ನ್ಯೂಸ್

ರಾಜ - ಸಾಮಂತರ ಘೋರ ಸಮರದಲ್ಲಿ ವಿವಿಧ ಶಸ್ತ್ರಗಳ ಆರ್ಭಟ

ಶ್ರೀವಸಿಷ್ಠರು ಮಂಡಪೋಪಾಖ್ಯಾನವನ್ನು ವಿಸ್ತಾರವಾಗಿ ಹೇಳುತ್ತಿದ್ದಾರೆ. ವಿಶ್ವಾಮಿತ್ರ, ವಾಮದೇವಾದಿ ಋಷಿಗಳು ಸೇರಿರುವ ದಶರಥ ಮಹಾರಾಜನ ಆಖ್ಯಾನ ಮಂಟಪದಲ್ಲಿ ಶ್ರೀರಾಮನನ್ನು ಉದ್ದೇಶಿಸಿ ಹೇಳುತ್ತಿದ್ದಾರೆ. ಭಗವದ್ಗೀತೆಯನ್ನು ಅರ್ಜುನನನ್ನು ನಿಮಿತ್ತೀಕರಿಸಿ ಹೇಳಿದಂತೆ, ಶ್ರೀರಾಮನನ್ನು ನಿಮಿತ್ತೀಕರಿಸಿ ನಮಗೆಲ್ಲಾ ಅವರು ಉಪದೇಶ ನೀಡುತ್ತಿದ್ದಾರೆ ಎಂಬುದಾಗಿ ಚಿಂತನೆ ಮಾಡಿಕೊಳ್ಳಬೇಕು. ಜಗತ್ತು ಪರಮಾತ್ಮನ ತೋರಿಕೆ ಮಾತ್ರ. ಇದನ್ನು ಸಾಬೀತುಪಡಿಸಲು ಈ ಆಖ್ಯಾನವನ್ನು ಹೇಳಿದ್ದಾರೆ. ಪರಮಾತ್ಮನಲ್ಲಿ ಸಮಾಧಿಸ್ಥಿತಿಯನ್ನು ಪಡೆದ ವ್ಯಕ್ತಿಗೆ ಜಗತ್ತು ಪರಮಾತ್ಮನ ತೋರಿಕೆ ಮಾತ್ರ ಎಂಬುದು ಅನುಭವಕ್ಕೆ ಬರುತ್ತದೆ. ಶ್ರೀದೇವಿಯ ಕೃಪೆಯಿಂದ ಸಮಾಧಿಸ್ಥಿತಿಯನ್ನು ಪಡೆದ ಲೀಲಾಮಹಾರಾಣಿಯು ಇದನ್ನು ಈಗ ಅನುಭವದಿಂದ ಕಂಡುಕೊಂಡಿದ್ದಾಳೆ. ಇಲ್ಲಿಗೇ ಕಥೆಯನ್ನು ಮುಗಿಸದೆ ಶ್ರೀ ವಸಿಷ್ಠರು ಮುಂದುವರಿಸಿದ್ದಾರೆ. ಏಕೆಂದರೆ ಅವರಿಗೆ ಸಾಮಾನ್ಯ ಜನರಿಗೆ ವಿಶ್ವಾಸ ಬರಲು ಇಷ್ಟು ಹೇಳಿದರೆ ಸಾಲದು ಎಂಬ ಅಭಿಪ್ರಾಯವಿದೆ.

ಲೀಲಾಮಹಾರಾಣಿಯ ಪತಿಯಾದ ಪದ್ಮಮಹಾರಾಜನ ಮುಂದಿನ ಜನ್ಮವೇ ವಿದೂರಥನೆಂಬ ಚಕ್ರವರ್ತಿ. ಆತನ ರಾಜಧಾನಿಯಲ್ಲಿ ಅವನ ಸಾಮಂತರಲ್ಲೇ ಕೆಲವರು ಯುದ್ಧಕ್ಕೆ ಬಂದಿದ್ದರಿಂದ ಭೀಕರ ಯುದ್ಧ ನಡೆಯುತ್ತಿದೆ. ಲೀಲಾಮಹಾರಾಣಿಯು ಶ್ರೀದೇವಿಯ ಜೊತೆಯಲ್ಲಿ ಸೂಕ್ಷ್ಮರೂಪದಲ್ಲಿದ್ದುಕೊಂಡು ಆ ಯುದ್ಧವನ್ನು ನೋಡುತ್ತಿದ್ದಾಳೆ.

