ನ್ಯೂಸ್

ಸಂಪಾದಕೀಯ | ಬೆಲೆ ಏರಿಕೆಯ ಹೊರೆ

ರಾಜ್ಯದ ಜನರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬರೆ ಬೀಳತೊಡಗಿದೆ. ನಿತ್ಯೋಪಯೋಗಿ ವಸ್ತುಗಳು ಮತ್ತು ಸೇವೆಗಳ ಶುಲ್ಕ ಕಳೆದ ಒಂದು ವರ್ಷದಿಂದೀಚೆಗೆ ಪದೇಪದೆ ಹೆಚ್ಚಾಗುತ್ತಿದ್ದು, ಶ್ರೀಸಾಮಾನ್ಯರಿಗೆ ತೀವ್ರ ಹೊರೆಯಾಗಿ ಪರಿಣಮಿಸಿದೆ. ಪೆಟ್ರೋಲ್- ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ರಾಜ್ಯ ಸರ್ಕಾರ ಕಳೆದ ವರ್ಷದ ಜೂನ್ ಹೆಚ್ಚಿಸಿತ್ತು. ಪರಿಣಾಮವಾಗಿ ಎರಡೂ ಇಂಧನಗಳ ಬೆಲೆ ಏರಿಕೆಯಾಗಿತ್ತು. ಡೀಸೆಲ್ ಬೆಲೆ ಏರಿದರೆ ಸರಕು ಸಾಗಣೆ ಮೇಲೆ ಅದರ ಪರಿಣಾಮವಾಗಿ ಜನರ ನಿತ್ಯಬಳಕೆ ವಸ್ತುಗಳ ಬೆಲೆ ಹೆಚ್ಚುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದಾದ ಬಳಿಕ ಕಳೆದ ಡಿಸೆಂಬರ್​ನಲ್ಲಿ ಸರ್ಕಾರ ರಾಜ್ಯದಲ್ಲಿ ನೋಂದಣಿಯಾಗುವ ವಾಹನಗಳ ಮೇಲಿನ ರಸ್ತೆ ತೆರಿಗೆಯನ್ನು ಹೆಚ್ಚಿಸಿತ್ತು.

ದ್ವಿಚಕ್ರವಾಹನಗಳ ಮೇಲೆ ಐನೂರು, ಕಾರುಗಳ ಮೇಲೆ ಸಾವಿರ ರೂ., ಸಾರಿಗೆ ವಾಹನಗಳ ಮೇಲೆ ಶೇ. 3 ಹೆಚ್ಚುವರಿ ಸೆಸ್, ಎಲೆಕ್ಟ್ರಿಕ್ ವೆಹಿಕಲ್​ಗಳ ಮೇಲೆ ಶೇ. 10ರಷ್ಟು ಜೀವಿತಾವಧಿ ತೆರಿಗೆ ವಿಧಿಸಿತ್ತು. ನಂತರ ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಲಭ್ಯವಿದ್ದ ಕಡಿಮೆ ಬೆಲೆಯ ಸ್ಟಾಂಪ್ ಪೇಪರ್​ಗಳನ್ನು ಹಿಂತೆಗೆದುಕೊಂಡಿದ್ದರಿಂದ ಜನರು ಅನಿವಾರ್ಯವಾಗಿ ಹೆಚ್ಚಿನ ಬೆಲೆಯ ಸ್ಟಾಂಪ್​ಪೇಪರ್​ಗಳನ್ನು ಬಳಸುವಂತಾಯಿತು. ಇತ್ತೀಚೆಗೆ ವೃತ್ತಿಪರ ತೆರಿಗೆಯನ್ನೂ 100 ರೂ.ಗಳಷ್ಟು ಹೆಚ್ಚಿಸಲು ಮುಂದಾಗಿದೆ. ಬೆಂಗಳೂರಿನಲ್ಲಿ ಬಹಳಷ್ಟು ಸಾರ್ವಜನಿಕರು ಬಳಸುತ್ತಿರುವ ಮೆಟ್ರೋ ರೈಲಿನ ಪ್ರಯಾಣ ದರವೂ ಇತ್ತೀಚೆಗಷ್ಟೇ ಏರಿಕೆಯಾಗಿದೆ.

