ನ್ಯೂಸ್

ಕನ್ನಡ ಸಮ್ಮೇಳನದ ಯಶಸ್ಸು; ಸಾಹಿತ್ಯ ಲೋಕಕ್ಕೆ ಹುಮ್ಮಸ್ಸು: ನಾಡಿನ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಸಮ್ಮೇಳನ

| ವಿಲಾಸ ಮೇಲಗಿರಿ, ಹಾವೇರಿ

ಜನಸಾಮಾನ್ಯರ ನ್ಯಾಯದಾನದಲ್ಲಿ ಹಾವೇರಿ ನ್ಯಾಯಪಂಚಾಯಿತಿ ಹೆಸರುವಾಸಿ. ಹಾಗಾಗಿ ಈ ಜಿಲ್ಲೆ ಎಂಥ ಕಷ್ಟ ಸಂದರ್ಭ, ಸನ್ನಿವೇಶಗಳನ್ನು ತನ್ನ ಹೊಟ್ಟೆಯಲ್ಲಿ ಹಾಕಿಕೊಳ್ಳುತ್ತದೆ. ಕಾರಣ ಸಣ್ಣ ಪುಟ್ಟ ಅವ್ಯವಸ್ಥೆಯ ನಡುವೆಯೂ ಜ. 6ರಿಂದ 8ರ ವರೆಗೆ ಮೂರು ದಿನ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಯಶಸ್ಸು ಕಂಡಿದೆ. ಸಾಹಿತ್ಯ ಲೋಕಕ್ಕೊಂದು ಹೊಸ ಹೊಳವು ಕೊಟ್ಟಿದೆ.

ಭಾಷಾ ನೀತಿ, ಕನ್ನಡದಲ್ಲಿ ಆಡಳಿತ, ಕನ್ನಡದಲ್ಲೇ 5ನೇ ತರಗತಿವರೆಗೆ ಶಿಕ್ಷಣ ಹಾಗೂ ವೃತ್ತಿಪರ ಶಿಕ್ಷಣ ಗಡಿ ತಂಟೆಗೆ ತಕ್ಕ ಉತ್ತರ, ಸೌಹಾರ್ದತೆ, ಭಾತೖತ್ವಕ್ಕೊಂದು ಭಾವಸಾಗರವನ್ನು ಕಟ್ಟಿಕೊಟ್ಟಿತು. ಸಾಹಿತ್ಯ ಸಮ್ಮೇಳನದ ಸಂಭ್ರಮವನ್ನು ಜನಸ್ತೋಮ ಕಣ್​ತುಂಬಿಕೊಂಡರೆ, ಪ್ರಾಜ್ಞರು ಮಾತು ಮಂಥನ ನಡೆಸಿದರು. ಕನ್ನಡದಲ್ಲಿ ಕಾನೂನು ಶಿಕ್ಷಣ ಸೇರಿದಂತೆ ಹತ್ತಾರು ಹೊಸ ವಿಷಯ ಚರ್ಚೆಗೆ ಚಿಂತನ-ಮಂಥನದ ವೇದಿಕೆಗಳು ಸಾಕ್ಷಿಯಾದವು. ಹಲವು ಪ್ರಥಮಗಳನ್ನು ಸಮ್ಮೇಳನ ದಾಖಲಿಸಿತು.

