ನ್ಯೂಸ್

ಭಾವನಾತ್ಮಕ ವಿಚಾರಗಳೇ ಬಿಜೆಪಿ ರಾಜಕೀಯ ಬಂಡವಾಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟೀಕೆ

ಬೆಂಗಳೂರು: ಬಿಜೆಪಿ ಅಭಿವೃದ್ಧಿಯ ವಿಚಾರಗಳನ್ನಿಟ್ಟು ಯಾವತ್ತೂ ಚುನಾವಣೆ ಎದುರಿಸುವ ಧೈರ್ಯ ತೋರಿಸುವುದಿಲ್ಲ, ಕೇವಲ ಭಾವನಾತ್ಮಕ ವಿಚಾರಗಳನ್ನು ಮಾತ್ರ ಮುಂದು ಮಾಡುತ್ತದೆ. ಇದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದರು. ಬೆಂಗಳೂರಿನಲ್ಲಿ ಶನಿವಾರ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಆರ್ಟಿಕಲ್ 370, ಗೋಹತ್ಯೆ, ಮತಾಂತರ ನಿಷೇಧದಂತಹ ವಿಚಾರ ಬಿಟ್ಟು ಅಭಿವೃದ್ಧಿ ಯೋಜನೆಗಳಿವೆಯೇ? ಏಕೆಂದರೆ ಅಭಿವೃದ್ಧಿ ಕಾರ್ಯಗಳನ್ನೇ ಅವರು ಮಾಡಿಲ್ಲ. ಕಳೆದ 7 ವರ್ಷಗಳ ಆಡಳಿತದಲ್ಲಿ ಬಿಜೆಪಿ ಸರ್ಕಾರ ಯಾವುದಾದರೂ ಒಂದು ವರ್ಗಕ್ಕೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿಗೆ ತಂದಿದೆಯಾ? ಅವರ ಅಜೆಂಡಾ ಬೇರೆ. ದೇವಾಲಯ, ಜಾತಿ, ಧರ್ಮ ವಿಚಾರವಾಗಿ ಸಮಾಜ ಒಡೆಯುವುದು ಅವರ ಅಜೆಂಡಾ ಎಂದು ತರಾಟೆಗೆ ತೆಗೆದುಕೊಂಡರು.

ಸದಸ್ಯತ್ವಕ್ಕೆ ಆದ್ಯತೆ: ಯುವ ಕಾಂಗ್ರೆಸ್​ನಲ್ಲಿ ಯುವಕರು ಹಾಗೂ ನಿರುದ್ಯೋಗಿಗಳ ವಿಭಾಗವಿದೆ. ನೀವು ಸದಸ್ಯತ್ವ ಮಾಡಲು ಹೋದಾಗ ಅಲ್ಲಿ ಎಷ್ಟು ಜನ ಎಸ್​ಎಸ್​ಎಲ್​ಸಿಯಿಂದ ಪದವಿವರೆಗೂ ಓದಿದ್ದಾರೆ, ಅವರಲ್ಲಿ ಎಷ್ಟು ಜನ ನಿರುದ್ಯೋಗಿಗಳು ಎಂಬುದನ್ನು ಪಟ್ಟಿ ಮಾಡಿ. ಇದಕ್ಕೆ ಬೇಕಾದ ಬೆಂಬಲವನ್ನು ನಾನು ನೀಡುತ್ತೇನೆ ಎಂದು ಡಿಕೆಶಿ ತಿಳಿಸಿದರು. ಯುವ ಕಾಂಗ್ರೆಸ್​ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲಪಾಡ್ ಮತ್ತಿತರರಿದ್ದರು.

