ತಾಯಿಯ ಎದೆಹಾಲು ಅಮೃತ ಸಮಾನ. ಮಗುವಿಗೆ ಹಾಲುಣಿಸುವಾಗ ತಾಯಿಯು ಆಸ್ವಾದಿಸುವ ಮಾತೃತ್ವದ ಸವಿ ವರ್ಣನಾತೀತ. ಶಿಶುವಿನ ಆರೋಗ್ಯಕರ ಬೆಳವಣಿಗೆಗೂ ಇದು ಪೂರಕ. ಈ ವೈಜ್ಞಾನಿಕ ವಾಸ್ತವಿಕತೆಯನ್ನು ಅರಿತುಕೊಂಡಿದ್ದ ನಮ್ಮ ಪೂರ್ವಿಕರು ಮಗುವಿಗೆ ಹಾಲುಣಿಸುವ ಕ್ರಮಕ್ಕೆ ದೈವಿಕ ಸ್ಥಾನಮಾನ ನೀಡಿ ಪ್ರೋತ್ಸಾಹಿಸುತ್ತಿದ್ದರು.
ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕನಿಷ್ಠ ಆರು ತಿಂಗಳವರೆಗೆ ಮಗುವಿಗೆ ಕಡ್ಡಾಯವಾಗಿ, ನಿರಂತರವಾಗಿ ಹಾಲುಣಿಸುವಂತೆ ತಾಯಂದಿರಿಗೆ ಸಲಹೆ ನೀಡುತ್ತಿದೆ. ಇದಕ್ಕೆ ಪೂರಕವಾಗಿ ಪ್ರಪಂಚದ ಎಲ್ಲ ವೈದ್ಯರು ಮಗು ಜನಿಸಿದ ಅರ್ಧ ಗಂಟೆಯೊಳಗೆ ಶಿಶುವಿಗೆ ಹಾಲುಣಿಸುವಂತೆ ತಾಯಂದಿರನ್ನು ಆಗ್ರಹಿಸುತ್ತಾರೆ. ಆರು ತಿಂಗಳು ನಿರಂತರವಾಗಿ ಹಾಲುಣಿಸಿ. ನಂತರದಲ್ಲಿ ಬೇರೆ ಆಹಾರದ ಜತೆಗೆ 2 ವರ್ಷದವರೆಗೆ ಮಗುವಿಗೆ ಹಾಲು ಕುಡಿಸಿ. ಇದರಿಂದ, ಮಗುವಿಗೂ ಒಳಿತು, ನಿಮಗೂ ಸೊಗಸು ಎಂದು ಸಲಹೆ ನೀಡುತ್ತಾರೆ.
ಆದರೆ, ಆಧುನಿಕ ಯುಗದಲ್ಲಿ 12ರಿಂದ 14 ತಾಸು ಬಿಡುವಿಲ್ಲದ ದುಡಿಮೆಯ ನಡುವೆ ತಾಯಂದಿರು ಉದ್ಯೋಗ ಹಾಗೂ ಮಗುವಿಗೆ ಹಾಲುಣಿಸುವುದರಲ್ಲಿ ಸಮತೋಲನ ಕಾಯ್ದುಕೊಳ್ಳಲು ಭಾರಿ ಪಡಿಪಾಟಲು ಪಡುವ ಸ್ಥಿತಿ ನಿರ್ವಣವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಇದಾಗಿದೆ.
ಸಮತೋಲನ ಕಷ್ಟ ಏಕೆ?: ಯಾವುದೇ ಸಂಸ್ಥೆಯಲ್ಲಿ ಹೆಣ್ಣುಮಕ್ಕಳಿಗೆ ಆರು ತಿಂಗಳ ಮೇಲೆ ಬಾಣಂತನದ ರಜೆ ಸಿಗುವುದಿಲ್ಲ. ಶಿಶುವನ್ನು ಕಚೇರಿಗೆ ಕರೆತಂದರೆ, ಆರೈಕೆ ಮಾಡುವ ಕೇಂದ್ರಗಳ ವ್ಯವಸ್ಥೆ ಇರುವುದಿಲ್ಲ. ಕೆಲಸದ ನಡುವೆ ಬಿಡುವು ಮಾಡಿಕೊಂಡು, ಮನೆಗೆ ಹೋಗಿ ಬರಲು ವಾಹನದಟ್ಟಣೆಯ ಸಮಸ್ಯೆ. ಹೀಗಾಗಿ, ತಾಯಂದಿರು ಉದ್ಯೋಗ ಮತ್ತು ಹಾಲುಣಿಸುವ ನಡುವೆ ಸಮತೋಲನ ಕಾಯ್ದುಕೊಳ್ಳಲು ಪರದಾಡುವ ಸ್ಥಿತಿ ನಿರ್ವಣವಾಗುತ್ತದೆ.