ಮೂಲಸೌಕರ್ಯಕ್ಕೆ ಬರವಿಲ್ಲ: ಕುಡಿಯುವ ನೀರು, ಊಟಕ್ಕೇನೂ ಸಮಸ್ಯೆ ಇರಲಿಲ್ಲ. ನೋಂದಾಯಿತ ಪ್ರತಿನಿಧಿಗಳಿಗೆ ವಸತಿಗೆ ತುಸು ಸಮಸ್ಯೆ ಆಗಿತ್ತು. ಉಳಿದಂತೆ ಎಲ್ಲವೂ ಅಚ್ಚುಕಟ್ಟು, ಜನರಿಗೆ ಅಚ್ಚುಮೆಚ್ಚು. ನಾಡಿನ ಮೂಲೆ ಮೂಲೆಗಳಿಂದ ಜನ ಸಮ್ಮೇಳನಕ್ಕೆ ಸಾಕ್ಷಿಯಾದರು. ಗಡಿ ತಗಾದೆ ಸಂದರ್ಭದಲ್ಲಿ ಕನ್ನಡಿಗರು ತಮ್ಮ ಒಗ್ಗಟ್ಟ್ಟು ಪ್ರದರ್ಶಿಸಿ ಮಹಾರಾಷ್ಟ್ರಕ್ಕೊಂದು ಪರೋಕ್ಷ ಸಂದೇಶ ರವಾನಿಸಿದರು. ಸಾಹಿತ್ಯ ಚಟುವಟಿಕೆ ಮೂಲಕ ಹೀಗೂ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಬಹುದು ಎಂಬುದಕ್ಕೆ ಸಮ್ಮೇಳನ ದಾಖಲೆ ಆಯಿತು. ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಕ್ಕೆ ಬಂದವರು ಮೊದಲ ದಿನ ಇದ್ದು, ಎರಡು ಮತ್ತು ಮೂರನೇ ದಿನ ಕ್ಷೇತ್ರ ಪ್ರವಾಸ ತೆರಳುವುದು ಸಾಮಾನ್ಯ. ಆದರೆ, ಈ ಸಮ್ಮೇಳನಕ್ಕೆ ದೂರದೂರಿನಿಂದ ಬಂದ ಬಹುತೇಕರು ಮೂರೂ ದಿನ ಸಾಹಿತ್ಯದಲ್ಲಿ ಮಿಂದೆದ್ದದ್ದು ಅಚ್ಚರಿ ಮೂಡಿಸುವಂತಿತ್ತು.

ಸಮಯ ಪಾಲನೆಗೆ ಒತ್ತು: ಸಾಹಿತ್ಯ ಸಮ್ಮೇಳನದ ಪ್ರತಿಯೊಂದು ಗೋಷ್ಠಿಗೂ ಸಮಯ ನಿಗದಿ ಮಾಡಲಾಗಿತ್ತು. ಬಹುತೇಕ ಗೋಷ್ಠಿಗಳು ಸಮಯಕ್ಕೆ ಸರಿಯಾಗಿ ಕರಾರುವಾಕ್ಕಾಗಿ ನಡೆದವು. ಕಾರ್ಯಕಾರಿ ಸಮಿತಿ ಸಭೆ ಕಾರಣ ಕೊನೆಯದಿನದ ಗೋಷ್ಠಿಗಳು ತುಸು ತಡವಾಗಿ ಆರಂಭವಾದವು.

ಮಿಂಚಿದ ಮಹೇಶ ಜೋಶಿ: ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರು ಸೆಲೆಬ್ರಿಟಿ. ಆದರೆ, ಇಲ್ಲಿ ಕಸಾಪ ಅಧ್ಯಕ್ಷ ಮಹೇಶ ಜೋಶಿಯೇ ಸೆಲೆಬ್ರಿಟಿಯಾಗಿ ವಿಂಚಿದರು. ಹೆಜ್ಜೆ ಹೆಜ್ಜೆಗೂ ಜನ ಅವರ ಹಿಂದೆ ಮುಂದೆ ಸುತ್ತುತ್ತಿದ್ದರು. ಸೆಲ್ಪಿ ತೆಗೆದುಕೊಳ್ಳುತ್ತಿದ್ದರು.

ಐಕ್ಯತಾ ವೇದಿಕೆ: ಹಾವೇರಿಯ ಸಾಹಿತ್ಯ ಸಮ್ಮೇಳನ ನಿಜಕ್ಕೂ ಐಕ್ಯತಾ ವೇದಿಕೆಯಾಗಿ ಕಂಡುಬಂತು. ಕನಕದಾಸ, ಸಂತ ಶಿಶುನಾಳ ಷರೀಫ ಅವರಂಥವರ ನಾಡು ಹಾವೇರಿಯಲ್ಲಿ ಪಂಡಿತರು, ಹೋರಾಟಗಾರರು, ಕನ್ನಡಾಭಿಮಾನಿಗಳು, ಜಸಾಮಾನ್ಯರು ಒಟ್ಟಾಗಿ ಸೇರಿ ಐಕ್ಯತೆ ಪ್ರದರ್ಶಿಸಿದರು. ಚರ್ಚಾ ಗೋಷ್ಠಿಯಲ್ಲಿ ಎಲ್ಲಿಯೂ ವಾಗ್ವಾದ, ವಾಗ್ಯುದ್ಧ, ಆಕ್ರೋಶ, ಬಹಿರಂಗ ಅಸಮಾಧಾನಗಳಾಗಲಿ ಕಂಡು ಬರಲಿಲ್ಲ.

