ಸರಗೂರು: ಪಟ್ಟಣದ ಸಂತೇಮಾಳ, ಎಸ್‌ಬಿಐ ಹಾಗೂ ಎಂಟನೇ ವಾರ್ಡ್‌ನಲ್ಲಿ ಇರುವ ಸಾರ್ವಜನಿಕರ ಶೌಚಗೃಹ ನಿರ್ವಹಣೆ ಕೊರತೆಯಿಂದ ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿದೆ.
ತಾಲೂಕು ಕೇಂದ್ರವಾದ ಸರಗೂರು ಪಟ್ಟಣದಲ್ಲಿ ಸಾರ್ವಜನಿಕ ಶೌಚಗೃಹಗಳ ನಿರ್ವಹಣೆ ಕೊರತೆಯಿಂದ ಜನರು ನಿಸರ್ಗ ಕರೆಗೆ ಜಾಗ ಹುಡುಕಬೇಕಿದೆ. ಸಿಗದಿದ್ದರೆ ಬಯಲಲ್ಲೇ ವಿಸರ್ಜನೆ ಮಾಡುವ ಪರಿಸ್ಥಿತಿಯೂ ಇದೆ.
2 ಶೌಚಗೃಹಗಳನ್ನು ನಿರ್ಮಾಣ ಮಾಡಿ ಹಲವು ತಿಂಗಳುಗಳೇ ಕಳೆದಿವೆ. ಆದರೆ ನೀರು ಪೂರೈಕೆಯಾಗದೆ ಇರುವುದರಿಂದ ಉಪಯೋಗಕ್ಕೆ ಬಾರದಂತಾಗಿದೆ. ನೀರಿನ ಸಂಪರ್ಕ ಸ್ಥಗಿತವಾಗಿ ವರ್ಷಗಳೇ ಕಳೆದಿದೆ ಹಾಗೂ ಗೋಡೆಗಳೆಲ್ಲಾ ಬಿರುಕು ಬಿಟ್ಟಿವೆ.
ಪಟ್ಟಣ ಪಂಚಾಯಿತಿ ವತಿಯಿಂದ ಹಲವು ವರ್ಷಗಳ ಹಿಂದೆ ಸಂತೆ ಮಾಸ್ತಮ್ಮ ದೇವಸ್ಥಾನದ ಪಕ್ಕದ ಸಂತೇಮಾಳದ ಬಳಿ ಶೌಚಗೃಹ ನಿರ್ಮಾಣ ಮಾಡಲಾಗಿದೆ. ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಾಗಿದೆ. ಒಂದನೇ ಮುಖ್ಯ ರಸ್ತೆಯ ಎಸ್‌ಬಿಐ ಬ್ಯಾಂಕ್ ಹತ್ತಿರ ಹಾಗೂ 8ನೇ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ಉಪಯೋಗಕ್ಕೆ ಚಾಲನೆ ನೀಡದೆ ಹಾಗೆಯೇ ಬಿಡಲಾಗಿದೆ.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶೌಚಗೃಹ ಇರುವುದು ಬಿಟ್ಟರೆ ಇನ್ನೂ ಯಾವುದೇ ಕಡೆ ಇಲ್ಲ. ಕ್ರೀಡಾಂಗಣ, ತಹಸೀಲ್ದಾರ್ ಕಚೇರಿ, ಎಪಿಎಂಸಿ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿನ ಗೋಡೆಗಳು, ಕಾಂಪೌಂಡ್‌ಗಳಿಗೆ ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆಯಿಂದ ಕೂಡಿದೆ. ಇದರಿಂದ ಅನೇಕ ಕಟ್ಟಡಗಳ ಮಾಲೀಕರು, ವರ್ತಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪ್ರಶ್ನಿಸಲು ಹೋದವರ ಜತೆಗೆ ವಾಗ್ವಾದ ನಡೆಸುತ್ತಾರೆ.
ಸಾರ್ವಜನಿಕ ಶೌಚಗೃಹಗಳು ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಿರ್ಮಾಣ ಆಗಿಲ್ಲ. ಇದರಿಂದ ಮಹಿಳೆಯರು ತೊಂದರೆ ಅನುಭವಿಸುವ ಪರಿಸ್ಥಿತಿ ಇದೆ. ಇನ್ನು ಬೀದಿ ಬದಿಯ ಮಹಿಳಾ ವ್ಯಾಪಾರಿಗಳು, ಅಂಗಡಿ, ಮುಂಗಟ್ಟುಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಪಟ್ಟಣಕ್ಕೆ ಬಂದು ಹೋಗುವ ಮಹಿಳೆಯರಿಗೆ ಕಷ್ಟ ತಪ್ಪಿದ್ದಲ್ಲ.
