ನ್ಯೂಸ್

ಕೇಂದ್ರದ ವಿರುದ್ಧ ಮುಗಿಬಿದ್ದ ಮಂತ್ರಿ ಮಂಡಲ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿಲ್ಲ, ಪ್ರಭಾವವೂ ಇಲ್ಲ. ಕಾನೂನು ತೊಡಕು ಬಾಧಿಸದು ಎಂಬ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಕೇಂದ್ರದಿಂದ ತೊಂದರೆಯಾಗಬಹುದೆಂಬ ‘ಅಳುಕು’ ಕಾಡಲಾರಂಭಿಸಿದಂತಿದೆ.

ಪ್ರಕರಣದಲ್ಲಿ ಸಿಎಂಗೆ ಸಮಜಾಯಿಷಿ ಕೇಳಿ ನೋಟಿಸ್ ನೀಡಿದ ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ಅವರತ್ತ ಕೆಂಗಣ್ಣು ಬೀರಿರುವುದಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಮಂತ್ರಿಮಂಡಲ ಮುಗಿಬಿದ್ದಿದೆ.

ಸಂವಿಧಾನದ ಕಗ್ಗೊಲೆ: ಮಂತ್ರಿಮಂಡಲ ಸಭೆ ಬಳಿಕ ಸಚಿವರು, ಸಿಎಂ ಕಾನೂನು ಸಲಹೆಗಾರರ ಜತೆಗೆ ಗುರುವಾರ ಸುದ್ದಿಗೋಷ್ಠಿ ನಡೆಸಿ, ರಾಜ್ಯಪಾಲರ ನಡೆ ಸಂವಿಧಾನದ ಕಗ್ಗೊಲೆ, ಪ್ರಜಾಪ್ರಭುತ್ವ ಸರ್ವನಾಶ. ರಾಜ್ಯಪಾಲರನ್ನು ಕೇಂದ್ರ ಸರ್ಕಾರ ಕೈಗೊಂಬೆ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ಕೋಪಾವೇಶದಿಂದ ವಿಶ್ಲೇಷಿಸಿದರು.

ಕನ್ನಡಿಗರ ಆಶೀರ್ವಾದ, ಕಾನೂನಾತ್ಮಕವಾಗಿ ಆಯ್ಕೆಯಾಗಿರುವ ಬಹುಮತದ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು, ಬುಡಮೇಲು ಮಾಡುವ ಕ್ರಮಕ್ಕೆ ಮತ್ತೊಮ್ಮೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಂತ್ರಿ ಪರಿಷತ್ ಒಮ್ಮತದಿಂದ ಆಕ್ಷೇಪಿಸಿದೆ ಎಂದರು. ಖಾಸಗಿ ವ್ಯಕ್ತಿಯೊಬ್ಬರು ಜು.26ರಂದು 250 ಪುಟಗಳ ದೂರು ಸಲ್ಲಿಸಿದ ಒಂದು ತಾಸಿನೊಳಗೆ ರಾಜ್ಯಪಾಲರ ನಡೆ ಮಿಂಚಿನ ವೇಗ ಪಡೆದಿದೆ. ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ನಿಮ್ಮ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಬಾರದೇಕೆ?’ ಎಂದು ಸಿಎಂಗೆ ಕಾರಣ ಕೇಳಿ ನೋಟಿಸ್ ಕೊಟ್ಟು, ಏಳು ದಿನಗಳ ಗಡುವು ವಿಧಿಸಿದ್ದಾರೆ.

