ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಶಾಸಕರ ಮತ್ತು ಸಚಿವರ ನಡುವಿನ ಅಂತರ ತಗ್ಗಿಸುವ ಸಲುವಾಗಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸಿದ ಮುಖಾಮುಖಿ ಸಭೆ ಅಂತ್ಯವಾಗಿದೆ. ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಸ್ವಪಕ್ಷೀಯ ಶಾಸಕರನ್ನು ಕರೆದು ಅವರ ಬೇಡಿಕೆಗಳ ಪಟ್ಟಿ ಮಾಡಿ ಸಚಿವರ ಮುಂದಿಟ್ಟು ಪರಿಹರಿಸುವಂತೆ ಸುರ್ಜೇವಾಲಾ ಕಟ್ಟಾಜ್ಞೆ ಮಾಡಿದ್ದಾರೆ. ಆದರೆ, ಎಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬುದು ಕೌತುಕವಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ 3ನೇ ಸುತ್ತಿನ ಮೂರನೇ ದಿನದ ಮುಖಾಮುಖಿ ಸಭೆ ಕರೆದ ಸುರ್ಜೇವಾಲಾ ಮುಂದೆ ಹಿರಿಯ ಸಚಿವರಾದ ಈಶ್ವರ ಖಂಡ್ರೆ, ರಾಮಲಿಂಗಾ ರೆಡ್ಡಿ, ಕೃಷ್ಣ ಬೈರೇಗೌಡ, ಕೆ.ಜೆ. ಜಾರ್ಜ್, ಎನ್. ಚೆಲುವರಾಯಸ್ವಾಮಿ, ಡಾ. ಜಿ. ಪರಮೇಶ್ವರ್ ಮತ್ತು ಎಚ್.ಕೆ. ಪಾಟೀಲ್ ಸೇರಿ ಒಟ್ಟಾರೆ 21 ಸಚಿವರು ಒನ್ ಟು ಒನ್ ಸಭೆಯಲ್ಲಿ ಭಾಗವಹಿಸಿದ್ದರು.
ಈ ಮೊದಲು ಶಾಸಕರಿಂದ ಪಡೆದಿದ್ದ ಮನವಿ ಪತ್ರ ಮತ್ತು ದೂರುಗಳ ಪಟ್ಟಿಯನ್ನು ಆಯಾ ಸಚಿವರ ಮುಂದಿಟ್ಟು ಸರ್ಜೇವಾಲಾ ಚರ್ಚೆ ನಡೆಸಿದ್ದಾರೆ. ಕೆಲ ಶಾಸಕರು ತಮ್ಮ ಕ್ಷೇತ್ರಕ್ಕೆ ಹೊಸ ಯೋಜನೆ ಮಂಜೂರು ಮಾಡುವಂತೆ ಮನವಿ ಮಾಡಿರುವ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಸಚಿವರು, ಸರ್ಕಾರದಲ್ಲಿ ಹಣಕಾಸು ಕೊರತೆ ಇದೆ. ಮುಂದಿನ ದಿನಗಳಲ್ಲಿ ಯೋಜನೆಗೆ ಬೇಕಾದ ಎಲ್ಲ ಆರ್ಥಿಕ ಸಹಾಯ ಮಾಡುವುದಾಗಿ ಮತ್ತು ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಒಂದು ಹಂತದಲ್ಲಿ ಬಹುತೇಕ ಶಾಸಕರ ಹೊಸ ಯೋಜನೆಗಳನ್ನು ಸದ್ಯಕ್ಕೆ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಸಮಜಾಯಿಷಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಉಳಿದಂತೆ ಶಾಸಕರ ೆನ್ ಕರೆಗೆ ಸ್ಪಂದಿಸುವುದು ಭೇಟಿಗೆ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ವರ್ಗಾವಣೆ ಸಮಯದಲ್ಲಿ ಸ್ಥಳೀಯ ಶಾಸಕರ ಮಾತಿಗೆ ಮನ್ನಣೆ ಕೊಡುವುದಾಗಿ ಸುರ್ಜೇವಾಲಾ ಮುಂದೆ ಸಚಿವರು ಪ್ರಮಾಣ ಮಾಡಿದ್ದಾರೆ. ಇದರ ಪ್ರತಿಲದ ನಿರೀಕ್ಷೆಯಲ್ಲಿ ಶಾಸಕರು ಇದ್ದು, ಮುಂದಿನ ದಿನಗಳಲ್ಲಿ ಎಷ್ಟು ಪರಿಹಾರ ಸಿಗಲಿದೆ ಎಂಬುದು ಕಾದು ನೋಡಬೇಕಾಗಿದೆ.
