ನ್ಯೂಸ್

ಶಾಲೆಯಿಂದ ಬರಬೇಕಿದ್ದ ಮಕ್ಕಳು ಮಿಸ್ಸಿಂಗ್; ಪೊಲೀಸರಿಗೆ ಸುಳಿವು ಕೊಟ್ಟ ಅಪರಿಚಿತ ಕರೆ

ಬೆಂಗಳೂರು : ಆಟೋ ಚಾಲಕನ ನಿರ್ಲಕ್ಷ್ಯದಿಂದ ಶಾಲಾ ಮಕ್ಕಳು, ಕ್ಷಣಾರ್ಧದಲ್ಲಿ ನಾಪತ್ತೆ ಆಗಿದ್ದರು. ಪಾಲಕರು ಕಷ್ಟಕಾಲಕ್ಕೆ ಎಂದು ಮಕ್ಕಳಿಗೆ ಬಾಯಿಪಾಠ ಮಾಡಿಸಿದ್ದ ಮೊಬೈಲ್ ನಂಬರ್ ಸಹಾಯದಿಂದ ಮತ್ತು ಪೊಲೀಸರ ಸಮಯಪ್ರಜ್ಞೆಯಿಂದ ಕೆಲವೇ ತಾಸಿನಲ್ಲಿ ನಾಪತ್ತೆಯಾಗಿದ್ದ ಬಾಲಕರು ಮರಳಿ ಪಾಲಕರ ಮಡಿಲಿಗೆ ಸೇರಿರುವ ಪ್ರಸಂಗ ನಗರದಲ್ಲಿ ನಡೆದಿದೆ.

ಚಾಮರಾಜಪೇಟೆಯ ಆಲೂರುವೆಂಕಟರಾಯ ರಸ್ತೆಯ ಖಾಸಗಿ ಶಾಲೆಯ ಇಬ್ಬರು ಬಾಲಕರನ್ನು ಶಾಲೆಗೆ ಬಿಡಲು ಮತ್ತು ಕರೆ ತರಲು ಪಾಲಕರು ಬಾಡಿಗೆ ಆಟೋ ಚಾಲಕನ್ನು ನೇಮಕ ಮಾಡಿದ್ದರು. ಎಂದಿನಂತೆ ಪ್ರತಿದಿನ ಮಕ್ಕಳನ್ನು ಶಾಲೆಗೆ ಬಿಡುವುದು ಮತ್ತು ಕರೆತರುವುದು ಮಾಡುತ್ತಿದ್ದ. ಬುಧವಾರ ಮಕ್ಕಳನ್ನು ಕರೆತರಲು ಹೋಗಿದ್ದ ಆಟೋ ಚಾಲಕ, ಬಾಲಕರನ್ನು ರಿಕ್ಷಾದಲ್ಲಿ ಕೂರಿಸಿ ಅಂಗಡಿಗೆ ಹೋಗಿದ್ದ.

ಬರುವುದು ತಡವಾದ ಕಾರಣಕ್ಕೆ ಬಾಲಕರು ಗಾಬರಿಯಾಗಿ ಆಟೋದಿಂದ ಇಳಿಸಿ ಆತನನ್ನು ಹುಡುಕಿಕೊಂಡು ಮೈಸೂರು ರಸ್ತೆ ಸ್ಯಾಟಲೈಟ್ ವರೆಗೂ ಹೋಗಿದ್ದರು. ಇತ್ತ ಆಟೋ ಬಳಿಗೆ ಚಾಲಕ ಬಂದಾಗ ಮಕ್ಕಳು ನಾಪತ್ತೆ ಆಗಿರುವುದು ಕಂಡು ಗಾಬರಿಯಾಗಿ ಎಲ್ಲೆಡೆ ಹುಡುಕಾಟ ಶುರು ಮಾಡಿದ್ದ. ಸ್ಯಾಟಲೈಟ್ ವರೆಗೂ ನಡೆದುಕೊಂಡು ಹೋಗಿದ್ದ ಮಕ್ಕಳು ಸಹ ಭಯಗೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ತಡೆದು ಭಯ ಆಗುತ್ತಿದೆ ಎಂದು ಹೇಳಿದ್ದಾರೆ. ಯುವತಿ, ಏನಾಯಿತು ಎಂದು ಕೇಳಿ ಸಮಧಾನ ಮಾಡಿದ್ದಾಳೆ.

