನ ಕುಮಾರ್ ಮನವಿ ಮಾಡಿಕೊಂಡರು. ಮನವಿ ಪುರಸ್ಕರಿಸಿದ ಕೋರ್ಟ್ ಇಬ್ಬರು ಶಂಕಿತರನ್ನು ೧೦ ದಿನಗಳ ಎನ್‌ಐಎ ವಶಕ್ಕೆ ನೀಡಿ ಆದೇಶ ನೀಡಿದೆ. ಶಂಕಿತರನ್ನು ಸದ್ಯ ಮಡಿವಾಳದ ವಿಶೇಷ ವಿಚಾರಣಾ ಕೊಠಡಿಯಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ.
ಹಲವು ಪ್ರಕರಣದಲ್ಲಿ ಭಾಗಿ:
ಬಂಧಿತ ಶಂಕಿತ ಉಗ್ರರು ಶಿವಮೊಗ್ಗದ ಪ್ರಾಯೋಗಿಕ ಸ್ಫೋಟ ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಹಾಗೂ ಚೆನ್ನೈನ ಕೊಯಮತ್ತೂರಿನಲ್ಲಿ ನಡೆದ ಸ್ಫೋಟ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ. ಆದರೆ, ತಲೆಮರೆಸಿಕೊಂಡಿದ್ದರು. ಹೀಗಾಗಿ ಶಂಕಿತರು ಎಲ್ಲಿ ತಲೆಮರೆಸಿಕೊಂಡಿದ್ದರು? ಇವರಿಗೆ ಆಶ್ರಯ ನೀಡಿದವರ‌್ಯಾರು? ಈ ಕೇಸ್‌ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರಿಗೆ ಸಹಕಾರ ನೀಡಿದವರು ಯಾರು? ಬಾಂಬ್ ಅನ್ನು ಇವರೇ ತಯಾರು ಮಾಡಿದ್ದಾರಾ? ಬಾಂಬ್ ತಯಾರಿಕೆಗೆ ತರಬೇತಿ ನೀಡಿದವರ‌್ಯಾರು? ಅಥವಾ ಬೇರೆ ಯಾರಾದರೂ ಬಾಂಬ್ ಕೊಟ್ಟಿದ್ದಾರಾ? ಬಾಂಬ್ ತಯಾರಿಕೆಗ ಹಣಕಾಸು ನೆರವು ನೀಡಿದವರು ಯಾರು? ಯಾವೆಲ್ಲಾ ನಿಷೇಧಿತ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದಾರೆ? ಈ ಹಿಂದಿನ ದಾಳಿ ವೇಳೆ ಕೆಲ ಡಿಜಿಟಲ್ ಸಾಕ್ಷ್ಯಾಗಳು ಸಿಕ್ಕಿವೆ. ಅವುಗಳನ್ನು ಮುಂದಿಟ್ಟುಕೊಂಡು ವಿಚಾರಣೆ ನಡೆಸಬೇಕಾಗಿದೆ. ಪ್ರಮುಖವಾಗಿ ಹೆಚ್ಚು ಜನಸಂದಣಿ ಇರುವ ಸ್ಥಳದಲ್ಲಿ ಬಾಂಬ್ ಇರಿಸಿ ಸ್ಫೋಟಿಸಿ, ಜನರಲ್ಲಿ ಭಯವನ್ನುಂಟು ಮಾಡಲಾಗಿದೆ. ಭಯೋತ್ಪಾದನೆಯ ದೊಡ್ಡ ಸಂಚಿನ ಭಾಗ ಇದಾಗಿದೆ. ಇದರಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ. ಸಂಚಿನ ಪ್ರತಿಯೊಂದು ಸಂಗತಿಯನ್ನು ಪತ್ತೆ ಮಾಡಬೇಕಿದೆ. ಇದಕ್ಕಾಗಿ ಶಂಕಿತರ ವಿಚಾರಣೆ ಅಗತ್ಯವಿದೆ ಎಂದು ವಿವರಿಸಿದರು. ವಾದ ಆಲಿಸಿದ ನ್ಯಾಯಾಧೀಶರು, ಇಬ್ಬರೂ ಆರೋಪಿಗಳನ್ನು ಮುಂದಿನ ೧೦ ದಿನಗಳವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದರು.

ಸದ್ಯದಲ್ಲಿಯೇ ಸ್ಥಳ ಮಹಜರ್:
ಬಂಧಿತ ಶಂಕಿತ ಉಗ್ರರನ್ನು ಸದ್ಯದಲ್ಲಿಯೇ ಕುಂದಲಹಳ್ಳಿಯಲ್ಲಿರುವ ರಾಮೇಶ್ವರ ಕೆೆಗೆ ಕರೆದೊಯ್ಯಲಿರುವ ಎನ್‌ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸಲಿದ್ದಾರೆ. ಯಾವ ರೀತಿ ಕೆೆಗೆ ಬಾಂಬ್ ಇಟ್ಟು ಸ್ಫೋಟಿಸಲಾಯಿತು ಎಂಬ ಇಂಚಿಂಚಿ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಸ್ಥಳ ಮಹಜರು ನಡೆಸುವ ಪ್ರತಿಯೊಂದು ದೃಶ್ಯವನ್ನು ಚಿತ್ರೀಕರಣ ಮಾಡಿಕೊಳ್ಳಲಿದ್ದಾರೆ. ನಂತರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೇರಿ ಇತರೆ ಸ್ಥಳಗಳಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಿದ್ದಾರೆ.