ಚಿಕ್ಕಮಗಳೂರು ತಾಲೂಕು ಬಿಂಡಿಗ ಮಲ್ಲೇನಹಳ್ಳಿಯ ಶ್ರೀ ದೇವೀರಮ್ಮ ದೇವಾಲಯದ ಬ್ರಹ್ಮ ಕುಂಬಾಭಿಷೇಕ ಮಹೋತ್ಸವಕ್ಕೆ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಕುಲಶೇಖರ, ಬಸವರಾಜೇಗೌಡ, ನಿಂಗಶೆಟ್ರು, ದಿನೇಶ್, ಯತೀಶ್, ಬಿಳಿಯಪ್ಪ, ಸುನೀಲ್ ಇತರರಿದ್ದರು. 
ನ್ಯೂಸ್

ಭಾರತೀಯ ಸಂಸ್ಕೃತಿಗೆ ನಾಡಿನ ಕೊಡುಗೆ ಅನನ್ಯ

ಚಿಕ್ಕಮಗಳೂರು: ಭಾರತದ ಸಂಸ್ಕೃತಿ ಉಳಿದಿದ್ದರೆ, ಅದಕ್ಕೆ ಕಾರಣ ದಕ್ಷಿಣ ಭಾರತ. ಅದರಲ್ಲೂ ಕನ್ನಡಿಗರೇ ಸಂಸ್ಕೃತಿ ಪಾಲಕರು. ಹೀಗಾಗಿ ಭಾರತೀಯ ಹಾಗೂ ಕನ್ನಡದ ಪರಂಪರೆ ಎರಡೂ ಒಂದೇ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ತಾಲೂಕಿನ ಬಿಂಡಿಗ ಮಲ್ಲೇನಹಳ್ಳಿಯ ಶ್ರೀ ದೇವೀರಮ್ಮ ದೇವಾಲಯದ ಬ್ರಹ್ಮ ಕುಂಭಾಭಿಷೇಕ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುತ್ತ ಅದನ್ನು ಬೆಳೆಸುವ ಕೆಲಸ ಮಾಡಬೇಕು. ಆಗ ನಾಡಿಗೆ ಇನ್ನಷ್ಟು ಕೀರ್ತಿ ಬರಲು ಸಾಧ್ಯ ಎಂದು ಹೇಳಿದರು.
ನಮ್ಮ ಇತಿಹಾಸವನ್ನು ಗಮನಿಸಿದಾಗ ಕನ್ನಡಿಗರ ಸಂಸ್ಕೃತಿ ಎಷ್ಟು ಶ್ರೇಷ್ಠ ಎಂಬುದು ತಿಳಿಯುತ್ತದೆ. ದಕ್ಷಿಣ ಭಾರತದ ಮೇಲೆ ಉತ್ತರ ಭಾರತದ ಅರಸರು ಎಷ್ಟು ಬಾರಿ ದಾಳಿ ನಡೆಸಿದರೂ ನಮ್ಮ ಸಂಸ್ಕೃತಿಯನ್ನು ಅಳಿಸಿಹಾಕಲು ಸಾಧ್ಯವಾಗಲಿಲ್ಲ. ದಾಳಿಯಾದಂತೆಲ್ಲ ನಮ್ಮ ಸಂಸ್ಕೃತಿ, ಪರಂಪರೆ ಇನ್ನಷ್ಟು ಗಟ್ಟಿಯಾಗಿದ್ದು ವಿಶೇಷ ಎಂದರು.
ನಮ್ಮ ಹಿರಿಯರ ಕಾಲದಿಂದಲೂ ಮಲೆನಾಡಿನ ಜತೆ ನಿಕಟವಾದ ಸಂಬಂಧವಿದೆ. ಮಹಾರಾಜರು ಪ್ರಕೃತಿ, ಪರಿಸರ ಪ್ರೇಮಿಗಳಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅರಣ್ಯ ಎಂದರೆ ತುಂಬ ಪ್ರೀತಿ ಇತ್ತು. ಈಗ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಆಗಿದೆ. ಹಿಂದೆ ಮೈಸೂರು ಅರಸರ ಕಾಲದಲ್ಲಿ ಅದು ಭದ್ರಾ ಟೈಗರ್ ಬ್ಲಾಕ್ ಎಂದಿತ್ತು. ನಮ್ಮ ಪೂರ್ವಜರು ಭದ್ರಾ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆಯಲು ಹೆಚ್ಚಾಗಿ ಬರುತ್ತಿದ್ದರು. ಅದೇ ರೀತಿ ದತ್ತಪೀಠ, ಕೆಮ್ಮಣ್ಣುಗುಂಡಿಗಳಲ್ಲೂ ಅಂದಿನ ಕಾಲದಲ್ಲೇ ಅತಿಥಿ ಭವನಗಳನ್ನು ನಿರ್ಮಿಸಿದ್ದರು. ಪ್ರಕೃತಿ ತಾಣಗಳಲ್ಲಿ ವಿಶ್ರಮಿಸುವುದು ಅವರಿಗೆ ಅಚ್ಚುಮೆಚ್ಚಾಗಿತ್ತು ಎಂದು ತಿಳಿಸಿದರು.