ಸಂತೇಮಾಳದಲ್ಲಿರುವ ಶೌಚಗೃಹ ನಿರ್ವಹಣೆ ಕೊರತೆಯಿಂದ ಅಕ್ಕಪಕ್ಕದಲ್ಲಿರುವ ಅಂಗನವಾಡಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಕ್ಕಪಕ್ಕದ ಮಾಂಸದ ಅಂಗಡಿಗಳಿಂದ ತ್ಯಾಜ್ಯ, ಕಸಕಡ್ಡಿ, ಪ್ಲಾಸ್ಟಿಕ್, ಕೋಳಿ ರೆಕ್ಕೆ ಪುಕ್ಕಗಳನ್ನು ಶೌಚಗೃಹದ ಬಳಿ ಹಾಕುತ್ತಿದ್ದಾರೆ. ಜತೆಗೆ ಪಕ್ಕದಲ್ಲೇ ಹಾದು ಹೋಗಿರುವ ಚರಂಡಿಗೆ ತ್ಯಾಜ್ಯಗಳು ಸೇರಿ ರಾಡಿ ನೀರು ಸರಾಗವಾಗಿ ಹರಿದು ಹೋಗಲು ಸಮಸ್ಯೆಯಾಗಿದೆ. ಇದರಿಂದ ಒಂದೇ ಕಡೆ ಮಡುಗಟ್ಟಿ ದುರ್ವಾಸನೆ ಬೀರುತ್ತಿದ್ದು, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಾಡಾಗಿದೆ ಎನ್ನುತ್ತಾರೆ ನಿವಾಸಿ ಆರ್ಯ ಮಹೇಶ್.
ಪಟ್ಟಣದಲ್ಲಿ ಹೊಸದಾಗಿ ಎರಡು ಸ್ಥಳದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಶೌಚಗೃಹಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದ ಕಾರಣ ಅವುಗಳಿಗೆ ಬೀಗ ಜಡಿದಿದ್ದಾರೆ. ಇಲ್ಲಿಗೆ ಅಗತ್ಯ ಸೌಕರ್ಯಗಳನ್ನು ನೀಡಿ ಜನರ ಬಳಕೆ ನೀಡುವಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸಿದ್ದಾರೆ.
ಸರಗೂರು ಪಟ್ಟಣದ ಸಂತೇಮಾಳದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಶೌಚಗೃಹದ ನೆಲಹಾಸು ಕುಸಿದಿದೆ. ಬೇಸನ್ ಹಾಗೂ ಪೈಪ್‌ಲೈನ್ ಒಡೆದು ಹೋಗಿದೆ. ಹೀಗಿದ್ದರೂ ಸಾರ್ವಜನಿಕರು ಅದನ್ನೇ ಬಳಕೆ ಮಾಡಿ ಅನೈರ್ಮಲ್ಯಕ್ಕೆ ಕಾರಣವಾಗಿದ್ದಾರೆ. ಇದರಿಂದ ವಾತಾವರಣ ಗಬ್ಬುನಾರುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ಹಾಗೂ ಸಾರ್ವಜನಿಕರು ಅನೈರ್ಮಲ್ಯದ ನಡುವೆಯೇ ದಿನ ದೂಡುವಂತಾಗಿದೆ. ಆರ್ಯ ಮಹೇಶ್ ನಿವಾಸಿ, ಸರಗೂರು ಎಸ್‌ಬಿಐ ಬಳಿ ಹಾಗೂ 8ನೇ ವಾರ್ಡ್‌ನ ಸಾರ್ವಜನಿಕರ ಶೌಚಗೃಹಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕ ಒದಗಿಸದೆ ಇರುವುದರಿಂದ ಸಾರ್ವಜನಿಕರ ಬಳಕೆಗೆ ಬಾರದೆ ನಿರುಪಯುಕ್ತವಾಗಿದೆ. ಸುತ್ತಲೂ ಗಿಡಗಂಟಿ ಬೆಳೆದು ಹಾವು, ಚೇಳುಗಳ ಆವಾಸ ಸ್ಥಾನವಾಗಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷೃ ವಹಿಸಿರುವುದರಿಂದ ಬಡಾವಣೆಯ ರಸ್ತೆ ಬದಿಯಲ್ಲಿ ಅನೈರ್ಮಲ್ಯ ಉಂಟಾಗಿದೆ. ಸಣ್ಣಸ್ವಾಮಿ ದಸಂಸ ಮುಖಂಡ, ಸರಗೂರು ಶೌಚಗೃಹಗಳ ಕಾಮಗಾರಿ ಮುಗಿದಿದೆ. ಹರಾಜು ಪ್ರಕ್ರಿಯೆ ನಡೆಸಲು ಮೇಲಧಿಕಾರಿಗಳಿಗೆ ಕಡತ ರವಾನಿಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಸೆಸ್ಕ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಶಾಸಕರು ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ನೀಡಲಾಗುವುದು. ಎಸ್.ಕೆ.ಸಂತೋಷ್‌ಕುಮಾರ್ ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ, ಸರಗೂರು