ಪ್ರಕರಣ ಸಂಬಂಧ ಮುಖ್ಯ ಕಾರ್ಯದರ್ಶಿ ಸಲ್ಲಿಸಿದ ವರದಿಯನ್ನು ರಾಜ್ಯಪಾಲರು ಪೂರ್ತಿ ಪರಿಶೀಲಿಸದೇ ತರಾತುರಿಯಲ್ಲಿ ನೋಟಿಸ್ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ದೂರಿದರು. ನೋಟಿಸ್ ನೀಡಿರುವ ಕಾರಣ ಶ್ರೇಷ್ಠ ಸಂಪ್ರದಾಯ, ಮೌಲ್ಯಗಳನ್ನು ಎತ್ತಿಹಿಡಿಯಲೆಂದು ಸಿದ್ದರಾಮಯ್ಯ ಸಂಪುಟ ಸಭೆಯಿಂದ ದೂರ ಉಳಿದು, ನನ್ನ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಸಲು ಸಿಎಂ ಒಪ್ಪಿಗೆ ನೀಡಿದರು. ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗೆ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ವಿಚಾರವಾಗಿ ವಿಸõತವಾಗಿ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಬೇರೆ ರಾಜ್ಯಗಳಲ್ಲಿ ನಡೆದಿರುವ ಪ್ರಕರಣ, ಇತರ ಪ್ರಕರಣಗಳಲ್ಲಿ ನ್ಯಾಯಾಲಯದ ಮಾರ್ಗದರ್ಶನ ಹಾಗೂ ತೀರ್ಪ, ಇಂತಹ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಲ್ಲಿ ಯಾವ ಸರ್ಕಾರಗಳು ಯಾವ ರೀತಿ ನಡೆದುಕೊಂಡಿವೆ ಎಂದು ಚರ್ಚೆ ಮಾಡಿದ್ದೇವೆ ಎಂದರು.

ಅಕ್ರಮದ ಸಾಕ್ಷ್ಯಾಧಾರಗಳಿಲ್ಲ: ಮುಡಾ ಪ್ರಕರಣದಲ್ಲಿ ಸಿಎಂರಿಂದ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಾಗಲಿ, ತನಿಖಾ ಸಂಸ್ಥೆಗಳ ವಿಚಾರಣೆಯಾಗಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಎಂ ವಿಚಾರಣೆ ನಡೆಸಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುದೊಡ್ಡ ಬಹುಮತದೊಂದಿಗೆ ಆಯ್ಕೆಯಾದ ರಾಜ್ಯದ ಮುಖ್ಯಮಂತ್ರಿಗಳನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಪರಿಸ್ಥಿತಿ ನಿರ್ವಣವಾಗುತ್ತಿದೆ ಎಂದು ಡಿಕೆಶಿ ಕಿಡಿಕಾರಿದರು.

ಅಸ್ಥಿರಗೊಳಿಸುವ ಪ್ರಯತ್ನ: ರಾಜ್ಯದ ಜನತೆ 136 ಸೀಟುಗಳನ್ನು ನೀಡಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಟಿ.ಜೆ. ಅಬ್ರಹಾಂ ಎಂಬಾತನ ಹಿನ್ನೆಲೆ ಎಲ್ಲರಿಗೂ ಗೊತ್ತಿದೆ. ಆತ ಯಾರ ವಿರುದ್ಧ ಕೇಸ್ ದಾಖಲಿಸಿದ್ದಾನೆ, ಸುಪ್ರೀಂ ಕೋರ್ಟ್ ಎಷ್ಟು ದಂಡ ವಿಧಿಸಿದೆ ಎಂಬುದು ನಿಮ್ಮೆಲ್ಲರಿಗೂ (ಪತ್ರಕರ್ತರು) ಗೊತ್ತಿದೆ. ಆತ ನೀಡಿರುವ ದೂರನ್ನು ಇಟ್ಟುಕೊಂಡು, ರಾಜ್ಯಪಾಲರನ್ನು ಬಳಸಿಕೊಂಡು ಕರ್ನಾಟಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.

