ನ್ಯೂಸ್

ಇಪ್ಪತ್ತು ವರ್ಷಗಳಲ್ಲಿ ದೇಶದ ಆರ್ಥಿಕತೆ ಪ್ರಗತಿ

ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ವಿಶ್ವದ ಇತರ ರಾಷ್ಟ್ರಗಳಿಗಿಂತಲೂ ಉತ್ತಮ ಪ್ರಗತಿ ಸಾಧಿಸಲಿದೆ ಎಂದು ಬೆಂಗಳೂರಿನ ಸಾಮಿ-ಸಬಿನ್ಸಾ ಗ್ರೂಪ್ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ವಿಪ್ರ ಪ್ರೊಫೆಷನಲ್ ಫೋರಂ ವತಿಯಿಂದ ವಿಜಯನಗರದ ಜೆಸಿಎಸಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪಿಎಫ್ ಬಿಸಿನೆಸ್ ಕಾನ್‌ಕ್ಲೇವ್ ಸಮಾರಂಭದಲ್ಲಿ ಮಾತನಾಡಿ, ವಿಶ್ವದ ಒಟ್ಟು ಜಿಡಿಪಿ ಅಂದಾಜು 100 ಟ್ರಿಲಿಯನ್‌ಗಳಿದ್ದು, ವಿಶ್ವದ ಹಿರಿಯಣ್ಣ ಎಂದು ಕರೆಯಲ್ಪಡುವ ಅಮೆರಿಕಾದ ಜಿಡಿಪಿ 30 ಟ್ರಿಲಿಯನ್ ಇದೆ. ಆ ಮೂಲಕ ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗ ಅಮೆರಿಕ ಹೊಂದಿದೆ. ಭಾರತದ ಜನಸಂಖ್ಯೆಯ ಶೇ.25ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಅಮೆರಿಕದ ಆರ್ಥಿಕತೆ ಭಾರತಕ್ಕಿಂತ ಅತ್ಯಂತ ಉತ್ತಮವಾಗಿದೆ ಎಂದರು.

ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಕೃತಕ ಬುದ್ಧಿಮತ್ತೆ(ಎಐ) ದೊಡ್ಡಮಟ್ಟದ ಪರಿಣಾಮ ಬೀರಲಿದ್ದು, ಇಡೀ ವಿಶ್ವವನ್ನೇ ಬದಲಿಸಲಿದೆ. ಪ್ರಮುಖವಾಗಿ ಎಐನಿಂದ ಬ್ರಾಹ್ಮಣ ಸಮುದಾಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗಲಿದೆ. ಬ್ರಾಹ್ಮಣರು ಮಾಡುವ ಕೆಲಸವನ್ನು ಎಐ ತಾನೇ ಮಾಡುತ್ತಿದೆ. ಉದಾಹರಣೆಗೆ ಬ್ರಾಹ್ಮಣರು ಹೇಳುವ ಮಂತ್ರವನ್ನು ಇಂದು ಎಐ ಹೇಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗಾತ್ಮ ಡಿ. ಶ್ರೀಹರಿ ಮಾತನಾಡಿ, ಬಡ ಬ್ರಾಹ್ಮಣ, ಬಡ ಪೂಜಾರಿ ಎಂಬ ಪದಗಳನ್ನು ತೆಗೆಯುವ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ವಿಪಿಎಫ್ ಮೈಸೂರಿನಲ್ಲಿ ತನ್ನ ವಿಂಗ್ ಆರಂಭಿಸಿದೆ. ನಾವು ಎರಡು ಕಾರಣಗಳಿಂದ ಒಂದಾಗುತ್ತಿದ್ದು, ಯಾರಿಗಾದರೂ ತೊಂದರೆ ಎದುರಾದರೆ ನೆರವಿಗೆ ಧಾವಿಸುತ್ತೇವೆ. ಮಾಧ್ಯಮ ಕ್ಷೇತ್ರದಲ್ಲಿರುವವರು ನಮ್ಮ ಸಂಪರ್ಕದಲ್ಲಿದ್ದು, ದೊಡ್ಡವರು ಚಿಕ್ಕವರೆಂಬ ತಾರತಮ್ಯ ಇಲ್ಲದೆ, ಎಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದೇವೆ ಎಂದರು.

ಉದ್ಯಮಿಗಳಾದ ಕೇಶವ್, ಭರತ್, ಜಯಸಿಂಹ, ವೆಂಕಟೇಶ್, ಭಾಷ್ಯಂ, ಶ್ರೀನಿವಾಸ್ ವರದರಾಜನ್, ಅನಂತನಾಗರಾಜ್, ರಾಧಕೃಷ್ಣ ಇತರರಿದ್ದರು.