ನ್ಯೂಸ್

ಚೇಸರ್ ಚಿತ್ರದ ಆಡಿಯೋ ಲಾಂಚ್ ನಾಡಿದ್ದು

ಶಿವಮೊಗ್ಗ: ಯುವ ನಿರ್ದೇಶಕ ಜಯರಾಂ ಭದ್ರಾವತಿ ನಿರ್ದೇಶಿಸಿರುವ ಚೇಸರ್ ಕನ್ನಡ ಚಲನಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಮೇ 9ರಂದು ಸಂಜೆ 6ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ, ಕಾಂಗ್ರೆಸ್ ಮುಖಂಡರಾದ ಎಂ.ಶ್ರೀಕಾಂತ್, ಬಿ.ವಿ.ಶ್ರೀನಿವಾಸ್, ನಿರ್ದೇಶಕ ಆರ್.ಚಂದ್ರು ಸೇರಿ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಭಾಗವಹಿಸುವರು ಎಂದು ಚಿತ್ರದ ನಿರ್ಮಾಪಕಿ ಮಾಲತಿ ಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾನು ಮೂಲತಃ ರಾಜಕಾರಣಿಯಾದರೂ ಸಿನಿಮಾದ ಮೇಲಿನ ಆಸಕ್ತಿ ಕಾರಣಕ್ಕೆ ಕಲಾವಿದೆಯಾಗಿ ಗುರುತಿಸಿಕೊಂಡಿದ್ದೇನೆ. ಜಯರಾಂ ಅವರು ಪರಿಚಯವಾದಾಗ, ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸಬೇಕೆನ್ನುವ ಉದ್ದೇಶದೊಂದಿಗೆ ಒಂದು ಸಿನಿಮಾ ಮಾಡಬೇಕೆಂದು ನಿರ್ಧರಿಸಿದ್ದೆ. ಆಗ ಶುರುವಾಗಿದ್ದು ಚೇಸರ್ ಚಿತ್ರ ಎಂದರು.

ಜಯರಾಂ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ಸುಮಂತ್ ಶೈಲೇಂದ್ರ ಅವರಿಗೆ ನಾಯಕಿಯಾಗಿ ರಕ್ಷಾ ಮೆನನ್ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರಪ್ರಸಾದ್, ಕಡ್ಡಿಪುಡಿ ಚಂದ್ರು, ಸಂಗೀತಾ ಮತ್ತಿತರರು ತಾರಾಬಳಗದಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಗೂ ಮುನ್ನ ಚೇಸರ್ ಚಿತ್ರದ ಟೀಸರ್ ಪ್ರದರ್ಶಿಸಲಾಯಿತು. ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಲ್ಮನೆ ಮಂಜಣ್ಣ, ನಿರ್ದೇಶಕ ಜಯರಾಂ, ಸ್ಮೈಲ್ ಡಾನ್ಸ್‌ನ ಶಶಿಕುಮಾರ್, ಕರಾಟೆ ಅಸೋಸಿಯೇಷನ್ ವಿನೋದ್ ಸುದ್ದಿಗೋಷ್ಠಿಯಲ್ಲಿದ್ದರು.