ನ್ಯೂಸ್

ಸುಖ-ದುಃಖಕ್ಕೆ ಕಾರಣ ಅಹಂಕಾರ, ಬುದ್ಧಿ, ಬಯಕೆ

ಧ್ಯಾನದಲ್ಲಿ ಅಹಂಕಾರವಿಲ್ಲ, ಗಡಿಗಳಿಲ್ಲ. ಆತ್ಮವು ಬಯಕೆಯೊಡನೆ ತನ್ನನ್ನು ಸಂಬಂಧಪಡಿಸಿಕೊಂಡಾಗ ಗಡಿಗಳು ಏಳುತ್ತವೆ. ಆ ಗಡಿಯನ್ನು ರಕ್ಷಿಸಲು ಅಹಂಕಾರ ಮೇಲೇಳುತ್ತದೆ. ಮೂರು ವಿಷಯಗಳು ನಮ್ಮ ಆತ್ಮವನ್ನು ಮುಚ್ಚುತ್ತವೆ:

1. ಅಹಂಕಾರ 2. ಬುದ್ಧಿ 3. ಬಯಕೆ. ಈ ಮೂರು ವಿಷಯಗಳು ಆತ್ಮವನ್ನು ಮುಚ್ಚುವುದರಿಂದ ಉಸಿರುಗಟ್ಟಿದಂತೆ ಅನಿಸುತ್ತದೆ. ನಿಮ್ಮ ಬುದ್ಧಿ ತೀರ್ಪಗಳನ್ನು ಸೃಷ್ಟಿಸುತ್ತದೆ- ಆ ವ್ಯಕ್ತಿ ಹಾಗೆ, ಈ ವ್ಯಕ್ತಿ ಹೀಗೆ, ಆ ವ್ಯಕ್ತಿ ನನಗೆ ಇಷ್ಟವಿಲ್ಲ ಇತ್ಯಾದಿ. ಅಹಂಕಾರ, ಬುದ್ಧಿ ಮತ್ತು ಬಯಕೆ ಈ ಮೂರು ವಿಷಯಗಳು ನಮ್ಮನ್ನು ದುಃಖಿಗಳಾಗಿಯೂ ಮಾಡುತ್ತವೆ. ನಿಮ್ಮ ಉದ್ದೇಶಗಳು ಶುದ್ಧವಾಗಿದ್ದರೆ, ನಿಮ್ಮ ಬುದ್ಧಿ ವಿಶಾಲವಾಗಿದ್ದರೆ ಮತ್ತು ನಿಮ್ಮ ಅಹಂಕಾರ ವ್ಯಾಪಕವಾಗಿದ್ದರೆ, ಇದಕ್ಕೆ ವಿರುದ್ಧವಾದದ್ದು ಆಗುತ್ತದೆ. ಈ ಮೂರು ವಿಷಯಗಳು ನಿಮ್ಮ ಜೀವನದಲ್ಲಿ ಹೆಚ್ಚು ಸಂತೋಷವನ್ನು ತರುತ್ತವೆ.

ಬುದ್ಧಿಯು ಶುದ್ಧವಾಗಿದ್ದಾಗ, ಮಾತಿಗಿಂತಲೂ ಅತೀತವಾದು ದನ್ನು ಕಾಣುತ್ತದೆ. ಬುದ್ಧಿಯು ಅಶುದ್ಧವಾದಾಗ, ಯಾರೋ ನಮ್ಮ ಕುರಿತು ಹೊಂಚುಹಾಕುತ್ತಿದ್ದಾರೆ ಎಂಬ ಕಲ್ಪನೆಗಳನ್ನು ಹೊಂದುತ್ತದೆ. ಹೊಂಚುಹಾಕುತ್ತಿರುವರೆಂಬ ವಿಶ್ವವನ್ನೆ ಸೃಷ್ಟಿಸಿಕೊಳ್ಳುತ್ತದೆ. ಅಹಂಕಾರವೂ ಹಾಗೆಯೆ. ಅಹಂಕಾರವು ಶುದ್ಧವಾಗಿದ್ದಾಗ ಎಲ್ಲರೂ ನಿಮ್ಮ ಅಹಂಕಾರದ ಭಾಗವೆ ಆಗುತ್ತಾರೆ. ನೀವು ಸಹಜವಾಗಿರುತ್ತೀರಿ ಮತ್ತು ಎಲ್ಲರೊಡನೆಯೂ ಮನೆಯಲ್ಲಿರುವಂತೆಯೆ ಭಾವಿಸುತ್ತೀರಿ.

