ಬೆಂಗಳೂರು: ಸಿದ್ಧಗಂಗಾ ಮಠ ಸೇರಿ ರಾಜ್ಯದ 454 ಸಂಘ ಸಂಸ್ಥೆಗಳಿಗೆ ಆಹಾರ ಧಾನ್ಯ ಪೂರೈಕೆ ನಿಲ್ಲಿಸುವಂತೆ ಕೇಂದ್ರ ಸರ್ಕಾರ 2019ರ ಜೂನ್ನಲ್ಲಿಯೇ ಆದೇಶ ನೀಡಿತ್ತು. ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರ ಹಾಗೂ ಆಹಾರ ಇಲಾಖೆ 2019ರ ಜೂನ್ 25ಕ್ಕೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸರ್ಕಾರದ ವತಿಯಿಂದ ನಡೆಯುವ ಕಲ್ಯಾಣ ಸಂಸ್ಥೆಗಳು ಹಾಗೂ ಹಾಸ್ಟೆಲ್ಗಳಿಗೆ ಮಾತ್ರ ಆಹಾರ ಧಾನ್ಯ ಬಿಡುಗಡೆ ಮಾಡಬೇಕು. ಅನುದಾನಿತ, ಪ್ರಾಯೋಜಿತ, ಖಾಸಗಿ ಹಾಗೂ ಎನ್ಜಿಒಗಳ ವತಿಯಿಂದ ನಡೆಯುವ ಸಂಸ್ಥೆಗಳಿಗೆ ನೀಡಬಾರದೆಂದು ಹೇಳಿದೆ. ಅದರ ಜತೆಗೆ ಬಳಕೆ ಪ್ರಮಾಣಪತ್ರ ಸಲ್ಲಿಸಿಲ್ಲವೆಂಬ ಆಕ್ಷೇಪ ಸಹ ವ್ಯಕ್ತಪಡಿಸಿದೆ. ಕೇಂದ್ರದ ಈ ಸೂಚನೆಯನ್ನು ಆಧರಿಸಿ ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ 2019ರ ಅಕ್ಟೋಬರ್ 14ರಂದು ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಸರ್ಕಾರ ನಡೆಸುವ ಕಲ್ಯಾಣ ಸಂಸ್ಥೆಗಳು ಹಾಗೂ ಹಾಸ್ಟೆಲ್ಗಳಿಗೆ ಮಾತ್ರ ದಾಸೋಹ ಯೋಜನೆಯಲ್ಲಿ ಆಹಾರ ಧಾನ್ಯ ಬಿಡುಗಡೆ ಮಾಡಬೇಕೆಂದು ಸೂಚನೆ ನೀಡಿದ್ದರು. ಆದರೆ ಸಚಿವ ಸಂಪುಟದಲ್ಲಿ ಎಲ್ಲ ಸಂಸ್ಥೆಗಳಿಗೂ ಮುಂದುವರೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಹಾಲಿ-ಮಾಜಿ ಸಚಿವರ ಮುಖಾಮುಖಿ: ಆಹಾರ ಖಾತೆಯ ಹಾಲಿ ಹಾಗೂ ಮಾಜಿ ಸಚಿವರು ಮುಖಾಮುಖಿಯಾಗಿ ನಗುನಗುತ್ತ ಮಾತನಾಡಿ ಗಮನ ಸೆಳೆದರು. ಮಂಗಳವಾರವಷ್ಟೇ ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿ ಸಂಘ ಸಂಸ್ಥೆಗಳಿಗೆ ದಾಸೋಹ ಯೋಜನೆಯಲ್ಲಿ ಆಹಾರ ಧಾನ್ಯ ನಿಲ್ಲಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಗುರುವಾರ ಬೆಳಗ್ಗೆ ಇಬ್ಬರು ಮುಖಾಮುಖಿಯಾಗಿ ಈ ಬಗ್ಗೆ ರ್ಚಚಿಸಿದರು. ಸಚಿವ ಸ್ಥಾನಕ್ಕೆ ನಾನು ಹೊಸಬಳಿದ್ದೇನೆ, ನೀವು ನನಗೆ ಮಾರ್ಗದರ್ಶನ ಮಾಡಿ ಎಂದು ಜೊಲ್ಲೆ ಕೋರಿದರು. ನನಗೆ ತಿಳಿದ ಸಂಗತಿಯನ್ನು ವಿವರಿಸುತ್ತೇನೆ. ನಾನು ಹಿಂದೆ ಇದ್ದ ಖಾತೆಯಲ್ಲೇ ಈಗ ನೀವಿದ್ದೀರಿ. ನನಗೆ ಹಂಚಿಕೆಯಾಗಿದ್ದ ಸರ್ಕಾರಿ ಬಂಗಲೆಯಲ್ಲೇ ಈಗ ನೀವಿರೋದು. ಹಾಗಾಗಿ ನಾವಿಬ್ಬರೂ ಅಣ್ಣ ತಂಗಿ ಇದ್ದಂತೆ ಎಂದು ಖಾದರ್ ಶಶಿಕಲಾ ಜೊಲ್ಲೆ ಕೈ ಕುಲುಕಿ ಅಭಿನಂದಿಸಿದರು.
ಹಿಂದೆ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಕೊಲ್ಲೂರು ದೇವಸ್ಥಾನದಿಂದ ಹಣ ನೀಡುವುದನ್ನು ಸ್ಥಗಿತಗೊಳಿಸ ಲಾಗಿತ್ತು. ಆಗ ಇದೇ ಬಿಜೆಪಿಯವರು ದೊಡ್ಡ ರಾಜಕಾರಣ ಮಾಡಿದರು. ಈಗ ವಿವಿಧ ಮಠಗಳು, ಸಂಘ ಸಂಸ್ಥೆಗಳಿಗೆ ದಾಸೋಹ ಸ್ಥಗಿತಗೊಳಿಸಿದಾಗ ಬಿಜೆಪಿ ಏಕೆ ಮೌನವಾಗಿತ್ತು. ಪ್ರತಿಭಟನೆ ಮಾಡಲು 10 ಲಕ್ಷ ಠೇವಣಿ ಕಟ್ಟುವಂತೆ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ಸಿಎಂ ಹಾಗೂ ಗೃಹ ಸಚಿವರಿಗೆ ತಿಳಿದಿದೆಯೇ? ಯಾವ ಬಾಂಡ್ ಅದು? | ಡಿ.ಕೆ.ಶಿವಕುಮಾರ್ ಮಾಜಿ ಸಚಿವ