ಬೆಂಗಳೂರು: ಮದ್ಯದ ಅಮಲಿನಲ್ಲಿ ಮನೆಯ 4ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ರಿಯಲ್ ಎಸ್ಟೇಟ್ ಉದ್ಯಮಿ ಮೃತಪಟ್ಟಿದ್ದಾರೆ.
ಮಲ್ಲತ್ತಹಳ್ಳಿಯ ಎಂಪಿಎಂ ಲೇಔಟ್ ನಿವಾಸಿ ಮುನಾಂಜಿನಪ್ಪ (63) ಮೃತರು. ಮನೆಯ 4ನೇ ಹಂತದ ಮಹಡಿಗೆ ಗುರುವಾರ ಬೆಳಗಿನ ಜಾವ 3 ಗಂಟೆಗೆ ಅಂಜಿನಪ್ಪ ತೆರಳಿದ್ದಾಗ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಮುನಾಂಜಿನಪ, ಮೂರು ಮದುವೆಯಾಗಿದ್ದು, ಬಾಗಲಗುಂಟೆಯಲ್ಲಿ ಪತ್ನಿ ಗೀತಾ ನೆಲೆಸಿದ್ದರು. ಏಳೆಂಟು ವರ್ಷಗಳಿಂದ ಗೀತಾ ಜತೆ 3ನೇ ವಿವಾಹವಾಗಿ ಆಕೆಯೊಟ್ಟಿಗೆ ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದರು.
ಪ್ರತಿದಿನ ತಡರಾತ್ರಿವರೆಗೆ ಮದ್ಯ ಸೇವಿಸಿ ನಸುಕಿನ 2 ಅಥವಾ 3 ಗಂಟೆಗೆ ಮಹಡಿಗೆ ತೆರಳಿ ವಾಕಿಂಗ್ ಮಾಡುತ್ತಿದ್ದರು. ಬುಧವಾರ ರಾತ್ರಿ ಸಹ ಮದ್ಯ ಸೇವಿಸಿದ ಅಂಜಿನಪ್ಪ, ನಂತರ ನಸುಕಿನಲ್ಲಿ 4ನೇ ಮಹಡಿಗೆ ತೆರಳಿದ್ದರು. ಆಯ ತಪ್ಪಿ ಕೆಳಗೆ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಶವದ ಮೇಲೆ ಹಲ್ಲೆ ನಡೆಸಿದ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಕೊಲೆಯಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ.
ಆದರೆ, ತನ್ನ ಗಂಡ ಮುನಾಂಜಿನಪ್ಪ ಅವರನ್ನು ಹೊಡೆದು ಗೀತಾ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಮೊದಲ ಪತ್ನಿ ಉಮಾದೇವಿ ಅನ್ನಪೂರ್ಣೇಶ್ವರಿನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜಮೀನ್ದಾರ ಮುನಾಂಜಿನಪ್ಪ, ಬಾಗಲಗುಂಟೆ, ಮಲ್ಲತ್ತಹಳ್ಳಿ ಸೇರಿದಂತೆ ವಿವಿಧೆಡೆ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದರು. ಆಸ್ತಿ ವಿಚಾರವಾಗಿ ಅವರ ಪತ್ನಿಯರ ಜತೆ ಮನಸ್ತಾಪ ಬೆಳೆದಿತ್ತು. ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. 2ನೇ ಪತ್ನಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನು 7 ವರ್ಷಗಳ ಹಿಂದೆ ವಿವಾಹಿತ ಗೀತಾ ಜತೆ 3ನೇ ವಿವಾಹವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.