ಎದೆಹಾಲು ಅಮೃತ ಸಮಾನ: ತಾಯಿಯ ಎದೆಹಾಲು ಶಿಶುಗಳಿಗೆ ಅತ್ಯುತ್ತಮ ಆಹಾರ. ಹಾಗಾಗಿಯೇ ಅಮೃತಕ್ಕೆ ಹೋಲಿಸಲಾಗುತ್ತದೆ. ಈ ಹಾಲಿನಲ್ಲಿ ಪೋಷಕಾಂಶ ಮತ್ತು ಸಾಮಾನ್ಯ ಕಾಯಿಲೆಗಳಿಂದ ರಕ್ಷಣೆ ಒದಗಿಸುವ ರೋಗನಿರೋಧಕಗಳು ಸಮಪ್ರಮಾಣದಲ್ಲಿ ಇರುತ್ತವೆ. ಮಗುವಿನ ಮನ ಶಾಂತಗೊಳಿಸುವ ಸಾಕಷ್ಟು ಅಂಶಗಳನ್ನೂ ಒಳಗೊಂಡಿರುತ್ತದೆ. ಮಕ್ಕಳ ಜೀರ್ಣಶಕ್ತಿ ವೃದ್ಧಿ ಜತೆಗೆ, ಸಣ್ಣ ವಯಸ್ಸಿನಲ್ಲೇ ದಢೂತಿತನ ಸಮಸ್ಯೆ ಕಾಣಿಸಿಕೊಳ್ಳದಂತೆ ತಡೆಯುತ್ತದೆ. ತಾಯಂದಿರಲ್ಲಿ ಪ್ರಸವಾನಂತರ ಕಾಣಿಸಿಕೊಳ್ಳುವ ಖಿನ್ನತೆ ಸಮಸ್ಯೆಯೂ ಪರಿಹಾರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವೃದ್ಧಾಪ್ಯದಲ್ಲಿ ಮಹಿಳೆಯರಿಗೆ ಕಾಡಬಹುದಾದ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಮೂಳೆಸವೆತದಂಥ ಸಮಸ್ಯೆ ಗಳಿಂದಲೂ ಪಾರಾಗಲು ಅನುಕೂಲವಾಗುತ್ತದೆ. ಕಬ್ಬಿಣಾಂಶದ ಕೊರತೆಯಿಂದಾಗುವ ರಕ್ತಹೀನತೆ ಸಮಸ್ಯೆಯನ್ನೂ ಪರಿಹರಿಸುತ್ತದೆ.
ಶಿಶುಸ್ನೇಹಿ ಸೌಲಭ್ಯಗಳಿಂದ ಅನುಕೂಲ: ಕಂಪನಿಗಳು ಕೂಡ ತಮ್ಮಲ್ಲಿ ಶಿಶುಸ್ನೇಹಿ ಸೌಲಭ್ಯಗಳನ್ನು ಅಂದರೆ, ಕ್ರೀಚ್ನಂತ ವ್ಯವಸ್ಥೆ ಕಲ್ಪಿಸಿದರೆ, ತಾಯಂದಿರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಪ್ರತಿಭೆಗಳನ್ನು ಉಳಿಸಿಕೊಳ್ಳುವ ಜತೆಗೆ ಹೊಸ ಪ್ರತಿಭೆಗಳನ್ನು ಆಕರ್ಷಿಸಲೂ ಕಂಪನಿಗಳಿಗೆ ಅನುಕೂಲವಾಗುತ್ತದೆ.
