ನ್ಯೂಸ್

ಗುತ್ತಿಗೆದಾರರ ಬಿಲ್ 800 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ: ಅಭಿನಂದನೆ ಸಲ್ಲಿಸಿದ ಡಿ.ಕೆಂಪಣ್ಣ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇತ್ತೀಚೆಗೆ ಕಮೀಷನ್ ಆರೋಪ ಮಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಇದೀಗ ಕಮಿಷನ್ ತೆಗೆದುಕೊಂಡ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲಯೂ ಎಂದು ಹೇಳುವ ಮೂಲಕ ‘ಯೂ’ ಟರ್ನ್ ಹೊಡೆದಿದ್ದಾರೆ.


ಲೋಕೋಪಯೋಗಿ ಇಲಾಖೆಯಲ್ಲಿ ೧ ಕೋಟಿಗಿಂತ ಕಡಿಮೆ ಇರುವ ಎಲ್ಲ ಬಿಲ್‌ಗಳನ್ನು ಪಾವತಿ ಮಾಡಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು.


ಪ್ರೆಸ್‌ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮೀಷನ್‌ಗೆ ಬೇಡಿಕೆ ಇಡದೆ, ೧೦೫೪ ಸಣ್ಣ ಗುತ್ತಿಗೆದಾರರ ಬಿಲ್‌ಗಳ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ವಿವಿಧ ಇಲಾಖೆಗಳಲ್ಲಿ ಉಳಿದಿರುವ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ವಿವಿಧ ಇಲಾಖೆಗಳ ಸಚಿವರನ್ನು ರಾಜ್ಯ ಗುತ್ತಿಗೆದಾರರ ಸಂಘ ಅಭಿನಂದಿಸುತ್ತದೆ ಎಂದು ಹೇಳಿದರು.


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ವಸತಿ, ಸಣ್ಣ ನೀರಾವರಿ ಇಲಾಖೆಗಳಲ್ಲಿ ಬಾಕಿ ಇರುವ ಬಿಲ್ ಮೊತ್ತ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ ಅಂತ ಸಿಎಂ ಮತ್ತು ಡಿಸಿಎಂ ಭರವಸೆ ನೀಡಿದ್ದಾರೆ ಎಂದರು.
ಲೋಕೋಪಯೋಗಿ ಇಲಾಖೆಯಲ್ಲಿ ಸಣ್ಣ ಗುತ್ತಿಗೆದಾರರ ಬಿಲ್‌ಗಳನ್ನು ಆದ್ಯತೆ ಮೇಲೆ ಪಾವತಿಸುವ ಹೊಸ ಸೂತ್ರವೊಂದನ್ನು ಲೋಕೋಪಯೋಗಿ ಇಲಾಖೆ ಅಳವಡಿಸಿಕೊಂಡಿದೆ. ಅಪೆಂಡಿಕ್ಸ್-ಇ ಅಡಿಯಲ್ಲಿ ಕಾಮಗಾರಿಗಳ ಬಾಕಿ ಹಣ ಇರುವ ೧,೦೫೪ ಸಣ್ಣ ಗುತ್ತಿಗೆದಾರರ ಬಿಲ್‌ಗಳನ್ನು ಒಂದೇ ಬಾರಿಗೆ ಪಾವತಿಸಲಾಗಿದೆ. ಸಣ್ಣ ಗುತ್ತಿಗೆದಾರರಿಗೆ ಏಕ ಕಾಲಕ್ಕೆ ಸುಮಾರು ೮೦೦ ಕೋಟಿ ರೂ. ಬಿಡುಗಡೆ ಮಾಡಿರುವುದು ಒಂದು ದಾಖಲೆಯೇ ಸರಿ ಎಂದು ತಿಳಿಸಿದರು.


ಅಪೆಂಡಿಕ್ಸ್-ಇ ಅಡಿಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳ ನಿರ್ವಹಣೆ ಹಾಗೂ ಸುಧಾರಣೆ ಕಾಮಗಾರಿ ಕೈಗೊಂಡಿದ್ದ ೧,೯೪೫ ಗುತ್ತಿಗೆದಾರರಿಗೆ ಮೂರು ವರ್ಷಗಳಿಂದ ಬಿಲ್‌ಗಳ ಪಾವತಿ ಬಾಕಿ ಇತ್ತು. ವಿಶೇಷವಾಗಿ ಸಣ್ಣ ಗುತ್ತಿಗೆದಾರರು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಸಣ್ಣ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಆದ್ಯತೆಯ ಮೇಲೆ ಪಾವತಿಸಲು ಸೂತ್ರವೊಂದನ್ನು ರೂಪಿಸುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಬಿಬಿಎಂಪಿಯಲ್ಲಿಯೂ ಬಾಕಿ ಬಿಲ್ ಪಾವತಿ ಮಾಡಲು ಉಪ ಮುಖ್ಯಮಂತ್ರಿಗಳು ಕ್ರಮವಹಿಸಿದ್ದಾರೆ.
ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಚರ್ಚೆ ನಡೆಸುತ್ತಿದ್ದಾರೆ. ೆ,೧೬ರಂದು ಮುಖ್ಯಮಂತ್ರಿಗಳು ತಮ್ಮ ದಾಖಲೆಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸರ್ಕಾರದಲ್ಲಿ ಅನುದಾನ ಇದ್ದಷ್ಟೇ ಟೆಂಡರ್‌ಗಳು ಕರೆಯಬೇಕು ಮತ್ತು ಎಲ್ಲಾ ಇಲಾಖೆಗಳಲ್ಲಿ ಬಾಕಿ ಇರುವ ಬಿಲ್ಗಳನ್ನು ಪಾವತಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.


ಪ್ಯಾಕೆಜ್ ಟೆಂಡರ್ ರದ್ದುಗೊಳಿಸಿ:
ವಿವಿಧ ಇಲಾಖೆಗಳಲ್ಲಿ ಅನಾವಶ್ಯಕವಾಗಿ ಆಹ್ವಾನಿಸಿರುವ ಪ್ಯಾಕೆಜ್ ಟೆಂಡರ್‌ಗಳನ್ನು ರದ್ದುಗೊಳಿಸಿ ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕವಾಗಿ ಟೆಂಡರ್ ಕರೆಯಲು ಸಂಘ ಈ ಹಿಂದೆ ಆಗ್ರಹಪಡಿಸಿತ್ತು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿದು ಬಂದಿದೆ. ಭವಿಷ್ಯದಲ್ಲಿ ಅನಾವಶ್ಯಕವಾಗಿ ಪ್ಯಾಕೇಜ್ ಟೆಂಡರ್ ಆಹ್ವಾನಿಸಬಾರದು ಎಂದು ರಾಜ್ಯದ ಸಮಸ್ತ ಗುತ್ತಿಗೆದಾರರ ಪರವಾಗಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.