ಬೆಂಗಳೂರು: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ರಮ್ಯಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಟ್ರೇಲರ್ನ ಎರಡು ದೃಶ್ಯಗಳಲ್ಲಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಒಂದು ದೃಶ್ಯದಲ್ಲಿ ರಮ್ಯಾ ಮಾದಕವಾಗಿ ಕಂಡುಬರುವ ದೃಶ್ಯವಿದೆ. ಈ ದೃಶ್ಯದ ಬಗ್ಗೆ ರಮ್ಯಾ ತಕರಾರು ತೆಗೆದು ಕೋರ್ಟ್ ಮೆಟ್ಟಿಲೇರಿದ್ದರು. ಸಿನಿಮಾ ಬಿಡುಗಡೆ ತಡೆಯುವಂತೆ ಮನವಿ ಮಾಡಿದ್ದರು. ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಇಂದು ಜುಲೈ 20ಕ್ಕೆ ಮುಂದೂಡಿದ್ದರು.
ಕೋರ್ಟ್ನಲ್ಲಿ ಇಂದು ವಿಚಾರಣೆ ನಡೆದಿದ್ದು, ನ್ಯಾಯಾಲಯವು ಹಾಸ್ಟೆಲ್ ಹುಡುಗರ ಪರ ಆದೇಶ ಹೊರಡಿಸಿದೆ. ನಾಳೆ ಯಾವುದೇ ತಡೆ ಇಲ್ಲದೆ ಹಾಸ್ಟೆಲ್ ಹುಡುಗರು ಸಿನಿಮಾ ರಿಲೀಸ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ರಮ್ಯಾ ಹಾಕಿದ್ದ ಕೇಸ್ ಅನ್ನು ಕೋರ್ಟ್ ತೆರವುಗೊಳಿಸಿದೆ. ಹಾಸ್ಟೆಲ್ ಹುಡುಗರ ಪರ ಲಾಯರ್ ವೇಲನ್ ವಾದ ಮಂಡಿಸಿದ್ದರು. ಇದೀಗ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಗೊಳಿಸಿದೆ.
ಬಹುತೇಕ ಹೊಸಬರ ತಂಡವೇ ಮಾಡಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಜುಲೈ 21ಕ್ಕೆ ತೆರೆ ಕಾಣಲಿದೆ. ಆದರೆ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದ ಕಾರಣ ಸಿನಿಮಾ ಬಿಡುಗಡೆ ತಡವಾಗುತ್ತದೆ ಎನ್ನಲಾಗುತ್ತಿತ್ತು. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಲೂಸಿಯಾ ಪವನ್ ಕುಮಾರ್, ದಿಗಂತ್ ಸಹ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.