ನ್ಯೂಸ್

ಆರೋಗ್ಯ ವೃದ್ಧಿಗೆ ಶಿಬಿರ ಸಹಕಾರಿ

ವಿಜಯವಾಣಿ ಸುದ್ದಿಜಾಲ ಮಡಿವಾಳ
ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು ಹಮ್ಮಿಕೊಳ್ಳುವುದರಿಂದ ಕೆಲಸ ಕಾರ್ಯಗಳನ್ನು ಒತ್ತಡದ ನಡುವೆ ಇರುವ ಗ್ರಾಮೀಣ ಜನತೆ ಆರೋಗ್ಯದ ಕಡೆ ಗಮನ ಹರಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಕೆ.ವೈನಂಜೇಗೌಡ ಹೇಳಿದರು.


ತಾಲೂಕಿನ ತೋರ್ನಹಳ್ಳಿಯ ಗ್ರಾಪಂ ಆವರಣದಲ್ಲಿ ಎಂವಿಜೆ ವೈದ್ಯಕಿಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆ ಹೊಸಕೋಟೆ ಹಾಗೂ ತೊರ್ನಹಳ್ಳಿ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂಮಲ್ಟಿ ಸ್ಪೆಷಾಲಿಟಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.


ಗ್ರಾಮೀಣ ಜನರು ಹೆಚ್ಚಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದಿಲ್ಲ. ಇದರಿಂದ ದೊಡ್ಡದಾದ ರೋಗಗಳು ಉಲ್ಬಣಗೊಳ್ಳುತ್ತವೆ. ಈ ರೋಗಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವಲ್ಲಿ ತಪಾಸಣಾ ಶಿಬಿರಗಳು ಸಹಕಾರಿಯಾಗಿವೆ. ತಿಂಗಳ ಪ್ರತಿ ಮಂಗಳವಾರದಂದು ಗ್ರಾಪಂ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಲ್ಟಿ ಸ್ಪೆಷಾಲಿಟಿ ಚಿಕಿತ್ಸಾ ಶಿಬಿರ ಏರ್ಪಡಿಸಲಾಗುತ್ತಿದೆ ಎಂದರು.


ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳು ಆರೋಗ್ಯ ತಪಾಸಣಾ ಶಿಬಿರದ ದಿನಾಂಕಗಳನ್ನು ತಾಲೂಕು ಪಂಚಾಯಿತಿ ಇಒ ಬಳಿ ಚರ್ಚಿಸಿ ನಿಗದಿಪಡಿಸಿಕೊಂಡು ಗ್ರಾಮಗಳಲ್ಲಿ ಹೆಚ್ಚು ಪ್ರಚಾರ ಮಾಡುವ ಮೂಲಕ ಶಿಬಿರದಲ್ಲಿ ಗ್ರಾಮೀಣ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಶ್ರಮಿಸಬೇಕು ಎಂದರು.


ಎಂವಿಜೆ ವೈದ್ಯಕಿಯ ಕಾಲೇಜಿನ ನಿರ್ದೇಶಕ ಪ್ರಮೋದ್​ ಮಾತನಾಡಿ, ಆರ್ಥಿಕವಾಗಿ ಸಬಲರಲ್ಲದವವರಿಗೆ ಆರೋಗ್ಯದ ಕಡೆ ಗಮನಹರಿಸಲು ಆರೋಗ್ಯ ಶಿಬಿರಗಳು ಸಹಕಾರಿಯಾಗಲಿದೆ. ತಪಾಸಣೆಯ ಜತೆಗೆ ಮಲ್ಟಿ ಸ್ಪೆಷಾಲಿಟಿ ಚಿಕಿತ್ಸೆ ಸಹ ಕೊಡಿಸಲಾಗುವುದು, ಶಿಬಿರದಲ್ಲಿ ಕಾಯಿಲೆ ಇರುವವರನ್ನು ಗುರುತಿಸಿ ಎಂವಿಜಿ ಆಸ್ಪತ್ರೆಯಲ್ಲಿ ಉಚಿತ ಬಸ್​ ವ್ಯವಸ್ಥೆ ಮೂಲಕ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗುವುದು. ಇಎಸ್​ಐ ಯಶಸ್ವಿನಿ, ಆಯುಷ್ಮಾನ್​, ಬಿಪಿಎಲ್​ ಕಾರ್ಡ್​ ಉಳ್ಳವರಿಗೆ, ಅಲ್ಲದೆ ಇವು ಯಾವುದು ಇಲ್ಲದವರನ್ನೂ ವಿಶೇಷ ಅನುದಾನದಡಿ ಚಿಕಿತ್ಸೆ ನೀಡಲಾಗುವುದು. ಇಲ್ಲಿನ 28 ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಮಂಗಳವಾರ ಗ್ರಾಪಂ ಸಹಕಾರದಿಂದ ಶಿಬಿರ ನಡೆಸಲಾಗುತ್ತಿದೆ ಎಂದರು.


ಗ್ರಾಮ ಪಂಚಾಯಿತಿ ಉಪಾಧ್ಯೆ ನಾಗರತ್ನಮ್ಮ ವೆಂಕಟರಮಣಪ್ಪ, ಮಾಜಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಎ.ಮಂಜುನಾಥ್​, ಸಿ.ವಿ.ವೆಂಕಟರಮಣಪ್ಪ, ಬಿಜೆ ವೀರಭದ್ರ, ಬೆಳ್ಳಾವಿ ಲೋಕೇಶ್​, ಟಿ.ವಿ.ನಾರಾಯಣಸ್ವಾಮಿ, ರೂಪಾ, ನಾಗರಾಜ್​, ಸಂತೋಷ್​ ಇದ್ದರು.