ನ್ಯೂಸ್

|ಆರೋಪಗಳು ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ; ದಿನೇಶ್ ಗುಂಡೂರಾವ್|not affect the election

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಹಣ ವಸೂಲಿ ಸೇರಿದಂತೆ ಯಾವುದೇ ಆರೋಪಗಳು ಉಪ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundurao) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಕುರಿತು ಬಹಿರಂಗ ಆರೋಪ ಮಾಡುವುದು ಸರಿಯಲ್ಲ. ಸಿಎಂಗೆ ದೂರು ನೀಡಿದರೆ ತನಿಖೆ ಮಾಡಲಾಗುವುದು ಎಂದರು.

ಅಬಕಾರಿ ಇಲಾಖೆಯ ಅಧಿಕಾರಿಗಳು ಸಚಿವರ ಹೆಸರಲ್ಲಿ ಮದ್ಯ ಮಾರಾಟಗಾರರಿಂದ ವಸೂಲಿ ಮಾಡುತ್ತಿರುವ ಆರೋಪದ ಬಗ್ಗೆ ವೈನ್ ಮರ್ಚೆಂಟ್ ಅಸೋಸಿಯೇಷನ್ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದೂರು ಕೊಡಲಿ ಎಂದು ಹೇಳಿದರು.

ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ರಾಜೀನಾಮೆಗೆ ಒತ್ತಾಯ ಮಾಡುವವರು ಭ್ರಷ್ಟಾಚಾರದ ಬಗ್ಗೆ ಸ್ಪಷ್ಟ ಮಾಹಿತಿ ಕೊಡುತ್ತಿಲ್ಲ. ಹಿಂದೆ ನಡೀತಾ ಇತ್ತು, ಅದೇ ರೀತಿಯಲ್ಲಿ ಈಗಲೂ ನಡೀತಾ ಇದೆ ಎಂದು ಹೇಳಿದ್ದಾರೆ ಎಂದರು.

ಎಲ್ಲಿ ಸಮಸ್ಯೆ ಆಗುತ್ತಿದೆ. ಯಾರು ವಸೂಲಿ ಮಾಡ್ತಿದ್ದಾರೆ ಎಂಬುದನ್ನು ಹೇಳಬೇಕು. ಯಾವ ವೈನ್ ಮರ್ಚೆಂಟ್ ಬಳಿ ಲಂಚ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ಹೇಳಬೇಕಲ್ಲವೆ ಎಂದು ಪ್ರಶ್ನಿಸಿದರು.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡುವುದಲ್ಲ, ಬದಲಾಗಿ ನೇರವಾಗಿ ಯಾರು ಲಂಚ ಬೇಡಿಕೆ ಇಟ್ಟಿದ್ದಾರೆ ಎಂಬುದನ್ನು ಹೇಳಬೇಕಲ್ಲವೆ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಮೇಲೆ ಎ್ಐಆರ್ ದಾಖಲಾಗಿದೆ. ತನಿಖಾಧಿಕಾರಿಗೇ ಜೀವ ಬೆದರಿಕೆ ಹಾಕಿದ್ದಾರೆ. ಅವರ ಮನೆಯವರಿಗೆ ಆಸ್ತಿ ಪಾಸ್ತಿ ಕೊಡಿಸಿದ್ದಾರೆ. ಅದೆಲ್ಲ ತನಿಖೆ ಆಗಲಿ, ಸತ್ಯ ಹೊರಗೆ ಬರುತ್ತದೆ ಎಂದರು.

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಚುನಾವಣೆಯ ಮೇಲೆ ಪರಿಣಾಮ ಬೀರುತ್ತಾ? ಎಂಬ ಪ್ರಶ್ನೆಗೆ, ಎಲೆಕ್ಷನ್ ಮೇಲೆ ಯಾವ ಪರಿಣಾಮವೂ ಬೀರಲ್ಲ. ನಾವು ಮಾಡಿರುವ ಅಭಿವೃದ್ದಿ ನೋಡಿ ಜನ ವೋಟು ಹಾಕುತ್ತಾರೆ. ದೇವೇಗೌಡರು ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಕೊಳ್ಳಲಿ. ಅವರ ಮೊಮ್ಮಗನನ್ನು ಉಳಿಸಿಕೊಳ್ಳಬೇಕಲ್ಲವೆ ಎಂದು ವ್ಯಂಗ್ಯವಾಡಿದರು.

ಮುಡಾ ಹಗರಣದ ಹಿಂದೆ ಬಿಜೆಪಿ ನಾಯಕರ ಷಢ್ಯಂತ್ರವಿದೆ. ತನಿಖೆ ಉದ್ದೇಶ ಸಂಚು ಎಂದು ಈಗಾಗಲೇ ನಾವು ಹೇಳಿದ್ದೇವೆ. ಕಾನೂನು ಪ್ರಕಾರ ತನಿಖೆ ಆದರೆ ಒಳ್ಳೆಯದ್ದು. ಸಿಎಂ ಎಲ್ಲೂ ಅಧಿಕಾರ ದುರುಪಯೋಗ ಮಾಡಿಲ್ಲ. ಅವರ ಸ್ವಾರ್ಥಕ್ಕೆ ಸಿಎಂ ಏನೂ ಮಾಡಿಕೊಂಡಿಲ್ಲ. ಪ್ರತಿಪಕ್ಷಗಳು ಸಿಎಂ ಹೆಸರಿಗೆ ಮಸಿ ಬಳಿಯಲು ಪ್ರಯತ್ನ ಮಾಡುತ್ತಿವೆ ಎಂದು ಹರಿಹಾಯ್ದರು.

ಐಟಿ, ಇಡಿ ಇಟ್ಟುಕೊಂಡಿರುವುದು ಪ್ರತಿಪಕ್ಷಗಳನ್ನು ಮುಗಿಸಲು. ಸಿಎಂ ಭ್ರಷ್ಟ ಎನ್ನುವ ರೀತಿಯಲ್ಲಿ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.