5 ವರ್ಷದ ಬಾಲಕ, ತನ್ನ ಅಪ್ಪನ ಮೊಬೈಲ್ ನಂಬರ್ ಹೇಳಿ ಕರೆ ಮಾಡಿಸಿದ್ದಾನೆ. ಯುವತಿ ಕರೆ ಮಾಡಿ ಪಾಲಕರಿಗೆ ವಿಷಯ ತಿಳಿಸುವಷ್ಟರಲ್ಲಿ ಬಸ್ ಬಂತು ಎಂದು ಏರಿ ತನ್ನ ಪಾಡಿಗೆ ತಾನು ಹೊರಟು ಹೋಗಿದ್ದಳು. ಅಪರಿಚಿತ ಯುವತಿಯ ಕರೆಯಿಂದ ಗಾಬರಿಗೊಂಡ ಪಾಲಕರು, ದಿಕ್ಕು ತೋಚದೆ ವಿ.ವಿ.ಪುರ ಠಾಣೆಗೆ ಬಂದು ಇನ್‌ಸ್ಪೆಕ್ಟರ್ ಮಿರ್ಜಾ ಆಲಿ ರಾಜಗೆ ವಿಷಯ ತಿಳಿಸಿದ್ದರು.

ತಕ್ಷಣ ಕರೆ ಬಂದಿದ್ದ ಮೊಬೈಲ್ ನೆಟ್‌ವರ್ಕ್ ಪರಿಶೀಲನೆ ನಡೆಸಿದಾಗ ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ ತೋರಿಸಿತ್ತು. ಕೂಡಲೇ ಇನ್‌ಸ್ಪೆಕ್ಟರ್ ಸೇರಿದಂತೆ 30 ಪೊಲೀಸರು ಪಾಲಕರ ಜೊತೆಗೆ ಸ್ಥಳಕ್ಕೆ ಹೋಗಿ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದರು. ಮೈಸೂರು ರಸ್ತೆ ಗೋಪಾಲನ್ ಮಾಲ್ ಬಳಿ ಮಕ್ಕಳನ್ನು ಪೊಲೀಸರು ಪತ್ತೆಹಚ್ಚಿ ಪಾಲಕರ ಮಡಿಲಿಗೆ ಒಪ್ಪಿಸಿ ನಿಟ್ಟೂಸಿರು ಬಿಟ್ಟಿದ್ದಾರೆ.

ಮಕ್ಕಳಿಗೆ ಮೊಬೈಲ್ ಬಾಯಿಪಾಠ ಮಾಡಿಸಿ :

ತಂದೆ-ತಾಯಿ ತಮ್ಮ ಮೊಬೈಲ್ ನಂಬರ್‌ನ್ನು ಮಕ್ಕಳಿಗೆ ಬಾಯಿಪಾಠ ಮಾಡಿಸುವುದು ಒಳಿತು. ಇತ್ತೀಚೆಗೆ ನಾಪತ್ತೆಯಾಗಿದ್ದ ಮಕ್ಕಳ ಪೈಕಿ 5 ವರ್ಷದ ಬಾಲಕ, ತನ್ನ ತಂದೆ ಮೊಬೈಲ್‌ಗೆ ಅಪರಿಚಿತ ಯುವತಿ ಮೊಬೈಲ್‌ನಿಂದ ಕರೆ ಮಾಡಿದ ಪರಿಣಾಮ ಟವರ್ ಲೋಕೇಷನ್ ಲಭ್ಯವಾಗಿ ಆ ಪ್ರದೇಶದ ಸುತ್ತಮುತ್ತ ಹುಡುಕಾಟ ನಡೆಸಲು ಅನುಕೂಲ ಆಯಿತು ಎಂದು ವಿವಿಪುರ ಪೊಲೀಸರು ತಿಳಿಸಿದ್ದಾರೆ.