ಇದರ ಹೊರತಾಗಿ ಏನು ಮಾಡಬಹುದು?: ಬಾಣಂತನದ ಸಮಯದಲ್ಲಿ ತಾಯಂದಿರು ಮಕ್ಕಳಿಗೆ ನಿರಂತರವಾಗಿ ಹಾಲುಣಿಸಬೇಕು. ಬಾಣಂತನದ ರಜೆ ಮುಗಿದ ಬಳಿಕ ತಮ್ಮ ಎದೆಹಾಲನ್ನು ಸಂಗ್ರಹಿಸಿ, ಶಿಶುವಿಗೆ ಕಾಲಕಾಲಕ್ಕೆ ಕೊಡುವ ಏರ್ಪಾಟು ಮಾಡಬೇಕು. ಸಂಗ್ರಹಿತ ಹಾಲಿನ ನಿರ್ವಹಣೆ ಕುರಿತು ಆಯಾ, ಸಹಾಯಕಿಯರು ಅಥವಾ ಮನೆಯಲ್ಲಿರುವ ಹಿರಿಯರಿಗೂ ಒಂದಷ್ಟು ತರಬೇತಿಯ ಅಗತ್ಯ ಎಂಬುದನ್ನು ಗಮನಿಸಬೇಕು.
6 ತಾಸು: ಸಂಗ್ರಹಿತ ಎದೆಹಾಲನ್ನು ಕೊಠಡಿಯ ತಾಪಮಾನದಲ್ಲಿ 6 ತಾಸಿನವರೆಗೆ ಕೆಡದಂತೆ ಇಡಬಹುದು. ಇದನ್ನು ಫ್ರಿಡ್ಜ್ನ ಲ್ಲಿಟ್ಟು ಘನೀಕರಿಸಿ, ಅಗತ್ಯವಾದಾಗ ಕರಗಿಸಿ, ಮಗುವಿಗೆ ಕೊಡಬಹುದು. ಈ ರೀತಿಯಾಗಿ ಸಂಗ್ರಹಿತ ಹಾಲನ್ನು 2 ದಿನಗಳವರೆಗೆ ಕಾಪಿಡಬಹುದು. ಆದರೆ, ಕಚೇರಿಗೆ ತೆರಳುವ ಮುನ್ನ ಹಾಗೂ ಕಚೇರಿಯಿಂದ ಮರಳಿದ ಬಳಿಕ ಮಗುವಿಗೆ ನೇರವಾಗಿ ಎದೆಹಾಲು ಕುಡಿಸುವುದನ್ನು ಮರೆಯಬಾರದು.
ಬೇಡಿಕೆ-ಪೂರೈಕೆ ಅನುಗುಣವಾಗಿ ಹಾಲಿನ ಸೃಜನೆ: ಮಕ್ಕಳು ಹೆಚ್ಚೆಚ್ಚು ಹಾಲು ಕುಡಿದಂತೆಲ್ಲಾ ಎದೆಹಾಲು ಸೃಜನೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ, ಹೆಚ್ಚು ಹಾಲುಣಿಸಬೇಕು ಎಂಬುದು ವೈದ್ಯರ ಸಲಹೆಯಾಗಿದೆ.
ಸಂಗ್ರಹ ಹೇಗೆ?: ಎದೆಹಾಲನ್ನು ಕೈಯಿಂದಲೇ ಸಂಗ್ರಹಿಸಲು ಸಾಧ್ಯವಿದೆ. ಇದರ ಹೊರತಾಗಿಯೂ, ಈಗ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ಮಾದರಿಯ ಹಾಗೂ ಸುಲಭ ಬಳಕೆಯ ಎಲೆಕ್ಟ್ರಿಕ್ ಬ್ರೆಸ್ಟ್ ಪಂಪ್ಗಳನ್ನು ಬಳಸಬಹುದು. ಮೇಲ್ನೋಟಕ್ಕೆ ಇದು ಸುಲಭವೆಂದು ತೋರಬಹುದು. ಆದರೆ, ಪಂಪ್ ಅನ್ನು ಬಳಸಿ, ಎದೆಹಾಲು ಸಂಗ್ರಹಿಸುವ ಕ್ರಮವನ್ನು ಕಲಿತು, ರೂಢಿಸಿಕೊಳ್ಳುವ ಅಗತ್ಯವಿರುತ್ತದೆ. ಆದ್ದರಿಂದ, ವೈದ್ಯರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ಕೆ ಮುಂದಾಗುವುದು ಒಳಿತು.
(ಲೇಖಕರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಸಮಾಲೋಚಕರು ಹಾಗೂ ಲ್ಯಾಕ್ಟೇಷನ್ ತಜ್ಞರು)