ನ್ಯೂಸ್

ಆತ್ಮನಿರ್ಭರತೆ ಅಗತ್ಯ ಹೆಚ್ಚಿಸಲಿರುವ ಬೈಡೆನ್ ಆಡಳಿತ

| ಪ್ರೇಮಶೇಖರ ರಾಜಕೀಯ ವಿಶ್ಲೇಷಕರು

ಮುಂದಿನ ಎರಡೂವರೆ ತಿಂಗಳಲ್ಲಿ ಯಾವುದೇ ಬಗೆಯ ಪ್ರಳಯ ಆಗದಿದ್ದಲ್ಲಿ 2021ರ ಜನವರಿ 20ರಂದು 78 ವರ್ಷದ ಜೋಸೆಫ್ ರಾಬಿನೆಟ್ ಬೈಡೆನ್ ಜ್ಯೂನಿಯರ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

ಭಾರತದ ಬಗ್ಗೆ ಬೈಡೆನ್ ಆಡಳಿತದ ನೀತಿನಿಲುವುಗಳು ಹೇಗಿರಬಹುದೆಂದು ಲೆಕ್ಕಹಾಕುವುದು ನಮಗೆ ಮುಖ್ಯವಾಗುತ್ತದೆ, ಅದಕ್ಕೆ ಪೂರ್ವಭಾವಿಯಾಗಿ, ಅಮೆರಿಕದ ಜತೆಗಿನ ಸಂಬಂಧಗಳು ನಮಗೆ ಏಕೆ ಮುಖ್ಯವಾಗುತ್ತವೆ, ಅದೂ ಇಂದಿನ ಸನ್ನಿವೇಶದಲ್ಲಿ, ಎನ್ನುವ ಪ್ರಶ್ನೆಯತ್ತ ಮೊದಲಿಗೆ ಗಮನ ಹರಿಸಬೇಕು.

