ನ್ಯೂಸ್

ಮಾರ್ವಾಡಿಗಳ ಮನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದವನ ಸೆರೆ

ಬೆಂಗಳೂರು: ಮುಖ್ಯಮಂತ್ರಿಗಳ ನಿವಾಸದಿಂದ ಕೂಗಳತೆ ದೂರದಲ್ಲೇ ಇರುವ ಮನೆಯೊಂದರಲ್ಲಿ ಕೆ.ಜಿಗಟ್ಟಲೆ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಶೇಷಾದ್ರಿಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಪ್ರದೀಪ್ ಮಂಡಲ್ ಬಂಧಿತ. ಆರೋಪಿಯಿಂದ ಸುಮಾರು ಒಂದು ಕೋಟಿಗೂ ಹೆಚ್ಚು ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿನ ಮಾರ್ವಾಡಿ ಮನೆಗಳೇ ಈತನ ಟಾರ್ಗೇಟ್. ಅಸ್ಸಾಂನಿಂದ ನಗರಕ್ಕೆ ರೈಲಿನಲ್ಲಿ ಬಂದು ಮೆಜೆಸ್ಟಿಕ್‌ನ ಲಾಡ್ಜ್‌ನಲ್ಲಿ ರೂಂ ಮಾಡಿ ರಾತ್ರಿ ಉಳಿದುಕೊಂಡು ಬೆಳಗಾಗುತ್ತಿದ್ದಂತೆ ಬೈಕ್‌ನಲ್ಲಿ ಸುತ್ತಾಡುತ್ತ ಬೀಗ ಹಾಕಿರುವ ಮಾರ್ವಾಡಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದನು. ಇತ್ತೀಚೆಗೆ ಶೇಷಾದ್ರಿಪುರದ ಮಾರ್ವಾಡಿ ಒಬ್ಬರ ಮನೆಯ ಕಿಟಕಿ ಮುರಿದು ಒಳನುಗ್ಗಿ ಸುಮಾರು ೨.೧ ಕೆ.ಜಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಅಸ್ಸಾಂಗೆ ಪರಾರಿಯಾಗಿದ್ದನು. ಆರೋಪಿಯು ನಗರದಲ್ಲಿ ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಅಸ್ಸಾಂನಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂದ ಹಣದಿಂದ ಕಾರು ಹಾಗೂ ಬಟ್ಟೆಗಳನ್ನು ಖರೀದಿಸಿ ವಿಲಾಸಿ ಜೀವನ ನಡೆಸುತ್ತಿದ್ದನು.
250 ಸಿಸಿ ಕ್ಯಾಮರಾಗಳ ಪರಿಶೀಲನೆ:
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸುಮಾರು 250 ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿ ಅಸ್ಸಾಂಗೆ ಹೋಗಿ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ. ಆರೋಪಿಯು ಲಾಡ್ಜ್‌ನ ಲೆಡ್ಜರ್ ಬುಕ್‌ನಲ್ಲಿ ಸಹ ತನ್ನ ವಿವರ ಬರೆಯದೇ ಕಳ್ಳಾಟವಾಡಿದ್ದ. ಅಲ್ಲದೇ ಶೇಷಾದ್ರಿಪುರ ವ್ಯಾಪ್ತಿಯಲ್ಲಿ ಕಳ್ಳತನ ಮಾಡುವುದಕ್ಕೂ ಮುನ್ನ ಸದಾಶಿವನಗರ ವ್ಯಾಪ್ತಿಯಲ್ಲಿಯೂ ಕಳ್ಳತನಕ್ಕೆ ಯತ್ನಿಸಿ ವಿಫಲವಾಗಿರುವುದು ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.