ಬೆಂಗಳೂರು: ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲು ಸಂವಿಧಾನದ ಆರ್ಟಿಕಲ್ 352ನಲ್ಲಿ ಅವಕಾಶವಿದೆ. ದೇಶದ ಮೇಲೆ ಬಾಹ್ಯ ದಾಳಿ ಹಾಗೂ ಆಂತರಿಕ ಗದ್ದಲ ಇದ್ದಾಗ ತುರ್ತುಪರಿಸ್ಥಿತಿ ಹೇರಬಹುದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ದೇಶದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳನ್ನು ಹತ್ತಿಕ್ಕಿ, ದೇಶದ ಪರಿಸ್ಥಿತಿ ನಿಭಾಯಿಸಲು ಇಂದಿರಾ ಗಾಂಧಿ ಸಂವಿಧಾನ ಬದ್ಧವಾಗಿ ತುರ್ತುಪರಿಸ್ಥಿತಿ ಹೇರಿದರು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಗಿನ ಹೋರಾಟಗಾರರು ಇಂದಿರಾ ಗಾಂಧಿ ಅವರ ಸರ್ಕಾರದ ವಿರುದ್ಧ ಹೋರಾಟ ಮಾಡದೇ, ದೇಶದ ಸೇನೆ ಹಾಗೂ ಸಶಸ್ತ್ರ ಪಡೆಗಳು ದಂಗೆ ಮಾಡುವಂತೆ ಕರೆ ನೀಡುತ್ತಾರೆ. ಆಗ ಬೇರೆ ದಾರಿಯಿಲ್ಲದೆ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿ ಪರಿಸ್ಥಿತಿ ನಿಯಂತ್ರಿಸಿದರು. ತುರ್ತು ಪರಿಸ್ಥಿತಿ ಹೇರಿದ ಇಂದಿರಾ ಗಾಂಧಿ ಅವರೇ ತುರ್ತುಪರಿಸ್ಥಿತಿ ಹಿಂಪಡೆದರು ಎಂದರು.
ಇಂದಿರಾ ಗಾಂಧಿ ಎಂದಿಗೂ ತಮ್ಮ ಎದುರಾಳಿಗಳ ಮನೆ ಮುಂದೆ ಬುಲ್ಡೋಜರ್ ಕಳುಹಿಸಲಿಲ್ಲ. ಐಎಎಸ್ ಅಧಿಕಾರಿಗಳನ್ನು ಬಂಧಿಸಿರಲಿಲ್ಲ. ನಕಲಿ ಎನ್ ಕೌಂಟರ್ ಮಾಡಲಿಲ್ಲ. ಕಾಂಗ್ರೆಸ್ ಅಂದು ಯಾವುದೇ ರೀತಿ ಅಸಂವಿಧಾನಿಕ ಕ್ರಮ ಕೈಗೊಂಡಿಲ್ಲ. ತುರ್ತು ಪರಿಸ್ಥಿತಿ ನಂತರವೂ ಜನ ಕಾಂಗ್ರೆಸ್‌ಗೆ ಬಹುಮತ ನೀಡಿ ಗೆಲ್ಲಿಸಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳನ್ನು ಬಂಧನ ಮಾಡಿರಲಿಲ್ಲ. ಸಮಾಜಘಾತುಕ ಶಕ್ತಿಗಳು ಹಾಗು ಸರ್ಕಾರ ಬುಡಮೇಲು ಮಾಡುವ ಪ್ರಯತ್ನಕ್ಕೆ ಮುಂದಾದವರನ್ನು ಮಾತ್ರ ನಿಯಂತ್ರಣ ಮಾಡಲಾಗಿತ್ತು. ಸಂವಿಧಾನಕ್ಕೆ ಅಡಚಣೆ ಮಾಡುವ ಕೆಲಸ ಆಗಿರಲಿಲ್ಲ ಎಂದು ಸಮರ್ಥಿಸಿದರು.
ಲೋಕಸಭೆ ಚುನಾವಣೆಯಲ್ಲಿ ರಾಮಮಂದಿರ ನಿರ್ಮಾಣದ ಹೊರತಾಗಿಯೂ ಉತ್ತರಪ್ರದೇಶದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ನಂತರ ಬಿಜೆಪಿ ನಾಯಕರು ಬುದ್ಧಿಭ್ರಮಣೆಗೆ ಒಳಗಾಗಿದ್ದಾರೆ. ಅವರ ಭಾಷಣಗಳೇ ಇದಕ್ಕೆ ಸಾಕ್ಷಿ ಎಂದ ಅವರು ರಾಹುಲ್ ಗಾಂಧಿ ಸಾಂವಿಧಾನಿಕವಾಗಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಅವರ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡುತ್ತಿರುವುದು ನೋಡಿದರೆ ಬುದ್ಧಿಭ್ರಮಣೆ ಯಾಗಿರುವುದಕ್ಕೆ ಸಾಕ್ಷಿ ಎಂದು ಟೀಕಿಸಿದರು.
ರಾಹುಲ್ ಗಾಂಧಿ ಅವರು ಮೋದಿ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದಾರೆ ಅವರನ್ನೇ ನೇರವಾಗಿ ಪ್ರಶ್ನೆ ಮಾಡಬಹುದಾಗಿತ್ತು. ಆದರೆ ಬಾಲಕ ಬುದ್ಧಿ, ಬಚ್ಚಾ ಎಂಬ ಪದ ಬಳಕೆ ಮಾಡಿದ್ದಾರೆ. ಆಮೂಲಕ ದೇಶದ ಮಕ್ಕಳ ಬಗ್ಗೆ ಅವಹೇಳನ ಮಾಡಿದ್ದಾರೆ. ದೇಶದಲ್ಲಿ ಇವರಿಗಿಂತ ಹಾಗೂ ಇವರ ಮಂತ್ರಿಗಳಿಗಿಂತ ಹೆಚ್ಚು ಬುದ್ಧಿವಂತಿಕೆ ಇರುವ ಮಕ್ಕಳು ಇದ್ದಾರೆ ಎಂದರು.