‘ಶ್ರೀರಾಮ! ಆನೆಯ ಮೇಲೆ ಕುಳಿತು ಯುದ್ಧ ಮಾಡುತ್ತಿರುವವರು ತಮ್ಮ ಕೈಯಲ್ಲಿರುವ ಅಂಕುಶಗಳಿಂದ ಎದುರಿಗೆ ಬರುತ್ತಿರುವ ಶೂರ ಸೈನಿಕರನ್ನು ಗಾಯಗೊಳಿಸುತ್ತಿದ್ದರೂ ಹೆದರದೆ ಆ ಶೂರ ಸೈನಿಕರುಗಳ ಮೇಲೆ ಆಕ್ರಮಣ ಮಾಡಿ, ಆನೆಗಳನ್ನು ಚದುರಿಸುತ್ತಿದ್ದರು. ಅನೇಕ ಪರಶು (ಕೊಡಲಿ)ಗಳ ಆಕ್ರಮಣದಿಂದ ಮದವೇರಿದ ಆನೆಗಳು ಬೀಳುತ್ತಿದ್ದವು. ಇನ್ನೊಂದೆಡೆ ಪಾಶ ಎಂಬ ಆಯುಧವನ್ನು ಧರಿಸಿರುವ ಸೈನಿಕರು ತೀವ್ರವಾದ ಪಾಶಯುದ್ಧದಲ್ಲಿ ತೊಡಗಿದ್ದರು. ಅದರಲ್ಲಿ ಪರಿಣತರಾದ ವೀರರು ಎಲ್ಲ ರೀತಿಯಿಂದಲೂ ಪ್ರಾಣದ್ಯೂತವನ್ನು (ಪ್ರಾಣವನ್ನೇ ಪಣವಾಗಿಟ್ಟು ಯುದ್ಧವೆಂಬ ಜೂಜನ್ನು) ಆಡುತ್ತಿದ್ದಂತೆ ಯುದ್ಧ ಮಾಡುತ್ತಿದ್ದರು. ಕಠಾರಿಯಿಂದ ದೇಹದ ಮಧ್ಯಭಾಗ ತಿವಿಯಲ್ಪಟ್ಟಿದ್ದರಿಂದ ಹೃದಯಕಮಲಗಳು ಹೊರಬಂದು ಅನೇಕ ಜನರು ಶವಗಳಾಗಿ ಬೀಳುತ್ತಿದ್ದರು. ಮತ್ತೆ ಕೆಲವೆಡೆ ತ್ರಿಶೂಲಧಾರಿಗಳಾದ ಶೂರರೇ ಹೆಚ್ಚಿಗೆ ಇರುವ ಕಡೆ ಆ ತ್ರಿಶೂಲಧಾರಿಗಳು ತ್ರಿಶೂಲಗಳನ್ನು ಸುತ್ತಲೂ ತಿರುಗಿಸುತ್ತಾ ಉನ್ಮತ್ತರಾದವರಂತೆ ನರ್ತಿಸುತ್ತಿದ್ದರು.’

‘ಅತ್ತ ಇನ್ನೊಂದೆಡೆ ಓಡಿಬರುತ್ತಿರುವ ಧನುರ್ಧಾರೀ ಸೈನಿಕರು ಬಿಲ್ಲಿನಿಂದ ಠೇಂಕಾರದ ಧ್ವನಿಗೈಯುತ್ತಿದ್ದರು. ‘ಭಿಂದಿಪಾಲ’ ಎಂಬ ಆಯುಧವನ್ನು ಹಿಡಿದಿರುವ ಸೈನಿಕರು ತಮ್ಮ ಕೇಶಗಳನ್ನು ಹರಡಿಕೊಂಡು, ಅಹಂಕಾರದಿಂದ ಕೂಡಿದ ಹುಂಕಾರಗರ್ಜನೆಯೊಂದಿಗೆ ಮುಂದೆ ಬರುತ್ತಿರುವುದನ್ನು ನೋಡಿದರೆ, ನರಸಿಂಹನ ವೇಷ ಧರಿಸಿ ರುವ ನಟರಂತೆ ಕಂಡುಬರುತ್ತಿತ್ತು.’

