ನ್ಯೂಸ್

ಗದಗದಲ್ಲಿ ಪುತ್ರನ ಹೆಸರಿನ ಟ್ರಸ್ಟ್ ಗೆ ನಿವೇಶನ ಮಂಜೂರು ಮಾಡಿಸಿದ ಸಿಎಂ !

ಬೆಂಗಳೂರು:  ಗದಗ ನಗರದಲ್ಲಿ ಈ ಹಿಂದೆ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೆ 22 ಗುಂಟೆ ಜಮೀನು ಕೋರಲಾಗಿತ್ತು. ಆದರೆ ಸಚಿವ ಎಚ್.ಕೆ.ಪಾಟೀಲ ಅವರು ಡಿಸಿಗೆ ಪತ್ರ ಬರೆದು ಕಿತ್ತೂರು ಚನ್ನಮ್ಮ ಸಮುದಾಯ ಭವನಕ್ಕೆ ಆಜಮೀನು ಹಸ್ತಾಂತರಿಸುವಂತೆ ಸೂಚಿಸಿದರು.

ಇದರಿಂದ ಕಂಗಾಲಾದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ನ ಮುಖ್ಯಸ್ಥ ರಾಮಕೃಷ್ಣ ರೊಳ್ಳಿ ಎನ್ನುವವರು ಸಿಎಂ ಸಿದ್ದರಾಮಯ್ಯ ಅಹವಾಲು ತೋಡಿಕೊಂಡರು. ಕೂಡಲೇ ಗದಗ ಡಿಸಿಗೆ ಸಿಎಂ ಕರೆ ಮಾಡಿ ಆ 22 ಗುಂಟೆ ನಿವೇಶನ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಗೇ ಕೊಡಬೇಕೆಂದು ತಾಕೀತು ಮಾಡಿದರು.

ಮಹಿಳೆ ಅಳಲು

 ಸೀಗೇಹಳ್ಳಿಗೇಟ್ ನಿವಾಸಿ ಸುನಿತ ಅವರ ದೂರು. ಆರೋಗ್ಯ ಹದಗೆಟ್ಟು ವಿಕ್ಟೋರಿಯಾ ಆಸ್ಪತ್ರೆಗೆ ಅ.20 ರಂದು ಹೋಗಿದ್ದೆ. ರಾತ್ರಿಯಿಡೀ ಬೇಧಿ ಆಗಿದ್ದರಿಂದ ನನ್ನ ಬಟ್ಟೆ ಗಲೀಜಾಗಿತ್ತು. ಇದಕ್ಕೆ ಆಸ್ಪತ್ರೆ ಸಿಬ್ಬಂದಿ ಮಧ್ಯರಾತ್ರಿಯಲ್ಲೇ ಆಸ್ಪತ್ರೆಯಿಂದ ತೆರಳುವಂತೆ ಬೆದರಿಸಿದರು. ಆಯಾಸಗೊಂಡಿದ್ದ ನನಗೆ ಗ್ಲೂಕೋಸ್ ಕೂಡ ಹಾಕದೆ ಕೆಟ್ಟದಾಗಿ ವರ್ತಿಸಿದರು ಎಂದು ದೂರಿದರು.

ಮುಖ್ಯಮಂತ್ರಿಗಳು ಸ್ಥಳದಲ್ಲೇ ಇದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್ ಅವರನ್ನು ಕರೆದು ಸಂಬಂಧಪಟ್ಟವರಿಂದ ವಿವರಣೆ ಕೇಳುವಂತೆ ಸೂಚಿಸಿದರು.

ಬಳಿಕ ತಮ್ಮ ಎರಡನೇ ದೂರನ್ನು ಮುಂದಿಟ್ಟ ಸುನಿತಾ ಅವರು, ಮನೆಯ ಮಾಲೀಕರು ಲೀಸ್ ಹಣ ವಾಪಾಸ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಸುನಿತಾ ಅವರ ಮನೆ ಮಾಲೀಕರ ವಿವರ ಪಡೆದುಕೊಂಡು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.