ಶಾಸಕರೊಂದಿಗೆ ಸುರ್ಜೇವಾಲಾ ಮುಖಾಮುಖಿ ಭೇಟಿಗೆ ಆಂತರಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಭೆಗೆ ಗೈರಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವರ ಪುತ್ರ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ, ಸಹಜವಾಗಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಜತೆಗೆ ಸಭೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿ ಸುರ್ಜೇವಾಲಾ ಅಹವಾಲು ಸ್ವೀಕಾರ ಮಾಡುತ್ತಿದ್ದಾರೆ. ನನ್ನ ತಂದೆ, ತಾಯಿ ವಿದೇಶಿ ಪ್ರವಾಸಕ್ಕೆ ಹೋಗಿದ್ದಾರೆ. ಪ್ರವಾಸ ಈ ಹಿಂದೆಯೇ ನಿರ್ಧಾರ ಆಗಿರುವ ಕಾರಣಕ್ಕೆ ಸುರ್ಜೇವಾಲಾ ಮತ್ತು ಸಿಎಂಗೆ ಲಿಖಿತವಾಗಿ ಪತ್ರ ಬರೆದು ಅನುಮತಿ ಪಡೆದಿದ್ದಾರೆ. ಅಲ್ಲಿಂದ ಬಂದ ಮೇಲೆ ಭೇಟಿ ಮಾಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಸಂಶೋಧನಾ ಕೇಂದ್ರಕ್ಕೆ ಹಣವಿಲ್ಲ
ದೇಶದಲ್ಲಿ ರಸಗೊಬ್ಬರದ ಸಮಸ್ಯೆ ಇದ್ದು, ನಮ್ಮ ರಾಜ್ಯದಲ್ಲಿ ಅದರ ಸಮಸ್ಯೆ ಇಲ್ಲ. ರೈತರು ಎಲ್ಲಿಯೂ ಪ್ರತಿಭಟನೆ ನಡೆಸದಂತೆ ರಸಗೊಬ್ಬರ ಪೂರೈಕೆ ಮಾಡಿದ್ದೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ತಮ್ಮ ಕ್ಷೇತ್ರದಲ್ಲಿ 100 ಎಕರೆ ಜಮೀನು ಇದ್ದು, ಅದರಲ್ಲಿ ಕಾಲೇಜು, ಸಂಶೋಧನಾ ಕೇಂದ್ರ ಸ್ಥಾಪನೆಗೆ ಮನವಿ ಮಾಡಿದ್ದಾರೆ. ಆದರೆ, ಆರ್ಥಿಕ ತೊಂದರೆ ಇರುವ ಕಾರಣಕ್ಕೆ ಸಾಧ್ಯವಾಗಿಲ್ಲ. ಮತ್ಯಾವುದೇ ಶಾಸಕರು ದೂರು ನೀಡಿಲ್ಲ ಎಂದು ಹೇಳಿದರು.
ಶಾಸಕರು ಒಂದಷ್ಟು ಬೇಡಿಕೆ ಇಟ್ಟಿದ್ದು, ಅವುಗಳನ್ನು ಸುರ್ಜೇವಾಲಾ ನನ್ನ ಗಮನಕ್ಕೆ ತಂದಿದ್ದಾರೆ. ಬಗೆಹರಿಸುವ ಭರವಸೆ ನೀಡಿದ್ದೇನೆ. ಸ್ಮಾರ್ಟ್‌ಮೀಟರ್ ವಿಚಾರ ಕೋರ್ಟ್‌ನಲ್ಲಿದೆ. ದೂರುದಾರರು ನೀಡಿರುವ ಆರೋಪಕ್ಕೆ ವಿವರಣೆ ನೀಡುವೆ.
ಕೆ.ಜೆ. ಜಾರ್ಜ್, ಇಂಧನ ಸಚಿವ
ಶಾಸಕರು ಇಲಾಖೆ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಚರ್ಚೆ ಆಯಿತು. ಶಾಸಕರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇನೆ. ಅನುದಾನ ನೋಡಿಕೊಂಡು ಆರ್ಥಿಕ ಸಮಸ್ಯೆ ಬಗೆಹರಿಸುವೆ ಎಂದು ಭರವಸೆ ನೀಡಿದ್ದೇನೆ.
ಕೃಷ್ಣ ಬೈರೇಗೌಡ, ಕಂದಾಯ ಸಚಿವ
ಶಾಸಕರು ಬಸ್ ನಿಲ್ದಾಣ ಬೇಕೆಂದು ಮನವಿ ಮಾಡಿದ್ದು, ನಿರ್ಮಾಣ ಏಕೆ ಸಾಧ್ಯವಾಗಿಲ್ಲ ಎಂದು ಸುರ್ಜೇವಾಲಾಗೆ ವಿವರಣೆ ಕೊಟ್ಟಿದ್ದೇನೆ.
ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