‘ಮಲ್ಲಯುದ್ಧದಲ್ಲಿ ನಿಪುಣರಾದ ಸೈನಿಕರು ವಜ್ರಾಯುಧದಿಂದ ಶತ್ರು ಸೈನಿಕರು ಪುಡಿ ಯಾಗುವಂತೆ ಆಕ್ರಮಣ ಮಾಡುತ್ತಿದ್ದರು. ಅದರಿಂದ ಅನೇಕ ಸದ್​ಭಟರು ಸಂಕಟಕ್ಕೆ ಸಿಲುಕಿಕೊಳ್ಳುತ್ತಿದ್ದರು. ಅಲ್ಲದೇ ತೀವ್ರವಾದ ‘ಪಟ್ಟಿಶ’ ಎಂಬ ಆಯುಧವು ಗಿಡುಗ ಪಕ್ಷಿಯಂತೆ ಆಕಾಶದಷ್ಟು ಎತ್ತರಕ್ಕೆ ಹಾರಿ ಬಂದು ಶತ್ರುಸೈನಿಕರ ಮೇಲೆ ಬೀಳುತ್ತಿತ್ತು.

‘ಅಂಕುಶವೆಂಬ ಆಯು ಧವು ಶೂರಸೈನಿಕರನ್ನು, ಸೈನಿಕ ಪ್ರಮುಖರನ್ನು, ರಥಗಳನ್ನು, ಆನೆಗಳನ್ನು, ಕುದುರೆಗಳನ್ನು ಮತ್ತು ರಥದ ಧ್ವಜಗಳನ್ನು ಸೆಳೆದು ಬೀಳಿಸುತ್ತಿದ್ದವು. ಹಲಾಯುಧ (ನೇಗಿಲಿನಂತಹ ಆಯುಧ) ಗಳನ್ನು ಧರಿಸಿರುವ ಸೈನಿಕರ ತೀವ್ರ ಕಾಳಗ ಇನ್ನೊಂದೆಡೆ ನಡೆಯುತ್ತಿತ್ತು. ಹಲಾಯುಧದ ಆಕ್ರಮಣದಿಂದ ಅನೇಕರ ಶರೀರದ ಅಂಗಗಳು ಕತ್ತರಿಸಲ್ಪಡುತ್ತಿದ್ದವು. ಅದನ್ನು ಲೆಕ್ಕಿಸದೇ ‘ಕುಲಾಚಲ’ದಂತೆ ಅಚಲವಾಗಿ ಮತ್ತು ತಲೆ ಎತ್ತಿಕೊಂಡು ಧೈರ್ಯವಾಗಿ ಇದ್ದುಕೊಂಡು ಯುದ್ಧವನ್ನು ಮುಂದುವರಿಸುತ್ತಿರುವುದು ಕಂಡುಬರುತ್ತಿತ್ತು.’

