ಶಿವಮೊಗ್ಗ: ಸಮಾಜದ ವಿವಿಧ ಸಂಸ್ಕೃತಿಗಳ ಆಚರಣೆಯೇ ಭಾರತದ ವಿಶೇಷ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ 38ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಸಿನಿಮಾ, ನಾಟಕ, ಸಾಹಿತ್ಯ ಎಲ್ಲವೂ ವಿಶೇಷ ಸಂಸ್ಕೃತಿಗಳ ಪ್ರತಿಬಿಂಬ. ಜನಪ್ರಿಯ ಚಲನಚಿತ್ರ ಇರಬಹುದು, ಗಾಢವಾದ ಹೊಳಹುಗಳಿರುವ ಗಂಭೀರ ಸಾಹಿತ್ಯ ಇರಬಹುದು ಅಥವಾ ಹವ್ಯಾಸಿ ಯಕ್ಷಗಾನ ಇರಬಹುದು. ಎಲ್ಲವೂ ಜನಜೀವನದ ಕಲಾತ್ಮಕ ಅಭಿವ್ಯಕ್ತಿಯೇ ಆಗಿರುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮೂಲಕ ಮುಕ್ತಿ ಮಾರ್ಗದ ಕಾಣ್ಕೆ ಅನಾವರಣಗೊಳಿಸುವುದೇ ಶಿಕ್ಷಣದ ನಿಜ ಧರ್ಮ. ವಿಕಾಸಪಥವು ಹಾವು-ಏಣಿ ಆಟವಿದ್ದ ಹಾಗೆ. ಇಲ್ಲಿ ಅಸಮಾನತೆ, ಅಸಹನೆ, ಅಸಹಿಷ್ಣುತೆಗಳೆಂಬ ಹಾವುಗಳಿವೆ. ಅದರ ಜತೆಗೆ ಸಮಾನತೆ, ಸಹಿಷ್ಣುತೆಗಳೆಂಬ ಏಣಿಗಳೂ ಇವೆ. ಶಿಕ್ಷಣದ ಮೂಲಕ ಇಂತಹ ಏಣಿಗಳನ್ನು ಕಂಡುಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಸಂಕಷ್ಟಕರ ಸಮಕಾಲೀನ ಸಂದರ್ಭವನ್ನು ಸಮರ್ಥವಾಗಿ ಎದುರಿಸಲು ನಿಷ್ಕಲ್ಮಷವಾದ ಮಮತೆ ಮತ್ತು ಸಮತೆ ಯುವಜನಾಂಗಕ್ಕೆ ದಾರಿ ದೀಪವಾಗಲಿ ಎಂದು ಆಶಿಸಿದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಹಲವು ಮಹನೀಯರು ಶ್ರಮಿಸಿದ್ದಾರೆ. ಆದರೆ ವಿವಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಗುರುತರ ಸವಾಲು ನಮ್ಮ ಮುಂದಿದೆ. ಸರ್ಕಾರದಿಂದ ದೊರೆಯುವ ಅನುದಾನದಲ್ಲಿನ ಕೊರತೆ, ನೇಮಕಾತಿಯಲ್ಲಿ ಹಿನ್ನೆಡೆ, ಆಂತರಿಕ ಸಂಪನ್ಮೂಲಗಳ ಕ್ರೋಢೀರಣದಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದರು.
ಕುಲಸಚಿವ ಎ.ಎಲ್.ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ.ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್.ಎನ್.ರಮೇಶ್, ಸಿಂಡಿಕೇಟ್ ಸದಸ್ಯರು, ವಿದ್ಯಾ ವಿಷಯಕ ಪರಿಷತ್ ಸದಸ್ಯರು, ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.