ಇಷ್ಟು ಸಾಲದೆಂಬಂತೆ ರಾಜ್ಯ ಸರ್ಕಾರ ಇದೀಗ ನಿತ್ಯೋಪಯೋಗಿ ಪದಾರ್ಥವಾದ ಹಾಲಿನ ಬೆಲೆಯನ್ನೂ ಏರಿಸಿದೆ. ಕಳೆದ ಎರಡು ವರ್ಷಗಳಲ್ಲಿ ಹಾಲಿನ ಬೆಲೆ ಏರುತ್ತಿರುವುದು ಇದು ಮೂರನೇ ಬಾರಿ. 2023ರ ಆ. 1ರಿಂದ ಪ್ರತಿ ಲೀಟರ್​ಗೆ 3 ರೂ. ಏರಿಸಲಾಗಿತ್ತು. ನಂತರ 2024ರ ಜುಲೈನಲ್ಲಿ ಹಾಲಿನ ಎಲ್ಲ ಪ್ಯಾಕೆಟ್​ಗಳಲ್ಲಿ 50 ಮಿಲಿಲೀಟರ್ ಹಾಲಿನ ಪ್ರಮಾಣ ಹೆಚ್ಚಿಸಿ 2 ರೂ. ದರ ಏರಿಸಿತ್ತು. ಈಗ ಮತ್ತೆ ಸಾಗಣೆ, ಸಂಸ್ಕರಣೆ ಮತ್ತು ವೇತನ ವೆಚ್ಚ ಹೆಚ್ಚಾಗಿರುವ ಕಾರಣ ನೀಡಿ ಲೀಟರ್​ಗೆ 4 ರೂ.ನಷ್ಟು ಹೆಚ್ಚಳ ಮಾಡಲಾಗಿದೆ. ಪರಿಣಾಮವಾಗಿ ಈಗಾಗಲೇ ಒಮ್ಮೆ ಏರಿಕೆಯಾಗಿದ್ದ ಹೋಟೆಲ್ ಕಾಫಿ-ಟೀ ಬೆಲೆ ಈಗ ಮತ್ತೊಮ್ಮೆ ಹೆಚ್ಚುವ ಸಾಧ್ಯತೆ ಇದೆ.

ಇದರ ಜೊತೆಗೆ, ಪಿಂಚಣಿ ಮತ್ತು ಗ್ರ್ಯಾಚುಟಿ ವೆಚ್ಚ ಭರಿಸುವ ಕಾರಣ ಮುಂದಿಟ್ಟು ಎಲ್ಲ ವರ್ಗದ ಬಳಕೆದಾರರಿಗೆ ವಿದ್ಯುತ್ತಿನ ದರವನ್ನು ಹೆಚ್ಚಿಸಿದ್ದ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ (ಕೆಇಆರ್​ಸಿ) ಈಗ ಮತ್ತೆ ಎಲ್ಲ ಎಸ್ಕಾಂಗಳ ವಾರ್ಷಿಕ ಬೆಲೆ ಹೆಚ್ಚಳ ಪ್ರಸ್ತಾವನೆ ಮುಂದಿಟ್ಟುಕೊಂಡು ವಿದ್ಯುತ್ ಬೆಲೆ ಏರಿಸಿದೆ. ಈಗಾಗಲೇ ಸಾಕಷ್ಟು ಬೆಲೆ ಏರಿಕೆಯ ಹೊರೆ ಹೊತ್ತಿದ್ದ ಸಾರ್ವಜನಿಕರಿಗೆ ಹಾಲು-ವಿದ್ಯುತ್ ದರ ಹೆಚ್ಚಳದಿಂದಾಗಿ ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಹೀಗಾದರೆ ಬಡ-ಮಧ್ಯಮ ವರ್ಗದ ಜನರು ಬದುಕುವುದೆಂತು? ದರ ಏರಿಸುವ ಸಂದರ್ಭದಲ್ಲಿ ಸರ್ಕಾರ, ಜನಸಾಮಾನ್ಯರ ಕಷ್ಟಕಾರ್ಪಣ್ಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳಿತು.