ಬೆಂಗಳೂರು: ಮಾರಕಾಸ್ತ್ರ ಇರಿಸಿಕೊಂಡು ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಗ್ರಾಹಕರಲ್ಲಿ ಭಯ ಸೃಷ್ಟಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ.ಹಳ್ಳಿ ದುಬೈ ಲೇಔಟ್ ನಿವಾಸಿ ಸೈಯದ್ ಸುಹೇಬ್(೨೪) ಮತ್ತು ಡಿ.ಜೆ.ಹಳ್ಳಿ ಸಕ್ಕರೆ ಮಂಡಿ ನಿವಾಸಿ ಸೈಯದ್ ಮುಬಾರಕ್(೨೩) ಬಂಧಿತರು. ಆರೋಪಿಗಳಿಂದ ಮಾರಕಾಸ್ತ್ರ ಜಪ್ತಿ ಮಾಡಲಾಗಿದೆ. ಮೇ ೧೨ರಂದು ಹೆಣ್ಣೂರು ಠಾಣಾ ವ್ಯಾಪ್ತಿಯ ಬಾಲಾಜಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಇಬ್ಬರು ಅಪರಿಚಿತರು ಲಾಂಗ್‌ಗಳನ್ನು ಹಿಡಿದುಕೊಂಡು ಗ್ರಾಹಕರಲ್ಲಿ ಭಯ ಉಂಟು ಮಾಡುತ್ತಿರುವ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಗೆ ಮಾಹಿತಿ ಬಂದಿದೆ. ಈ ದೂರಿನ ಮೇರೆಗೆ ತಕ್ಷಣ ಹೊಯ್ಸಳ ಸಿಬ್ಬಂದಿ ಬಾರ್‌ಗೆ ತೆರಳಿ ಇಬ್ಬರು ಆರೋಪಿಗಳನ್ನು ಮಾರಕಾಸ್ತ್ರ ಸಹಿತ ವಶಕ್ಕೆ ಪಡೆದಿದ್ದಾರೆ.
ಆರೋಪಿ ಸೈಯದ್ ಸುಹೇಬ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ ಮತ್ತೊಬ್ಬ ಆರೋಪಿ ಸೈಯದ್ ಮುಬಾರಕ್ ಕಾರ್ ಮೆಕ್ಯಾನಿಕ್ ಕೆಲಸ ಮಾಡುತ್ತಾನೆ. ಇಬ್ಬರು ಈ ಹಿಂದೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.