ವಿದೇಶನೀತಿ ಹಾಗೂ ಸುರಕ್ಷೆಗೆ ಸಂಬಂಧಿಸಿದಂತೆ ಭಾರತ ಸದ್ಯಕ್ಕೆ ಎದುರಿಸುತ್ತಿರುವ ಹಲವು ಸಮಸ್ಯೆಗಳಲ್ಲಿ ಪ್ರಮುಖವಾಗಿರುವುದು ಚೀನಾವನ್ನು ಕುರಿತಾಗಿನದು. ಪ್ರಸಕ್ತ ಕರೊನಾ ಸಂದರ್ಭದಲ್ಲಿ ಭಾರತವನ್ನು ಮತ್ತಷ್ಟು ಧೃತಿಗೆಡಿಸುವ ಉದ್ದೇಶದಿಂದ ಲಡಾಖ್​ನಲ್ಲಿ ಆರು ತಿಂಗಳುಗಳಿಂದಲೂ ಚೀನಾ ಅನುಸರಿಸುತ್ತಿರುವ ಆಕ್ರಮಣಕಾರಿ ನೀತಿ ಸರ್ವವಿದಿತ. ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ ಚೀನಾವನ್ನು ಸಮರ್ಥವಾಗಿ ಎದುರಿಸಲು ನಮಗೆ ಸಹಕಾರಿಯಾಗಿ ಬಂದದ್ದು ನಮ್ಮದೇ ಸರ್ಕಾರದ ದೃಢನೀತಿ ಹಾಗೂ ಸೇನೆಯ ದೃಢಸಂಕಲ್ಪದ ಜತೆಗೆ ಅಮೆರಿಕ ನೀಡಿದ ಸಂಪೂರ್ಣ ರಾಜತಾಂತ್ರಿಕ ಬೆಂಬಲ ಹಾಗೂ ಸೇನಾ ಸಹಕಾರದ ಆಶ್ವಾಸನೆ. ನಿಜ ಹೇಳಬೇಕೆಂದರೆ, ಈ ಸಹಕಾರ, ಚೀನಾವನ್ನು ಹಂತಹಂತವಾಗಿ ನಿರ್ವೀರ್ಯಗೊಳಿಸಬೇಕೆಂಬ ಟ್ರಂಪ್ ಆಡಳಿತದ ಖಡಕ್ ನೀತಿಯ ಭಾಗವಾಗಿತ್ತು. ಆದರೀಗ ಅಧಿಕಾರಕ್ಕೆ ಬರಲಿರುವ ಬೈಡೆನ್ ಹಿಂದಿನ ಸರ್ಕಾರದ ನೀತಿಗಳನ್ನೇ ಮುಂದುವರಿಸಬಹುದೇ ಎಂಬ ಬಗ್ಗೆ ಪ್ರಶ್ನೆಗಳೇಳುತ್ತಿವೆ. ಇದಕ್ಕೆ ಕಾರಣ ಹಿಂದಿನ ಡೆಮೋಕ್ರಾಟಿಕ್ ಅಧ್ಯಕ್ಷ ಬರಾಕ್ ಒಬಾಮ ಚೀನಾ ಬಗ್ಗೆ ಮೃದುನೀತಿ ಅನುಸರಿಸಿದ್ದರು ಮತ್ತು ಆ ಕಾರಣದಿಂದಲೇ ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರಗಳಲ್ಲಿ ಚೀನಾ ಕಂಟಕಕಾರಿಯಾಗಿ ಬೆಳೆಯಲು ಸಾಧ್ಯವಾಯಿತು. ಆಗ ಇದೇ ಜೋ ಬೈಡೆನ್ ಉಪಾಧ್ಯಕ್ಷರಾಗಿದ್ದರು. ಹಾಗೆಂದ ಮಾತ್ರಕ್ಕೆ ಬೈಡೆನ್ ಇಂದೂ ಚೀನಾ ಬಗ್ಗೆ ಮೃದುವಾಗಿದ್ದಾರೆಯೇ? ಪ್ರಸಕ್ತ ಸನ್ನಿವೇಶದಲ್ಲಿ ಅಮೆರಿಕದ ಹಿತಾಸಕ್ತಿಗಳಿಗೆ ಪ್ರಾಮುಖ್ಯ ನೀಡುವ ಯಾವುದೇ ಅಧ್ಯಕ್ಷ ಚೀನಾ ಬಗ್ಗೆ ಮೃದುನೀತಿ ಅನುಸರಿಸಲು ಸಾಧ್ಯವಿಲ್ಲ. ಆದರೆ, ಟ್ರಂಪ್ ಮಾಡಿದಂತೆ ತನ್ನ ಚೀನಾ-ವಿರೋಧಿ ನೀತಿಯಲ್ಲಿ ಬೈಡೆನ್ ಭಾರತವನ್ನು ಭಾಗಿಯಾಗಿಸಿಕೊಳ್ಳುತ್ತಾರೆಯೇ ಎನ್ನುವುದು ಅನುಮಾನ. ಯಾಕೆಂದರೆ ಡೆಮಾಕ್ರಟಿಗರ ಜಾಯಮಾನವೇನೆಂದರೆ ಅವರು ಅಮೆರಿಕದ ಸಂಘರ್ಷಗಳಲ್ಲಿ ಸಂಯುಕ್ತ ಮೋರ್ಚಾಗಳನ್ನು ಸ್ಥಾಪಿಸಿಕೊಳ್ಳುವುದು ಕಡಿಮೆ. ಹೀಗಾಗಿ ಬೈಡೆನ್​ರ ಅಮೆರಿಕ, ಚೀನಾ ಜತೆಗಿನ ತನ್ನ ಸಂಘರ್ಷವನ್ನು ತಾನೇ ನಿರ್ವಹಿಸುತ್ತದೆ ಮತ್ತು ಆ ಕಾರಣದಿಂದಲೇ ಭಾರತಕ್ಕೆ ಅಗತ್ಯವೆನಿಸಿದಾಗ ಬೆಂಬಲ ನೀಡುವ ದಾಕ್ಷಿಣ್ಯ ಅಥವಾ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತದೆ ಎಂದು ರ್ತಸಬಹುದಾಗಿದೆ.

