ಬೆಂಗಳೂರು: ಬೆಂಗಳೂರು: ಇತ್ತೀಚೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೇಂದ್ರಿತ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಅವರ ಪ್ರತಿ ನಡೆಯೂ ಗಮನಾರ್ಹವಾಗಿ ಕಾಣಿಸಲಾರಂಭಿಸಿದೆ.
ಮುಖ್ಯಮಂತ್ರಿ ಸ್ಥಾನ ಹಿಂದುಳಿದ ಅಥವಾ ದಲಿತರಲ್ಲೇ ಉಳಿಯಬೇಕೆಂಬ ಕಾಂಗ್ರೆಸ್‌ನ ಆಂತರಿಕ ಅಭಿಯಾನದ ಭಾಗವಾಗಿ ಅವರ ಹೆಜ್ಜೆಗಳು ಕಾಂಗ್ರೆಸ್‌ನಲ್ಲೇ ತಳಮಳ ಸೃಷ್ಟಿಸಿದೆ. ಅಷ್ಟೇ ಅಲ್ಲದೇ ಅವರ ನಿರಂತರ ಸಭೆಗಳು, ಭೇಟಿಗಳು ಭವಿಷ್ಯದ ರಾಜಕೀಯ ವಿಪ್ಲವಗಳ ಮುನ್ಸೂಚನೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಈ ನಡುವೆ ಸೋಮವಾರ ಅವರ ಪ್ರತಿಕ್ರಿಯೆ ನೀಡಿದ್ದು, ಅವರ ಮಾತಲ್ಲಿ ಹಲವು ಒಳಸುಳಿಗಳು ಕಾಣಿಸಿದೆ.
‘ದೆಹಲಿ ಭೇಟಿ ಯಾವಾಗಲೂ ಇರುತ್ತೆ, 224 ಜನರಿಗೂ ಸಿಎಂ ಆಸೆ ಇರುತ್ತದೆ. ಒಂದು ಸ್ಟೆಪ್ ಹತ್ತಿದರೆ ಮಂತ್ರಿ, ಸಿನಿಯಾರಿಟಿ ಆದಮೇಲೆ ಡಿಸಿಎಂ, ಡಿಸಿಎಂ ಆದಮೇಲೆ ಸಿಎಂ
ಆಮೇಲೆ ಕೇಂದ್ರ ಸಚಿವ ಸ್ಥಾನ ಇರುತ್ತದೆ. ಸಿಎಂ ರಾಜೀನಾಮೆ ಕೊಡಬೇಕು ಆಮೇಲೆ ಎಲ್ಲ ಚರ್ಚೆ’ ಎಂದು ಹೇಳಿದರು.
ಸರಣಿ ರಹಸ್ಯ ಸಭೆಗಳ ವಿಚಾರವಾಗಿ ಮಾತನಾಡಿದ ಅವರು ‘ಕಳೆದ ಒಂದು ವರ್ಷದಿಂದ ಇದು ನಡೆಯುತ್ತಲೇ ಇದೆ. ಇನ್ನೂ ಬಸ್ ಬಂದಿಲ್ಲ’ ಎಂದರು.