ವಿಜಯನಗರ ಅರಸರ ಕಾಲದಲ್ಲಿ ಸಾಮ್ರಾಜ್ಯದ ಮೇಲೆ ಉತ್ತರ ಭಾರತದ ಅರಸರು ಹಲವು ಬಾರಿ ದಾಳಿ ನಡೆಸಿದರು. ಆದರೆ ಕನ್ನಡಿಗರು ದೊಡ್ಡ ಕೋಟೆಯಂತೆ ಅವರನ್ನು ತಡೆಯುವಲ್ಲಿ ಯಶಸ್ವಿಯಾದರು. ಇಂದು ಉತ್ತರ ಭಾರತದಲ್ಲಿ ದೊಡ್ಡ ದೊಡ್ಡ ದೇವಾಲಯಗಳು ನಿರ್ಮಾಣವಾಗುತ್ತಿವೆ. ಆದರೆ ವಿಜಯನಗರ ಹಾಗೂ ಮೈಸೂರು ಸಾಮ್ರಾಜ್ಯದ ಅರಸರು ಅಂದೇ ದೊಡ್ಡ ದೊಡ್ಡ ದೇವಾಲಯಗಳನ್ನು ಮರುನಿರ್ಮಾಣ ಮಾಡುವ ಮೂಲಕ ಭಾರತದ ಸಂಸ್ಕೃತಿ ಸಂರಕ್ಷಿಸುವ ಕೆಲಸ ಮಾಡಿದ್ದಾರೆ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಮರಿಸಿದರು. ಕರ್ನಾಟಕದಲ್ಲಿ ದೊಡ್ಡ ದೊಡ್ಡ ದೇವಾಲಯಗಳು ನಿರ್ಮಾಣವಾಗಿದ್ದರಿಂದ ಹಾಗೂ ವಿಜಯನಗರ ಅರಸರ ಪ್ರೋತ್ಸಾಹ ಹಾಗೂ ರಕ್ಷಣೆಯಿಂದಾಗಿ ರಾಮಾನುಜಾಚಾರ್ಯರು ಮೇಲುಕೋಟೆಯಿಂದ ವೈಷ್ಣವ ಪರಂಪರೆಯನ್ನು ಇಡೀ ದೇಶಾದ್ಯಂತ ಹರಡಲು ಸಾಧ್ಯವಾಯಿತು ಎಂದರು.
ಈ ಭಾಗದ ಧಾರ್ಮಿಕ ಸ್ಥಳಗಳ ಜತೆಗೂ ರಾಜ ಮನೆತನಕ್ಕೆ ಸಂಬಂಧವಿದೆ. ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಅದ್ವೈತ ವೇದಾಂತ ಮುಂದುವರಿಯುತ್ತಿದೆ. ಅದಕ್ಕೆ ರಾಜಮನೆತನದ ಪ್ರೋತ್ಸಾಹವೂ ಮುಂದುವರಿಯುತ್ತಿದೆ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕ್ಷೇತ್ರದ ಜನರಿಗೆ, ರೈತರಿಗೆ ಉತ್ತಮ ಮಳೆ, ಬೆಳೆ, ಆರೋಗ್ಯ ನೀಡುವಂತೆ ಶ್ರೀ ದೇವೀರಮ್ಮನಲ್ಲಿ ಪ್ರಾರ್ಥಿಸಿದ್ದೇವೆ. ಪ್ರವಾಸೋದ್ಯಮದಲ್ಲಿ ನಮ್ಮ ಜಿಲ್ಲೆ ಹೆಸರುವಾಸಿಯಾಗಿದೆ. ಅದೇ ರೀತಿ ಧರ್ಮಕ್ಷೇತ್ರದಲ್ಲೂ ಬಿಂಡಿಗ ದೇವಾಲಯ ಮುಂಚೂಣಿಯಲ್ಲಿರುವುದು ಹೆಮ್ಮೆ ತಂದಿದೆ ಎಂದರು.
ಬ್ರಹ್ಮ ಕುಂಭಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಶ್ರೀ ದೇವೀರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ, ಪ್ರಮುಖರಾದ ಬಸವರಾಜೇಗೌಡ, ನಿಂಗಶೆಟ್ರು, ದಿನೇಶ್, ಯತೀಶ್, ಬಿಳಿಯಪ್ಪ, ಸುನೀಲ್ ಇತರರಿದ್ದರು.