‘ಯುದ್ಧರಂಗದ ಸುತ್ತಲೂ ಕಣ್ಣು ಹಾಯಿಸಿದರೆ, ಸುತ್ತಲಿನ ವನದಲ್ಲಿರುವ ಮರ-ಗಿಡಗಳನ್ನು ಕಿತ್ತು, ಭೂಮಿಯನ್ನು ಸಮತಟ್ಟು ಮಾಡಿ ಇಟ್ಟಿದ್ದು ಕಂಡುಬರುತ್ತಿತ್ತು. ತಾಳೆ ಮರದಂತೆ ಎತ್ತರವಾದ ದೇಹವುಳ್ಳ (ದೃಢಕಾಯರಾದ) ಪುರುಷರು ಕುದ್ದಾಲ (ಗುದ್ದಲಿ) ವನ್ನು ಎತ್ತಿದ ಕೈಗಳಿಂದ ಹಿಡಿದು ಪ್ರಯೋಗಿಸಿದ್ದರಿಂದ ಆ ಮರ-ಗಿಡಗಳನ್ನು ಕಿತ್ತು, ನೆಲವನ್ನು ಸರಿ ಮಾಡಲು ಸಾಧ್ಯವಾಗಿತ್ತು. ಯುದ್ಧದ ಸಂಚಾರಕ್ಕಾಗಿ (ಯುದ್ಧರಂಗಕ್ಕೆ ರಥಗಳನ್ನು ಒಯ್ಯಲು ಮತ್ತು ಗಾಡಿಗಳ ಮೂಲಕ ಶಸ್ತ್ರಗಳನ್ನು ಒಯ್ಯಲು) ಮರ-ಗಿಡಗಳನ್ನಷ್ಟೆ ಅಲ್ಲ, ಅಲ್ಲಿ ಓಡಾಡುವ ಮನುಷ್ಯರನ್ನು ಮತ್ತು ಅಲ್ಲಿರುವ ಶಿಲೆಗಳನ್ನು ದೂರಕ್ಕೆ ಕಳುಹಿಸಲಾಗಿತ್ತು. ಇಷುಪ್ರಕ್ಷೇಪದಷ್ಟು ದೂರದ ಎರಡುಪಟ್ಟು ದೂರದಲ್ಲಿ ಸಂಚರಿಸಲು ಜನರನ್ನು ದೂರ ಕಳುಹಿಸಲಾಗಿತ್ತು ಮತ್ತು ಅಲ್ಲಿರುವ ಶಿಲಾವಲಯಗಳನ್ನು ಕತ್ತರಿಸಿ ಯುದ್ಧ ಸಂಚಾರಕ್ಕೆ ಅನುವು ಮಾಡಿ ಇಟ್ಟದ್ದು ಕಂಡುಬರುತ್ತಿತ್ತು. (ಧನುಸ್ಸಿನಿಂದ ಹೊರಟ ಬಾಣವು ತಡೆಯಿಲ್ಲದೆ ಹೋಗಿ ಭೂಮಿಯ ಮೇಲೆ ಬೀಳುವಷ್ಟು ದೂರವನ್ನು ‘ಇಷುಪ್ರಕ್ಷೇಪ’ ಎಂದು ಕರೆಯುತ್ತಾರೆ. ಇಲ್ಲಿ ಎರಡು ಇಷುಪ್ರಕ್ಷೇಪದಷ್ಟು ದೂರದವರೆಗೆ ಯುದ್ಧ ಸಂಚಾರಕ್ಕೋಸ್ಕರ ಮರ-ಗಿಡಗಳನ್ನು ಮತ್ತು ಶಿಲೆಗಳನ್ನು ತೆಗೆದು ಸ್ವಚ್ಛಮಾಡಲಾಗಿತ್ತು. ಅಲ್ಲಿ ಸೈನಿಕರಲ್ಲದ ಜನಸಾಮಾನ್ಯರ ಓಡಾಟವನ್ನು ನಿಷೇಧಿಸಲಾಗಿತ್ತು.)’

‘ಶರೀರದ ಎರಡು ಪಾರ್ಶ್ವಗಳಲ್ಲಿಯೂ ಗರಗಸೆಗಳನ್ನು ಕಟ್ಟಿದ ಆನೆಗಳು ಮದಗಜಗಳ ಸಮೂಹದಲ್ಲಿ ನುಗ್ಗಿದ್ದರಿಂದ ಮದಗಜಗಳು ಸೀಳಲ್ಪಡುತ್ತಿದ್ದವು. ಯುದ್ಧವೆಂಬ ಉಲೂಖಲ (ವರಳು) ದಲ್ಲಿ ಜನಗಳೆಂಬ ಅಕ್ಕಿಗಳನ್ನು ಪುಡಿಪುಡಿ ಮಾಡುತ್ತಿರಲು, ಮುಸಲವೋ ಎಂಬಂತಿರುವ ಮುಸಲಯುದ್ಧ (ಮುಸಲವೆಂಬ ಆಯುಧದಿಂದ ಯುದ್ಧ) ಅಲ್ಲಿ ನಡೆಯುತ್ತಿತ್ತು.