ತೀರ್ಥಹಳ್ಳಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಂ ಈ ಇಬ್ಬರು ಮಹನೀಯರು ದೇಶಕ್ಕೆ ನೀಡಿದ ಕೊಡುಗೆ ಅಮೂಲ್ಯವಾದುದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತಾಲೂಕು ಆಡಳಿತದಿಂದ ಆಯೋಜಿಸಿದ್ದ ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಇಬ್ಬರು ಮಹನೀಯರು ಜನಿಸಿದ್ದು ಕೆಳವರ್ಗದಲ್ಲಾದರೂ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.
ಅಂಬೇಡ್ಕರ್ ಮತ್ತು ಜಗಜೀವನರಾಂ ಅವರನ್ನು ಆರಾಧಿಸುವ ಬದಲು ಅನುಕರಣೆ ಮಾಡುವ ಅಗತ್ಯವಿದೆ. ರಾಜಕೀಯ ಉದ್ದೇಶಗಳಿಗಾಗಿ ಈ ದೇಶದ ಸಂವಿಧಾನವನ್ನು 106 ಬಾರಿ ತಿದ್ದುಪಡಿ ಮಾಡಿರುವುದು ವಿಪರ್ಯಾಸದ ಸಂಗತಿ. ಅಂಬೇಡ್ಕರ್ ಹೇಳಿರುವಂತೆ ನನ್ನ ಜನರಿಗಾಗಿ 10 ವರ್ಷ ಮೀಸಲಾತಿ ಇರಬೇಕು ಎಂದಿದ್ದರು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸೌಲಭ್ಯ ಪಡೆದ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬಂದಿವೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಪ್ರತಿ ವರ್ಷ ಎಸ್‌ಸಿ, ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ಅನುದಾನ ಕಾಯ್ದಿರಿಸಲಾಗುತ್ತದೆ. ಆದರೆ ಈವರೆಗೂ ಸಮುದಾಯಗಳು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿಲ್ಲ. ರಾಜ್ಯ ಸರ್ಕಾರ ಕಳೆದ ಬಾರಿ ಮುಂಗಡ ಪತ್ರದಲ್ಲಿ ಪರಿಶಿಷ್ಟರಿಗೆ ಮೀಸಲಿಟ್ಟಿದ್ದ 31 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿದೆ ಎಂದು ಆರೋಪಿಸಿದರು.
ತಹಸೀಲ್ದಾರ್ ಎಸ್.ರಂಜಿತ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ, ಸದಸ್ಯರಾದ ರತ್ನಾಕರ ಶೆಟ್ಟಿ, ಮಂಜುಳಾ ನಾಗೇಂದ್ರ, ನೆಂಪೆ ದೇವರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಪ್ರವೀಣ್ ಇದ್ದರು.