ನ್ಯೂಸ್

ಕೊರೊನಾ ನೆಕ್ಟ್ಸ್​ ಟಾರ್ಗೆಟ್​ ಇರಾನ್​: ಉಪಾಧ್ಯಕ್ಷರು ಸೇರಿ 245 ಜನರಲ್ಲಿ ಕೊರೊನಾ ಪತ್ತೆ

ಟೆಹ್ರಾನ್​: ಚೀನಾದಲ್ಲಿ ಮಹಾಮಾರಿಯಾಗಿ ಕಾಡಿ ಈಗ ಕೊಂಚ ಸುಧಾರಿಸಿರುವ ಕೊರೊನಾ ವೈರಸ್​ ಇದೀಗ ಇರಾನ್​ನಲ್ಲಿ ತನ್ನ ಯಮರೂಪವನ್ನು ತೋರಿಸಲಾರಂಭಿಸಿದೆ. ಇರಾನ್​ ಉಪಾಧ್ಯಕ್ಷರು ಸೇರಿ ದೇಶದಲ್ಲಿ ಒಟ್ಟು 245 ಜನರಿಗೆ ಕೊರೊನಾ ವೈರಸ್​ ತಗುಲಿರುವುದು ಧೃಡವಾಗಿದೆ.

ಕೊರೊನಾ ವೈರಸ್​ ಕುರಿತಾಗಿ ಸುದ್ದಿಗೋಷ್ಠಿ ನಡೆಸಿರುವ ಇರಾನ್​ನ ಆರೋಗ್ಯ ಸಚಿವಾಲಯ, ಒಂದೇ ದಿನದಲ್ಲಿ 106 ಜನರಲ್ಲಿ ವೈರಸ್​ ಪತ್ತೆಯಾಗಿದ್ದು, ಇದುವರೆಗೆ ಒಟ್ಟು 245 ಜನರಲ್ಲಿ ವೈರಸ್​ ಇರುವುದು ಧೃಡವಾಗಿದೆ ಎಂದು ತಿಳಿಸಿದೆ. 26 ಜನರು ಈ ವೈರಸ್​ನಿಂದಾಗಿ ಮೃತರಾಗಿರುವ ಮಾಹಿತಿಯನ್ನು ಸಚಿವಾಲಯ ಹಂಚಿಕೊಂಡಿದೆ.

ಇರಾನ್​ನಲ್ಲಿ ಒಟ್ಟು ಏಳು ಉಪಾಧ್ಯಕ್ಷರುಗಳಿದ್ದು ಅದರಲ್ಲಿ ಮಹಿಳಾ ವ್ಯವಹಾರಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊತ್ತಿರುವ ಮಸೌಮೆಹ್​ ಎಬ್ಟೆಕರ್​ಗೆ ವೈರಸ್​ ಸೋಂಕಿದೆ. ಸದ್ಯ ಮಸೌಮೆಹ್​ ಎಬ್ಟೆಕರ್​ ಅವರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೊಟ್ಟಿಗಿದ್ದ ಅಧಿಕಾರಿ ವರ್ಗದವರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಖ್ಯಸ್ಥ ಮೊಜ್ತಾಬಾ ಜೊಲ್ನೋರ್​ ಅವರಿಗೂ ಸಹ ಸೋಂಕು ತಗುಲಿರುವುದು ವರದಿಯಾಗಿದೆ. ಫೆಬ್ರವರಿ 19ರಂದು ದೇಶದಲ್ಲಿ ಮೊದಲ ಕೊರೊನಾ ವೈರಸ್​ ಪತ್ತೆಯಾಗಿದ್ದು ಅಂದಿನಿಂದ ಇಂದಿನವರೆಗೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗುತ್ತಿದೆ. (ಏಜೆನ್ಸೀಸ್​)