ಕಳೆದ 50-100 ವರ್ಷಗಳಲ್ಲಿ ಅಮೆರಿಕಗೆ ಬಂದು ನೆಲೆಸಿರುವ ವಲಸಿಗರು ಮತ್ತು ಅವರ ವಂಶಸ್ಥರು ಡೆಮಾಕ್ರ್ರಗರ ಮುಖ್ಯ ವೋಟ್ ಬ್ಯಾಂಕ್. ಹೀಗಾಗಿಯೇ ಡೆಮಾಕ್ರಟಿಗರು ಉದಾರವಾದ, ಸೆಕ್ಯೂಲರಿಸಂ ಮುಂತಾದವನ್ನು ಮುಕ್ತವಾಗಿ ಪಾಲಿಸುತ್ತಾರೆ. ಹೀಗಾಗಿಯೇ, ಬೈಡೆನ್, ಅವರಿಗಿಂತಲೂ ಮುಖ್ಯವಾಗಿ ಕಮಲಾ ಹ್ಯಾರಿಸ್ ಸಿಎಎ, ಎನ್​ಆರ್​ಸಿಗಳ ವಿಷಯದಲ್ಲಿ ಭಾರತವನ್ನು ಉಗ್ರವಾಗಿ ಖಂಡಿಸಿದ್ದು, ‘ನೀವು ಒಂಟಿಯಲ್ಲ, ನಿಮ್ಮ ಜತೆ ನಾವಿದ್ದೇವೆ. ಅಗತ್ಯ ಬಿದ್ದರೆ ನಿಮ್ಮ ಪರವಾಗಿ ನಾವು ಮಧ್ಯಪ್ರವೇಶಿಸುತ್ತೇವೆ’ ಎಂದು ಕಾಶ್ಮೀರಿಗಳಿಗೆ ಹೇಳಿದ್ದು. ಈ ನೀತಿ ಏಕಾಏಕಿ ಬದಲಾಗುವುದಿಲ್ಲ. ಹೀಗಾಗಿ ತಮ್ಮ ಪರಂಪರಾಗತ ಸಿದ್ಧಾಂತ ನಿಷ್ಠೆಯಿಂದಾಗಿ ಡೆಮಾಕ್ರಟಿಗರು ಭಾರತದ ಸಹಕಾರಕ್ಕೆ ಬೇಕೆಂದಾಗ ಬರಲಾರರು, ಬಂದರೂ ಕೆಲವು ಷರತ್ತುಗಳನ್ನು ವಿಧಿಸಿಯೇ ಬರುತ್ತಾರೆ. ಇದು ಇಂದು ನಮಗೆ ಸಿಹಿಸುದ್ದಿಯೇನಲ್ಲ.

ಆದರೆ, ಬೇರೆಯವೇ ಕೆಲವು ಸಿಹಿಸುದ್ದಿಗಳಿವೆ. ಇರಾನ್ ಬಗ್ಗೆ ಡೆಮಾಕ್ರ್ರಗರು ಮೃದುನೀತಿ ಅನುಸರಿಸುವುದು ನಿಶ್ಚಿತ. ಟ್ರಂಪ್ ಆಡಳಿತದ ಬಿಗಿನೀತಿಯಿಂದಾಗಿ ಆ ದೇಶದ ಜತೆ ಎಲ್ಲ ಬಗೆಯ ಆರ್ಥಿಕ ಸಂಬಂಧಗಳನ್ನು ಕಡಿದುಕೊಳ್ಳುವ ಒತ್ತಡಕ್ಕೆ ನಾವು ಸಿಕ್ಕಿಬಿದ್ದಿದ್ದೆವು. ಅದು ಮುಂದಿನ ದಿನಗಳಲ್ಲಿ ಬದಲಾಗಬಹುದು. ಪರಿಣಾಮವಾಗಿ ಹತ್ತಿರದ ಇರಾನ್​ನಿಂದ ನಾವು ಮತ್ತೆ ತೈಲ ಖರೀದಿಸುವಂತಾಗಬಹುದು, ಚಬಹಾರ್ ಬಂದರಿನಲ್ಲಿ ನಿಂತುಹೋಗಿರುವ ಕೆಲಸಕಾರ್ಯಗಳನ್ನು ಪುನರಾರಂಭಿಸಬಹುದು.

ಒಟ್ಟಿನಲ್ಲಿ ಬೈಡೆನ್ ಆಡಳಿತ ನಮಗೆ ಸಿಹಿಕಹಿಗಳೆರಡನ್ನೂ ತರಲಿದೆ. ಅದಕ್ಕನುಗುಣವಾಗಿ ನಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ‘ಆತ್ಮನಿರ್ಭರ’ ಆಗಬೇಕಾದ ಅಗತ್ಯವನ್ನೂ ನಮಗೆ ಮನಗಾಣಿಸುತ್ತದೆ.