ನಿರುದ್ಯೋಗದ ವಿರುದ್ಧ ಪಾದಯಾತ್ರೆ: ನೀವು ನಿರುದ್ಯೋಗಿಗಳ ಅಂಕಿ-ಅಂಶ ಪಡೆಯಿರಿ. ನಂತರ ತಾಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ಮಾಡೋಣ. ಆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸೋಣ. ತಾಲೂಕಿನಲ್ಲಿ 5 ಸಾವಿರ ನಿರುದ್ಯೋಗಿಗಳು ಸಿಗುವುದಿಲ್ಲವೇ? ಮುಂದಿನ ಒಂದು ತಿಂಗಳು ಇದನ್ನೇ ಮಾಡಿ. ತಾಲೂಕಿಗೆ 5 ಸಾವಿರದಂತೆ 200 ಕ್ಷೇತ್ರಗಳಲ್ಲಿ 10 ಲಕ್ಷ ಜನ ಸಿಗುತ್ತಾರೆ. ಪ್ರತಿ ವಿಭಾಗದಲ್ಲಿ 1 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡಿದರೆ ಒಂದು ಸರ್ಕಾರವನ್ನು ತೆಗೆಯಲು ಆಗುವುದಿಲ್ಲವೇ? ಎಂದು ಹೇಳಿದರು. ಯುವ ಕಾಂಗ್ರೆಸಿಗರು 2 ಸಾವಿರ ಸದಸ್ಯರ ನೇಮಕ ಮಾಡಿರುವುದಾಗಿ ಹೇಳಿದ್ದಾರೆ. ನಿಮ್ಮ ಸಾಮರ್ಥ್ಯಕ್ಕೆ ಈ ಗುರಿ ನಾಚಿಕೆ ತರುವಂತಹದ್ದಾಗಿದೆ. ನೀವು ಪದಾಧಿಕಾರಿಗಳಾಗಲು 80 ಸಾವಿರ, ಲಕ್ಷದವರೆಗೂ ಸದಸ್ಯರನ್ನು ಮಾಡಿದ್ದೀರಿ. ಅದರಲ್ಲಿ ಅರ್ಧದಷ್ಟು ಮಾಡಲು ಸಾಧ್ಯವಿಲ್ಲವೇ? ನಿಮ್ಮಲ್ಲಿ ಯಾರಾದರೂ ನಾಲ್ಕು ಜನ 50 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಮಾಡಿದರೆ, ಅವರನ್ನು ಕೆಪಿಸಿಸಿ ಕಾರ್ಯದರ್ಶಿಗಳಾಗಿ ನೇಮಕ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ನಾಳೆ ಚುನಾವಣೆ ನಡೆದರೂ ಎದುರಿಸಲು ಸಿದ್ಧ: ರಾಜ್ಯ ವಿಧಾನಸಭೆಗೆ ನಾಳೆಯೇ ಚುನಾವಣೆ ನಡೆಸಿದರೂ ಎದುರಿಸಲು ಕಾಂಗ್ರೆಸ್ ಪಕ್ಷ ಸಂಪೂರ್ಣ ಸಿದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. 5 ರಾಜ್ಯಗಳ ಫಲಿತಾಂಶಕ್ಕೂ ನಮ್ಮ ರಾಜ್ಯದ ವಿಧಾನಸಭಾ ಚುನಾವಣೆಗೂ ಸಂಬಂಧವೇ ಇಲ್ಲ ಎಂದರು. ಪಂಜಾಬ್​ನಲ್ಲಿ ಸರ್ಕಾರ ಇತ್ತು, ಅಲ್ಲಿ ಸೋತಿದ್ದೇವೆ. ಬೇರೆ ರಾಜ್ಯಗಳಲ್ಲಿ ನಮ್ಮ ಸರ್ಕಾರ ಇರಲಿಲ್ಲ. ನಾವೇನೂ ಕಳೆದುಕೊಂಡಿಲ್ಲ. ತಮಿಳುನಾಡು, ಕೇರಳ, ಪಶ್ಚಿಮಬಂಗಾಲದಲ್ಲಿ ಬಿಜೆಪಿ ಏನು ದಿಗ್ವಿಜಯ ಸಾಧಿಸಿದೆಯೇ? ನಾಲ್ಕು ರಾಜ್ಯದಲ್ಲಿ ಗೆದ್ದ ಕೂಡಲೇ ಬೀಗುವಂತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