 ಎರಡು ಬಾರಿ ವರದಿ ಸಲ್ಲಿಕೆ: ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಜು.5ರಂದು ಪ್ರಕಟಿತ ವರದಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟವು ಜು.15ರಂದು ಸಲ್ಲಿಸಿದ ಮನವಿ ಆಧರಿಸಿ ರಾಜ್ಯಪಾಲರು ಎರಡು ಬಾರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವರದಿ ಕೇಳಿದ್ದಾರೆ. ಅಲ್ಲದೆ, ನಿವೇಶನಗಳ ಅಕ್ರಮ ಹಂಚಿಕೆ ನ್ಯಾಯಾಂಗ ತನಿಖೆಗೆ ಒಪ್ಪಿಸಲು ರೈತ ಸಂಘಟನೆಗಳ ಒಕ್ಕೂಟ ಕೇಳಿದ್ದನ್ನು ಉಲ್ಲೇಖಿಸಿದ್ದಾರೆ. ರಾಜ್ಯಪಾಲರ ಪತ್ರವನ್ನು ಸಿಎಂ ಗಂಭೀರವಾಗಿ ಪರಿಗಣಿಸಿ, ಗೌರವಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಪಿ.ಎನ್.ದೇಸಾಯಿ ನೇತೃತ್ವದ ಸಮಿತಿ ರಚಿಸಿ, ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಇದಾದ ನಂತರ ಅಬ್ರಾಹಂ ಜು.26ರಂದು ದೂರು ನೀಡುತ್ತಾರೆ. ಅದೇ ದಿನ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ರಾಜ್ಯಪಾಲರಿಗೆ ಮುಖ್ಯ ಕಾರ್ಯದರ್ಶಿ ಸಲ್ಲಿಸುತ್ತಾರೆ. ಈ ವರದಿ ಪೂರ್ಣ ಪರಿಶೀಲಿಸದೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ತನಿಖೆಗೆ ಮುನ್ನವೇ ಶೋಕಾಸ್ ನೋಟಿಸ್ ನೀಡಲಾಗಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಕಗ್ಗೊಲೆಯಲ್ಲವೇ ಎಂದು ಡಿಕೆಶಿ ಪ್ರಶ್ನಿಸಿದರು.

ಸಿಎಂ ಪತ್ನಿಯಾದ ಮಾತ್ರಕ್ಕೆ ಆಸ್ತಿ ರಕ್ಷಣೆ ತಪ್ಪೇ?: ಸಿಎಂ ಪತ್ನಿ ತಮ್ಮ ಆಸ್ತಿ ಉಳಿಸಿಕೊಳ್ಳಲು ಮುಡಾಗೆ ಅರ್ಜಿ ಸಲ್ಲಿಸಿದ್ದಾರೆ. ತನ್ನಿಂದಾದ ತಪು್ಪ ಒಪ್ಪಿ ಪರಿಹಾರ ರೂಪದಲ್ಲಿ 50:50 ಅನುಪಾತದ ಪ್ರಕಾರ ಬದಲೀ ನಿವೇಶನಗಳ ಹಂಚಿಕೆಗೆ ಮುಡಾ ಸಭೆಯಲ್ಲಿ ಪಕ್ಷಾತೀತವಾಗಿ ನಿರ್ಧರಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಇದೇ ರೀತಿ 1,900 ನಿವೇಶನಗಳ ಹಂಚಿಕೆಯಾಗಿದ್ದು, ಈಗ ಭ್ರಷ್ಟಾಚಾರವಾಗಿದೆ ಎಂದು ದೊಡ್ಡ ಧ್ವನಿಯಲ್ಲಿ ಆರೋಪ ಮಾಡುತ್ತಿದೆ. ಸಿಎಂ ಪತ್ನಿ ಎಂದ ಮಾತ್ರಕ್ಕೆ ಆ ಹೆಣ್ಣುಮಗಳು ತನ್ನ ಆಸ್ತಿ ಹಕ್ಕು ರಕ್ಷಿಸಿಕೊಳ್ಳುವುದು ತಪ್ಪೇ? ಇದು ಸ್ವಜನ ಪಕ್ಷಪಾತ ಆಗುವುದಿಲ್ಲ ಎಂದು ಡಿಕೆಶಿ ಅಲ್ಲಗಳೆದರು.