ಅಹಂಕಾರವು ಅಶುದ್ಧವಾಗಿದ್ದಾಗ, ನಾನು ಅವರೊಡನೆ ಮಾತನಾಡುವುದಿಲ್ಲ ಅಥವಾ ನಾನು ಅಡಿಯಾಳಾಗಲು ಬಯಸುವುದಿಲ್ಲ ಅಥವಾ ನಾನೇಕೆ ಅವರ ಮಾತನ್ನು ಕೇಳಬೇಕು? ಎಂದೆಲ್ಲ ಆಲೋಚಿ ಸುತ್ತೀರಿ. ಜನರು ನನ್ನನ್ನು ಕೀಳಾಗಿ ನೋಡುತ್ತಿದ್ದಾರೆ ಎಂದು ನೀವಂದುಕೊಂಡರೆ, ಅದು ನಿಮ್ಮದೆ ಅಹಂಕಾರ. ನಾವು ಹೇಳುತ್ತಿರುವುದು ತಿಳಿಯುತ್ತಿದೆಯೆ? ಎಚ್ಚೆತ್ತುಕೊಳ್ಳಿ! ಜಗತ್ತಿನಲ್ಲಿ ಅಜ್ಞಾನಿಗಳಾದ ಜನರಿದ್ದಾರೆ. ಎಲ್ಲರೂ ಜ್ಞಾನಿಗಳಾಗಬೇಕೆಂದು ಎದುರು ನೋಡುವುದು ಸರಿಯಲ್ಲ.

ರೋಗವಿದ್ದಾಗ ವೈದ್ಯರ ಅವಶ್ಯಕತೆಯಿರುತ್ತದೆ. ಸಮಸ್ಯೆಯಿದ್ದಾಗ ಜ್ಞಾನವು ಅವಶ್ಯಕ. ಪ್ರಾಮಾಣಿಕರಾದವರನ್ನು ಸಮಾಜದ ಒಂದು ಮೂಲೆಗೆ ತಳ್ಳಿ ಇಡಲು ಸಾಧ್ಯವಿಲ್ಲ, ಅವರು ಓಡಿ ಹೋಗಲು ಸಾಧ್ಯವಿಲ್ಲ. ಕರುಣೆಯುಳ್ಳ ಜನರನ್ನು ಸೇರಿಸಿ ಅವರನ್ನು ಒಂದು ಕೋಣೆಯಲ್ಲಿ ಇಟ್ಟುಬಿಡಲು ಸಾಧ್ಯವಿಲ್ಲ.

ಸಮಾಜದಲ್ಲಿ ಎಲ್ಲಾ ರೀತಿಯ ಜನರೂ ಇರುತ್ತಾರೆ. ಅವರನ್ನು ಪ್ರಭಾವಗೊಳಿಸುವಷ್ಟು ನಾವು ಶಕ್ತಿಶಾಲಿಗಳಾಗಿರಬೇಕು. ಅವರಿಂದ ನಾವು ಪ್ರಭಾವಿತರಾಗಬಾರದು. ಓರ್ವ ವೃದ್ಧರು ನಮಗೆ ಒಂದು ವಿಷಯವನ್ನು ತಿಳಿಸಿದರು. ಯಾವುದೇ ಸಂಸ್ಥೆಗಾಗಿ 12 ಜನರಿರಬೇಕು - ನಾಲ್ಕು ಒಳ್ಳೆಯವರು, ನಾಲ್ಕು ಮಧ್ಯಮದ ಸ್ಥಿತಿಯಲ್ಲಿ ಇರುವವರು ಮತ್ತು ನಾಲ್ಕು ಅಧಮರು. ಆಗ ಅದು ಒಳ್ಳೆಯ ಸಂಸ್ಥೆಯಾಗುತ್ತದೆ. ನಾಲ್ಕು ಅಧಮರು ನಾಲ್ಕು ಒಳ್ಳೆಯ ಜನರಲ್ಲಿರುವ ಎಲ್ಲಾ ಸದ್ಗುಣಗಳನ್ನೂ ಮತ್ತು ಬಲವನ್ನು ಹೊರತರುತ್ತಾರೆ. ಮಧ್ಯಮದ ಸ್ಥಿತಿಯಲ್ಲಿರುವವರು ಇವರೀರ್ವರಿಂದಲೂ ಪಾಠವನ್ನು ಕಲಿಯುತ್ತಾರೆ ಎಂದರವರು.