ದೆಹಲಿಗೆ ಡಿಕೆಶಿ ದೌಡು: ಡಿ.ಕೆ.ಶಿವಕುಮಾರ್ ದೆಹಲಿಗೆ ಶನಿವಾರ ರಾತ್ರಿ ಪ್ರಯಾಣ ಬೆಳೆಸಿದ್ದು, ದೀರ್ಘಾವಧಿಯಿಂದ ನನೆಗುದಿಗೆ ಬಿದ್ದಿರುವ ಪದಾಧಿಕಾರಿಗಳ ನೇಮಕ ಪಟ್ಟಿಗೆ ಅನುಮತಿ ಪಡೆಯಲೆಂದೇ ವರಿಷ್ಠರ ಬಳಿಗೆ ದೌಡಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪದಾಧಿಕಾರಿಗಳ ನೇಮಕದ ಪಟ್ಟಿ ಸಹಿತ ಬರಬೇಕೆಂದು ವರಿಷ್ಠರು ನೀಡಿದ ಬುಲಾವ್ ಮೇರೆಗೆ ತೆರಳಿದ್ದು, ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾಗಿ ಪದಾಧಿಕಾರಿಗಳ ನೇಮಕದ ಬಗ್ಗೆ ರ್ಚಚಿಸಿ ಒಪ್ಪಿಗೆ ಪಡೆಯುವರು. ಜತೆಗೆ ಸಕ್ರಿಯ ಸದಸ್ಯತ್ವ ನೋಂದಣಿ ಪ್ರಗತಿ ಮಾಹಿತಿ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿರುವ ಬಿಜೆಪಿಯವರ ವರ್ತನೆ ನೋಡಿದರೆ, ರಾಜ್ಯ ವಿಧಾನಸಭೆಗೆ ಅವಧಿಗೆ ಮುನ್ನ ಚುನಾವಣೆ ನಡೆಯುವ ಸಾಧ್ಯತೆಗಳಿಲ್ಲ. ಒಂದು ವೇಳೆ ಅಸೆಂಬ್ಲಿ ಎಲೆಕ್ಷನ್ ಘೊಷಿಸಿದರೂ ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ. | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ

ಸಿದ್ದು ಕ್ಷೇತ್ರದಲ್ಲಿ ಗಿಫ್ಟ್ ರಾಜಕೀಯ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ಬ್ಲಾಕ್ ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಸಲು ಬಂಪರ್ ಬಹುಮಾನದ ಆಮಿಷ ನೀಡಲಾಗಿದೆ. ಮಾ.1 ರಿಂದ 31 ರವರೆಗೆ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಬಾದಾಮಿ ಮತ್ತು ಗುಳೇದುಗುಡ್ಡ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರು 5 ಸಾವಿರ ಸದಸ್ಯತ್ವ ಮಾಡಿಸಿದರೆ ಅಂತವರಿಗೆ ಫ್ರಿಡ್ಜ್, 3 ಸಾವಿರ ಸದಸ್ಯತ್ವ ಮಾಡಿಸಿದಲ್ಲಿ ಎಲ್​ಇಡಿ ಟಿವಿ ಹಾಗೂ 2 ಸಾವಿರ ಸದಸ್ಯತ್ವ ಮಾಡಿಸಿದರೆ ಮೊಬೈಲ್ ಕೊಡುಗೆ ನೀಡುವುದಾಗಿ ಮುಖಂಡರು ಘೊಷಿಸಿದ್ದಾರೆ. ಕಾಂಗ್ರೆಸ್​ನ ಗಿಫ್ಟ್ ಬಗ್ಗೆ ಜಾಲ ತಾಣದಲ್ಲಿ ಬಿಜೆಪಿ ಬೆಂಬಲಿಗರು ಟೀಕೆ ಮಾಡುತ್ತಿದ್ದಾರೆ.