ನಾವು ದೆಹಲಿಗೆ ಹೋದಾಗ ವರಿಷ್ಠರನ್ನು ಭೇಟಿ ಮಾಡುತ್ತೇವೆ. ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೇವಾಲರನ್ನು ಭೇಟಿ ಮಾಡುತ್ತೇವೆ. ಸಿದ್ದರಾಮಯ್ಯ ಪ್ರಕರಣದಲ್ಲಿ ಇನ್ನೂ ಯಾವುದೂ ಸಾಬೀತಾಗಿಲ್ಲ. ಇನ್ನು ತನಿಖೆ ನಡೆಯುತ್ತಲೇ ಇದೆ. ವರಿಷ್ಠರಿಂದ ಯಾವ ಸೂಚನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿ ಹೇಳಿದ ಪ್ರಮುಖಾಂಶ
1. ಪಕ್ಷದಲ್ಲಿ ಯಾರೂ ಕಿಂಗ್‌ಮೇಕರ್ ಆಗಲು ಆಗೋದಿಲ್ಲ. ಸಿದ್ದರಾಮಯ್ಯ ಮುಂದೆಯೂ ಸಿಎಂ ಆಗಿಯೇ ಇರುತ್ತಾರೆ. ಪಕ್ಷದಲ್ಲಿ ಯಾವ ಮುಸುಕಿನ ಗುದ್ದಾಟವೂ ಇಲ್ಲ. ಡೇ ಒನ್‌ನಿಂದಲೇ ಬಿಜೆಪಿಯವರು ಸರ್ಕಾರ ಬೀಳುತ್ತೆ ಅಂತಿದ್ದಾರೆ. ಇದೆಲ್ಲ ರಾಜಕೀಯದಲ್ಲಿ ಸ್ವಾಭಾವಿಕ.
2. ಮೊದಲೂ ನಾನು, ಪರಮೇಶ್ವರ್ ಅವರೆಲ್ಲ ಕೂಡಿ ಮಾತಾಡ್ತಿದ್ದೆವು. ಈಗಲೂ ಕೂಡಿ ಮಾತನಾಡುತ್ತಿದ್ದೇವೆ. ಇದೆಲ್ಲ ಪಾರ್ಟ್ ಆಫ್ ದಿ ಪಾರ್ಟಿ. ನಾವೆಲ್ಲ ಸಭೆ ಸೇರಿದ ಕಾರಣಕ್ಕೆ ಹೆದರಬೇಕಾಗಿಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ.
3. ನಮ್ಮ ಪಕ್ಷದ ಪರವಾಗಿ ನಾವು ನಿಂತಿದ್ದೇವೆ. ಪಕ್ಷಕ್ಕೆ 12 ಗಂಟೆ ಟೈಮ್ ಕೊಟ್ಟಿದ್ದೇವೆ. ಅದಕ್ಕಾಗಿ ನಾವೆಲ್ಲ ಹೆದರುವ ಪರಿಸ್ಥಿತಿ ಇಲ್ಲ. ಕೆಲವರು ತೆರೆಮರೆಯಲ್ಲಿ ಪಕ್ಷಕ್ಕೆ ದುಡಿಯುತ್ತಿರುತ್ತಾರೆ. ಕೆಲವರು ಹೈಲೈಟ್ ಆಗುತ್ತಾರೆ, ಕೆಲವರು ಹೈಲೈಟ್ ಆಗುವುದಿಲ್ಲ.
4. ಕೆಲವರು ಏರ್ಪೋರ್ಟ್ ರಸ್ತೆಯಲ್ಲಿ ಪೋಸ್ಟರ್ ಬ್ಯಾನರ್ ಹಾಕಿಕೊಳ್ಳುತ್ತಾರೆ. ಅಂಥವರು ಹೈಲೈಟ್ ಆಗುತ್ತಾರೆ. ಹಳ್ಳಿಯಲ್ಲಿ ಸ್ವಂತ ದುಡ್ಡಿನಿಂದ ಪಕ್ಷ ಕಟ್ಟುವವರು ಗೊತ್ತೇ ಆಗುವುದಿಲ್ಲ.
5. ವಿದೇಶಕ್ಕೆ ಹೋಗುವ ಆಸೆಯಿತ್ತು. ಇಲ್ಲೇ ಹೋದರೆ ಬೇರೆ ಚರ್ಚೆಯಾಗುತ್ತೆ, ಇನ್ನು ಇದೇಶಕ್ಕೆ ಆಪ್ತರೆಲ್ಲರನ್ನು ಕರೆದುಕೊಂಡು ಹೋದರೆ ಸುಮ್ಮನೆ ಕೂರುತ್ತಾರಾ?