ಸ್ವಯಂಪ್ರೇರಿತ ನಿರ್ಧಾರದ ಅವಕಾಶವಿಲ್ಲ: ಸಂವಿಧಾನದ 163ನೇ ಅನುಚ್ಛೇದದ ಪ್ರಕಾರವೇ ರಾಜ್ಯಪಾಲರ ನಡವಳಿಕೆ, ಸಲಹೆಗಳು ಸೀಮಿತವಾಗಿರುತ್ತವೆ. ಯಾವುದೇ ದೂರನ್ನು ಸ್ವತಃ ಸೀಕರಿಸಿ, ಮುಖ್ಯಮಂತ್ರಿಗೆ ಕಾರಣ ಕೇಳುವ ನೋಟಿಸ್ ನೀಡುವ ಅಧಿಕಾರವಿಲ್ಲ ಎಂದು ಸಿಎಂ ಕಾನೂನು ಸಲಹೆಗಾರ ಎ.ಎಂ.ಪೊನ್ನಣ್ಣ ಹೇಳಿದರು.

ರಾಜ್ಯಪಾಲರ ಮೇಲೆ ವಿಶ್ವಾಸ: ಪ್ರಕರಣವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಎಲ್ಲ ವಿವರಿಸಿದ್ದೇವೆ. ರಾಜ್ಯಪಾಲರು ಬಹಳ ಲೆಕ್ಕಾಚಾರದಿಂದ ಹೆಜ್ಜೆಯಿಡಬೇಕಾಗುತ್ತದೆ. ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಅಡಗಿದೆ. ಏನೇ ಒತ್ತಡವಿದ್ದರೂ ತಮ್ಮ ಸ್ಥಾನದ ಘನತೆ ಹಾಳಾಗದಂತೆ ಜವಾಬ್ದಾರಿ ನಿರ್ವಹಿಸುವ ವಿಶ್ವಾಸವಿದೆ. ವಿಸõತ ವರದಿ ನೀಡಿದ್ದು, ಮುಖ್ಯಮಂತ್ರಿಗಳು ವಿವರವಾಗಿ ಉತ್ತರ ನೀಡಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಹೈಕಮಾಂಡ್​ಗೆ ಎಲ್ಲ ಗೊತ್ತು: ಮುಡಾ ಪ್ರಕರಣದಲ್ಲಿ ಯಾವುದೇ ರೀತಿ ಅಕ್ರಮ ನಡೆದಿಲ್ಲವೆಂದು ಹೈಕಮಾಂಡ್​ಗೆ ಗೊತ್ತು. ಈ ವಿಚಾರವಾಗಿ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ರ್ಚಚಿಸಿಲ್ಲ. ದೆಹಲಿ ಭೇಟಿ ವೇಳೆ ರಾಜ್ಯ ರಾಜಕೀಯ ವಿದ್ಯಮಾನ, ಪಕ್ಷದ ಸಂಘಟನೆ, ಜನರಲ್ಲಿ ಬಿಜೆಪಿ ಸೃಷ್ಟಿಸುತ್ತಿರುವ ಗೊಂದಲ ಬಗ್ಗೆ ಚರ್ಚೆ ಮಾಡಿದೆವು ಎಂದು ಪ್ರಶ್ನೆಯೊಂದಕ್ಕೆ ಡಿಕೆಶಿ ಉತ್ತರಿಸಿದರು.