ನಿಮ್ಮ ಸುತ್ತಲೂ ಇರುವ ಜನರ ವರ್ತನೆಯನ್ನು ನೋಡಬೇಡಿ. ಅದು ಸ್ಪೂರ್ತಿದಾಯಕ ಆಗಿರದಿದ್ದರೆ ಅದನ್ನು ನೋಡಬೇಡಿ. ಅದು ಸ್ಪೂರ್ತಿದಾಯಕವಾಗಿದ್ದರೆ ಅದನ್ನು ಖಂಡಿತವಾಗಿಯೂ ತೆಗೆದುಕೊಳ್ಳಿ, ಏಕೆಂದರೆ ಅವರು ಒಳ್ಳೆಯವರಾದ ನಾಲ್ಕು ಜನರಲ್ಲಿ ಒಬ್ಬರಾಗಿರಬಹುದು. ನಾಲ್ಕು ಅಧಮರ ಮೇಲೆಯೆ ನಿಮ್ಮ ಗಮನವಿದ್ದರೆ ಓಡಿ ಹೋಗಬೇಕೆಂದು ಅನಿಸುತ್ತದೆ. ಇತರರನ್ನು ಮತ್ತು ನಿಮ್ಮನ್ನು ದೂಷಿಸುತ್ತೀರಿ ಮತ್ತು ಈ ಎಲ್ಲಾ ನಕಾರಾತ್ಮಕತೆಯು ನಿಮ್ಮನ್ನು ಒಂದು ನೆರಳಾಗಿ ಅಟ್ಟಿಸಿಕೊಂಡು ಬರುತ್ತದೆ. ನಿಮ್ಮ ನೆರಳು ದೊಡ್ಡದಾಗುವುದು ಯಾವಾಗ? ಬೆಳಕಿನಿಂದ ನೀವು ದೂರ ಸರಿದಾಗ ಮತ್ತು ಬೆಳಕಿನೆದುರು ನಿಲ್ಲದಿದ್ದಾಗ. ನಿಮ್ಮ ನೆರಳು ಆಗ ನಿಮಗಿಂತಲೂ ದೊಡ್ಡದಾಗುತ್ತದೆ.

ಒಳ್ಳೆಯವರಾದ ನಾಲ್ಕು ಜನ ಎಂದಿಗೂ ಓಡಿ ಹೋಗುವುದಿಲ್ಲ. ಅವರು ಘನವಾದ ಸ್ತಂಭಗಳಂತೆ. ನಾಲ್ಕು ಮಧ್ಯಮದವರು ಸದಾ ನಾಲ್ಕು ಅಧಮರ ಮೇಲೆಯೆ ತಮ್ಮ ಗಮನವನ್ನು ಇಟ್ಟಿರುವುದರಿಂದ ಓಡಿ ಹೋಗಲು ಪ್ರಯತ್ನಿಸುತ್ತಾರೆ. ಒಂದು ಗುಲಾಬಿಯ ಉದಾಹರಣೆಯನ್ನು ನೀಡುತ್ತಿದ್ದ ಓರ್ವ ಸಂತರಿದ್ದರು. ಒಬ್ಬರು ನಿಮ್ಮ ಬಳಿಗೆ ಗುಲಾಬಿಯನ್ನು ಎತ್ತಿಕೊಂಡು ಬರುತ್ತಿದ್ದರೂ ನಿಮ್ಮ

ಗಮನವೆಲ್ಲಾ ಗುಲಾಬಿಯ ಕೆಳಗಿರುವ ಮುಳ್ಳಿನ ಮೇಲೆ ಇರುತ್ತದೆ. ನಿಮ್ಮನ್ನು ಮುಳ್ಳಿನಿಂದ ಹೊಡೆಯಲೆಂದೆ ಬರುತ್ತಿದ್ದಾರೆ ಎಂದುಕೊಳ್ಳುತ್ತೀರಿ. ನಿಮ್ಮ ದೃಷ್ಟಿ ಗುಲಾಬಿಯ ಮೇಲಿದ್ದರೆ ಮುಳ್ಳಿನಿಂದ ನೀವು ಬಾಧಿತರಾಗುವುದಿಲ್ಲ. ಮುಳ್ಳುಗಳ ನಡುವೆ ನಿಮ್ಮ ಬೆರಳನ್ನಿಟ್ಟು ಗುಲಾಬಿಯನ್ನು ಹಿಡಿಯುವುದು ಹೇಗೆ ಎಂದು ನೋಡುತ್ತೀರಿ. ಆ ಕುಶಲತೆಯನ್ನು ಪಡೆಯುತ್ತೀರಿ. ಸ್ವಲ್ಪ ಬುದ್ಧಿಯಿದ್ದರೂ ಸಾಕು, ಗುಲಾಬಿಯನ್ನು ಹಿಡಿದು ಅದನ್ನು ಆನಂದಿಸುವ ರೀತಿಯನ್ನು ಅರಿಯುತ್ತೀರಿ, ಅದರ ಮುಳ್ಳಿನಿಂದ ಬಾಧಿತರಾಗುವ ಬದಲಿಗೆ ಹೀಗೆ ಮಾಡುತ್ತೀರಿ.

(ಪ್ರತಿಕ್ರಿಯಿಸಿ: instagram@gurudev.kannada )