ಗೋಪಾಲಕೃಷ್ಣ ಬೇಳೂರು 
ನ್ಯೂಸ್

ಸೇತುವೆ ನಿರ್ಮಿಸಿದ್ದು ಕೇಂದ್ರ ಸರ್ಕಾರ, ಬಿಜೆಪಿಯಲ್ಲ

ಸಾಗರ: ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ನಿರ್ಮಿಸಿದ್ದು ಕೇಂದ್ರ ಸರ್ಕಾರದ ಹಣದಿಂದಲೇ ಹೊರತು ಬಿಜೆಪಿ ಪಕ್ಷದಿಂದ ಅಲ್ಲ. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ ತುಮರಿಯಲ್ಲಿ ಟೆಂಟ್ ಹಾಕಿಕೊಂಡು ಕುಳಿತುಕೊಂಡು, ಸೇತುವೆ ಮಾಡಿದ್ದು ನಾವು ಎಂದು ಬಂದವರಿಗೆಲ್ಲ ಪ್ರಚಾರ ಮಾಡುವುದು ಒಳ್ಳೆಯದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಲೇವಡಿ ಮಾಡಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬಾರಗೋಡ್ಲು-ಕಳಸವಳ್ಳಿ ಸೇತುವೆಗೆ ಕೇಂದ್ರ ಸರ್ಕಾರದಿಂದ ಹಣ ಕೊಟ್ಟಿದ್ದಾರೆ. ನಮ್ಮ ರಾಜ್ಯದ ತೆರಿಗೆ ಹಣ ಕೊಟ್ಟಿದ್ದಾರೆಯೇ ಹೊರತು ಬಿ.ವೈ.ರಾಘವೇಂದ್ರ, ವಿಜಯೇಂದ್ರ ಮನೆಯಿಂದ ಹಣ ಕೊಟ್ಟು ಸೇತುವೆ ಮಾಡಿಲ್ಲ. ಆದರೆ ವಾರಕ್ಕೊಮ್ಮೆ ಬಂದು ನಾನೇ ಸೇತುವೆ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿರುವ ಸಂಸದ ರಾಘವೇಂದ್ರ ಅವರ ವರ್ತನೆ ಹಾಸ್ಯಾಸ್ಪದ. ಶರಾವತಿ ಹಿನ್ನೀರಿನ ಪ್ರದೇಶದ ಜನರ ತ್ಯಾಗ ಬಹುದೊಡ್ಡದು. ಮೊದಲು ಅವರಿಗೆ ಗೌರವ ಸಲ್ಲಿಸಬೇಕು ಎಂದರು.

ಸೇತುವೆಗೆ ಮೊದಲು ಮನವಿ ಮಾಡಿದ್ದೇ ನಾನು. ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿ ಆಗಿದ್ದಾಗ ಸಿಗಂದೂರು ಕ್ಷೇತ್ರಕ್ಕೆ ಸೇತುವೆ ನಿರ್ಮಿಸುವುದಾಗಿ ಮಾತು ಕೊಟ್ಟಿದ್ದರು. ನಂತರ ಸಂಸದರಾದ ಮೇಲೆ ನಿತಿನ್ ಗಡ್ಕರಿ ಮೇಲೆ ಒತ್ತಡ ತಂದು ಸೇತುವೆ ಮಂಜೂರು ಮಾಡಿಸಿದ್ದಾರೆ. ಸೇತುವೆ ನಿರ್ಮಾಣದ ಶ್ರೇಯ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಬೇಕು. ಅವರ ಶ್ರಮ ಎಂದಿಗೂ ಮರೆಯುವಂತಿಲ್ಲ. ಆದರೆ ಇದರಲ್ಲಿ ರಾಘವೇಂದ್ರ ಕೊಡುಗೆ ಏನೂ ಇಲ್ಲ ಎಂದು ಟೀಕಿಸಿದರು.

ಸೇತುವೆ ಲೋಕಾರ್ಪಣೆಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಸಚಿವ ನಿತಿನ್ ಗಡ್ಕರಿ ಅವರನ್ನೇ ಕರೆಸಲಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವುದು ನಾನೇ. ನನ್ನ ಗಮನಕ್ಕೆ ಬಾರದೆ ಸೇತುವೆ ಲೋಕಾರ್ಪಣೆಗಾಗಿ ಸ್ಥಳ ಗುರುತಿಸುವುದು, ಇನ್ನಿತರೆ ಚಟುವಟಿಕೆ ನಡೆಸಿದರೆ ಸಹಿಸುವುದಿಲ್ಲ. ಸೇತುವೆ ನಿರ್ಮಿಸುತ್ತಿರುವುದು ರಾಜ್ಯ ಸರ್ಕಾರ. ಹಾಗೆಂದ ಮಾತ್ರಕ್ಕೆ ಇದನ್ನು ನಾನೇ ಮಾಡಿಸಿದ್ದೇನೆ ಎಂದು ಹೇಳಿಕೊಂಡರೆ ಅದಕ್ಕೆ ಅರ್ಥವೇ ಇಲ್ಲ ಎಂದರು.

ನಮ್ಮದು 140 ಶಾಸಕರು ಇರುವ ಜಂಬೂಸವಾರಿ. ಸಣ್ಣಪುಟ್ಟ ಗೊಂದಲ ಇರುವುದು ಸಹಜ. ಶಾಸಕರ ಸಮಸ್ಯೆ ಆಲಿಸಲು ಸುರ್ಜೇವಾಲ ಬಂದಿದ್ದಾರೆ. ಸೂಟ್‌ಕೇಸ್ ಒಯ್ಯಲು ಬಂದಿದ್ದಾರೆ ಎಂದು ಸಿ.ಟಿ.ರವಿ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇವೆ. ಬಹುಶಃ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ವರಿಷ್ಠರು ಸೂಟ್‌ಕೇಸ್ ತೆಗೆದುಕೊಂಡು ಹೋಗಲು ರಾಜ್ಯಕ್ಕೆ ಬರುತ್ತಿದ್ದರೇನೋ? ಅದಕ್ಕೆ ನಮ್ಮ ಪಕ್ಷದ ವರಿಷ್ಠರ ಬಗ್ಗೆ ಹೇಳುತ್ತಿದ್ದಾರೆ ತಿರುಗೇಟು ನೀಡಿದರು.