ಬಿಎಸ್​ವೈ ಅವಧಿಯಲ್ಲಿ ಏನಾಗಿತ್ತು?: ಈಗಿನ ಪ್ರಕರಣಕ್ಕೂ, ಬಿ.ಎಸ್.ಯಡಿಯೂರಪ್ಪ ಪ್ರಕರಣಕ್ಕೂ ಅಜಗಜಾಂತರವಿದೆ. ಬಿಎಸ್​ವೈ ಪ್ರಕರಣದಲ್ಲಿ ದೂರುದಾರರು ಮ್ಯಾಜಿಸ್ಟ್ರೇಟ್ ನಿರ್ದೇಶನದಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಆದರೆ ಈ ಪ್ರಕರಣದಲ್ಲಿ ಖಾಸಗಿ ವ್ಯಕ್ತಿ ನೇರವಾಗಿ ಸಲ್ಲಿಸಿದ ದೂರು ಆಧರಿಸಿ ಪ್ರಾಸಿಕ್ಯೂಷನ್ ಅನುಮತಿ ನೀಡಬಾರದೇಕೆ? ಎಂದು ರಾಜ್ಯಪಾಲರು ಕಾರಣ ಕೇಳುವ ನೋಟಿಸ್ ನೀಡಿರುವುದು ಕಾನೂನುಬಾಹಿರವೆಂದು ಸಚಿವ ಕೃಷ್ಣಬೈರೇಗೌಡ ವ್ಯಾಖ್ಯಾನಿಸಿದರು.

ರಾಜ್ಯಪಾಲರ ಮುಂದಿನ ನಡೆ ಏನು?

1 . ದೆಹಲಿಯಲ್ಲಿ ನಡೆದಿರುವ ರಾಜ್ಯಪಾಲರ ಸಮಾವೇಶ ಮುಗಿಸಿ ಶನಿವಾರ ವಾಪಸಾದ ಬಳಿಕ ಈ ಪ್ರಕರಣದ ಪರಾಮರ್ಶೆ ಆರಂಭಿಸಬಹುದು.

2 . ಮುಖ್ಯಮಂತ್ರಿಯವರು ಕಳಿಸಿದ ಸಮಜಾಯಿಷಿ ಹಾಗೂ ಮಂತ್ರಿ ಪರಿಷತ್ ನಿರ್ಣಯ ರೂಪದ ಸಲಹೆಯ ಪರಾಮರ್ಶೆ ನಡೆಸುವರು.

3. ಮತ್ತೊಮ್ಮೆ ಕಾನೂನು ತಂಡದೊಂದಿಗೆ ಸರ್ಕಾರದ ನಡೆಯ ಕುರಿತು ಸಮಾಲೋಚನೆ ನಡೆಸಿ ಮುಂದಿನ ತೀರ್ವನಕ್ಕೆ ಅಭಿಪ್ರಾಯ ಕೇಳಬಹುದು.

4. ಒಂದೊಮ್ಮೆ ಹೆಚ್ಚಿನ ಮಾಹಿತಿ ಅಥವಾ ದಾಖಲೆ ಅವಶ್ಯಕ ಎನಿಸಿದರೆ ಸರ್ಕಾರದಿಂದ ಪಡೆದುಕೊಳ್ಳಲೂಬಹುದು.

5. ಅಬ್ರಹಾಂ ಅವರಿಂದ ಇನ್ನಷ್ಟು ದಾಖಲೆ ಅಪೇಕ್ಷಿಸಿದ್ದು, ಅವರು ಸೋಮವಾರ ತಂದುಕೊಟ್ಟ ಬಳಿಕ ಮುಂದಿನ ತೀರ್ಮಾನ ಮಾಡಬಹುದು.

6. ದಾಖಲೆಗಳ ಆಧಾರದಲ್ಲಿ ಮುಖ್ಯಮಂತ್ರಿಯವರಿಗೆ ಇನ್ನೊಮ್ಮೆ ನೋಟಿಸ್ ಜಾರಿ ಮಾಡಿ ಹೆಚ್ಚಿನ ವಿವರಣೆ ಕೇಳುವ ಸಾಧ್ಯತೆ.