ನ್ಯೂಸ್

ಚೀನಿ ಕಿಟ್ ದೋಷಪೂರಿತ?: ಬಳಕೆಗೆ ನಿರಾಕರಣೆ

kumarvrl

ನವದೆಹಲಿ: ಕರೊನಾ ವೈರಸ್ ಸೋಂಕಿತರ ತಪಾಸಣೆಗೆಂದು ಒದಗಿಸಲಾಗಿರುವ ಚೀನಿ ನಿರ್ವಿುತ ಕ್ಷಿಪ್ರ ಪರೀಕ್ಷಾ ಕಿಟ್​ಗಳು (ರ‍್ಯಾಪಿಡ್ ಟೆಸ್ಟ್ ಕಿಟ್) ದೋಷಪೂರಿತವಾಗಿವೆ ಎಂದು ದೂರಿರುವ ಹಲವು ರಾಜ್ಯಗಳು ಅವುಗಳ ಬಳಕೆಗೆ ನಿರಾಕರಿಸಿವೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಮುಂದಿನ ಎರಡು ದಿನ ಈ ಕಿಟ್​ಗಳನ್ನು ಬಳಸದಂತೆ ರಾಜ್ಯಗಳಿಗೆ ಸೂಚಿಸಿದೆ.

ಈ ತಿಂಗಳ ಆರಂಭದಲ್ಲಿ ಭಾರತ ಸರ್ಕಾರ ಚೀನಾದಿಂದ 6.5 ಲಕ್ಷ ರ‍್ಯಾಪಿಡ್ ಟೆಸ್ಟ್ ಕಿಟ್ ತರಿಸಿಕೊಂಡಿತ್ತು. ದೇಶದಾದ್ಯಂತ ಕರೊನಾ ಹಾಟ್​ಸ್ಪಾಟ್​ಗಳಲ್ಲಿ ತಪಾಸಣೆಗಾಗಿ ವಿತರಿಸುವಂತೆ ಐಸಿಎಂಆರ್ ಸೂಚಿಸಿದ ಮೇರೆಗೆ ರಾಜ್ಯಗಳಿಗೆ ನೀಡಲಾಗಿತ್ತು. ಈ ಕಿಟ್​ಗಳು ಚೀನಾದಿಂದ ಬಂದ ಕೂಡಲೇ ಅವುಗಳ ಗುಣಮಟ್ಟದ ಕುರಿತು ಕೆಲವು ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದ್ದರಿಂದ ವಿವಾದ ಹುಟ್ಟಿಕೊಂಡಿತ್ತು.

ಒಂದು ವೇಳೆ ಇಡೀ ಬ್ಯಾಚ್​ನ ಕಿಟ್​ಗಳು ಕಳಪೆಯಾಗಿದ್ದರೆ ಎಲ್ಲ ಕಿಟ್​ಗಳಿಗೆ ಬದಲಿ ನೀಡುವಂತೆ ಸಂಬಂಧಿತ ಕಂಪನಿಗೆ ಕೇಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮಾಧ್ಯಮ ವರದಿಗಳನ್ನು ಪ್ರಸ್ತಾಪಿಸಿದ ಚೀನಿ ಅಧಿಕಾರಿಗಳು, ಕಿಟ್​ಗಳು ಕಳಪೆ ಎನ್ನುವುದನ್ನು ನಿರಾಕರಿಸಿ, ‘ವೈದ್ಯಕೀಯ ಉತ್ಪನ್ನಗಳ ರಫ್ತಿಗೆ ನಮ್ಮ ದೇಶ ತುಂಬಾ ಮಹತ್ವ ನೀಡುತ್ತದೆ’ ಎಂದಿದ್ದರು. ಭಾರತ ಸೇರಿದಂತೆ ಹಲವು ದೇಶಗಳು ರಾಜತಾಂತ್ರಿಕ ಮಾರ್ಗದ ಮೂಲಕ ಕಿಟ್​ಗಳಿಗೆ ಬೇಡಿಕೆ ಮಂಡಿಸಿದ್ದವು.

ರಾಜಸ್ಥಾನದಲ್ಲಿ ಪರೀಕ್ಷೆ ಸ್ಥಗಿತ

ಚೀನಿ ಕಿಟ್​ಗಳಿಂದ ತಪಾಸಣೆ ನಡೆಸುವುದನ್ನು ರಾಜಸ್ಥಾನ ಮಂಗಳವಾರ ಸ್ಥಗಿತಗೊಳಿಸಿದೆ. ಈ ಕಿಟ್​ಗಳು ಕೇವಲ ಶೇಕಡಾ 5.4 ಪರಿಣಾಮಕಾರಿಯಾಗಿವೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಕಿಟ್​ಗಳ ಪರಿಣಾಮವನ್ನು ಪರಿಶೀಲಿಸಲು ಸವಾಯ್ ಮಾನ್ ಸಿಂಗ್ ಆಸ್ಪತ್ರೆಯ ವೈದ್ಯಕೀಯ ಹಾಗೂ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥರ ಸಮಿತಿ ರಚಿಸಲಾಗಿತ್ತು.

ಆಂಟಿ ಬಾಡಿ ಪರೀಕ್ಷೆ ಬೇಡ

ರ‍್ಯಾಪಿಡ್ ಟೆಸ್ಟ್ ಕಿಟ್​ಗಳಲ್ಲಿ ದೋಷವಿರುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕೊವಿಡ್-19 ರೋಗಿಗಳಿಗೆ ಎರಡು ದಿನದ ಮಟ್ಟಿಗೆ ಹೊಸ ಆಂಟಿ ಬಾಡಿ ಪರೀಕ್ಷೆ ನಡೆಸದಿರಲು ಐಸಿಎಂಆರ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಕಿಟ್​ಗಳಲ್ಲಿ ದೋಷವಿದೆಯೆಂದು ಒಂದು ರಾಜ್ಯ ಹೇಳಿದೆ. ಮೂರು ರಾಜ್ಯಗಳಲ್ಲಿ ಅದನ್ನು ಪರಿಶೀಲಿಸಿ ದೋಷವನ್ನು ನಾವು ದೃಢಪಡಿಸಿದ್ದೇವೆ. ಇದು ಒಳ್ಳೆಯ ಲಕ್ಷಣವಲ್ಲ. ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ.

- ಡಾ. ಗಂಗಾ ಖೇಡ್ಕರ್, ಐಸಿಎಂಆರ್ ವೈದ್ಯ.