ಜ್ಞಾನದ ಜತೆಗೆ ಅನ್ನ ದಾಸೋಹ: ಜ್ಞಾನ ದಾಸೋಹದ ಜತೆಗೆ ಅನ್ನದಾಸೋಹವೂ ಜನರನ್ನು ತಣಿಸಿತು. ಅಕ್ಷರ ಜಾತ್ರೆ ಸಂತೆಯಾಗಿಯೂ ಗಮನ ಸೆಳೆಯಿತು. ಫಲಪುಷ್ಪ ಪ್ರದರ್ಶನವನ್ನು ಜನ ಸರತಿ ಸಾಲಿನಲ್ಲಿ ನಿಂತು ಕಣ್ ತುಂಬಿಕೊಂಡರು.

ಸರ್ಕಾರಕ್ಕೆ ಸಮ್ಮೇಳನದ ಪ್ರಮುಖ ಸಲಹೆಗಳು

  • ಸಮಗ್ರ ಕನ್ನಡ ಅಭಿವೃದ್ಧಿ ವಿಧೇಯಕ ತಕ್ಷಣ ಜಾರಿಯಾಗಬೇಕು.
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕ ಪಠ್ಯ ರಚಿಸಬೇಕು. ಇದಕ್ಕೆ ಪೂರಕವಾಗಿ ಪಠ್ಯಕ್ರಮ ಬದಲಾಯಿಸಬೇಕು.
  • ಕನ್ನಡ ಕಾನೂನು ಪ್ರಾಧಿಕಾರ ಸ್ಥಾಪಿಸಿ, ಅಧಿಕಾರ ಅನುದಾನ ಕೊಡಬೇಕು.
  • ಕನ್ನಡದಲ್ಲಿ ಉನ್ನತ ಶಿಕ್ಷಣ ಅನಿವಾರ್ಯವಾಗಬೇಕು.
  • ಸರ್ವರಿಗೂ ಕನ್ನಡ ಭಾಷೆಯಲ್ಲಿ ಕಾನೂನು ಶಿಕ್ಷಣ ಸಿಗಬೇಕು.
  • 5ನೇ ತರಗತಿಯವರೆಗೆ ಕನ್ನಡ ಕಡ್ಡಾಯವಾಗಬೇಕು.
  • ಕನ್ನಡ ಜ್ಞಾನ-ವಿಜ್ಞಾನ ಕಾರ್ಯಪಡೆ ರಚಿಸಬೇಕು.
  • ಮಳೆ ನೀರು ಕೊಯ್ಲು ಇಂದಿನ ತುರ್ತು ಅಗತ್ಯ. ಸರ್ಕಾರ ಇನ್ನಷ್ಟು ಆದ್ಯತೆ ಕೊಡಬೇಕು.
  • ಭಾಷೆ, ಸಂಸ್ಕೃತಿ, ಪರಂಪರೆ ಆಧಾರದಲ್ಲಿ ರಾಜ್ಯಗಳ ಪುನರ್ ವಿಂಗಡಣೆ ಚಿಂತನೆ ಅವಶ್ಯ.
  • ಶಾಲೆಗಳನ್ನು ಆರಂಭಿಸಲು ಇರುವ ಷರತ್ತುಗಳನ್ನು ಸರ್ಕಾರ ಕೈಬಿಡಬೇಕು.
  • ಎಲ್ಲ ಅಭಿವೖದ್ಧಿ ಮಾದರಿಯಲ್ಲಿ ಮಹಿಳೆಯರು ಒಳಗೊಳ್ಳುವ ಕಾರ್ಯಕ್ರಮ ರೂಪಿಸಬೇಕು.
  • ರಾಜ್ಯ ಸರ್ಕಾರ ಅನಿವಾಸಿ ಭಾರತೀಯರಿಗೆ ಒಂದು ಎಂಎಲ್​ಸಿ ಸ್ಥಾನ ಕೊಡಬೇಕು.
  • ಪಿಯುಸಿ ವರೆಗೆ ಕನ್ನಡ ಶಿಕ್ಷಣ ಕಡ್ಡಾಯವಾಗಬೇಕು.
  • ಕನ್ನಡ ಮಾಧ್ಯಮ ಪದವೀಧರರಿಗೆ ಸರ್ಕಾರಿ ಮತ್ತು ಗುತ್ತಿಗೆ ನೌಕರಿಗಳಲ್ಲಿ ಶೇ. 25 ಮೀಸಲಾತಿ ನೀಡಬೇಕು.
  • ಜಾನಪದ ಕಲೆಗಳನ್ನು ವರ್ಗೀಕರಣ ಮಾಡಿ ಪ್ರೋತ್ಸಾಹಿಸಿ, ಬೆಳೆಸಬೇಕು.