ಬೆಂಗಳೂರು: ಆರೋಪಿತರನ್ನು ಅಕ್ರಮವಾಗಿ ಠಾಣೆ ಲಾಕಪ್ ಸೆಲ್ನಲ್ಲಿ ಇಟ್ಟಿರುವುದಾಗಿ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಸುಳ್ಳು ದೂರುಗಳನ್ನು ನೀಡಿದಲ್ಲದೆ ಪೊಲೀಸರಿಂದಲೇ ಹಣ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭಾರತಿನಗರದ ಸೈಯ್ಯದ್ ಸರ್ಫರಾಜ್ ಅಹಮದ್ (೩೫) ಬಂಧಿತ ಆರೋಪಿ.
ಜುಲೈ ೨೪ರಂದು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಮೊಹಮ್ಮದ್ ಇರ್ಷಾದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೊಹಮ್ಮದ್ ಇರ್ಷಾದ್‌ನನ್ನು ಕಾನೂನುಬಾಹಿರವಾಗಿ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಆರೋಪಿ ಸರ್ಫರಾಜ್ ಸುಳ್ಳು ದೂರು ನೀಡಿದ್ದ. ದೂರಿನ ಹಿನ್ನೆಲೆಯಲ್ಲಿ ಮಾನವ ಹಕ್ಕು ಅಧಿಕಾರಿಗಳು ಠಾಣೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಬಳಿಕ ಆರೋಪಿ ಆ ಪ್ರಕರಣವನ್ನು ಹಿಂಪಡೆದುಕೊಳ್ಳಲು ೫೦ ಸಾವಿರ ರೂ. ನೀಡುವಂತೆ ಪೊಲೀಸರ ಬಳಿಯೇ ಬೇಡಿಕೆಯಿಟ್ಟಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಜುಲೈ ೨೯ರಂದು ಕ್ವೀನ್ಸ್ ರಸ್ತೆಯ ಬಳಿ ಪೊಲೀಸರಿಂದ 25 ಸಾವಿರ ರೂ. ಪಡೆದುಕೊಂಡಿದ್ದ ಎನ್ನಲಾಗಿದೆ.
ಪ್ರತಿದಿನ ಠಾಣೆಗೆ ಹೋಗುತ್ತಿದ್ದ:
ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿಯು ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡ ದಾರಿ ತುಳಿದಿದ್ದ. ಈ ಹಿಂದೆ ವಕೀಲರೊಬ್ಬರ ಕಚೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಪೊಲೀಸರ ಕಾರ್ಯಚಟುವಟಿಕೆ, ಬಂಧನ ಪ್ರಕ್ರಿಯೆಗಳನ್ನು ತಿಳಿದುಕೊಂಡಿದ್ದ. ಕೆಲಸ ಬಿಟ್ಟ ಬಳಿಕ ದೂರು ನೀಡುವ ಸೋಗಿನಲ್ಲಿ ಪೊಲೀಸ್ ಠಾಣೆಗಳಿಗೆ ತೆರಳಿ ಸ್ಥಳೀಯ ಪೊಲೀಸರ ವಿಶ್ವಾಸ ಗಳಿಸುತ್ತಿದ್ದ. ಬಳಿಕ ವಿವಿಧ ಅಪರಾಧ ಪ್ರಕರಣಗಳಲ್ಲಿ ಠಾಣೆಯಲ್ಲಿ ಪೊಲೀಸ್ ವಶದಲ್ಲಿರುವ ಆರೋಪಿತರನ್ನು ಪರಿಚಯಿಸಿಕೊಂಡು ಪೂರ್ವಾಪರ ತಿಳಿದು ಅವರಿಂದ ಹೆಚ್ಚಿನ ವಿವರಗಳನ್ನು ಪಡೆಯುತ್ತಿದ್ದ. ನಂತರ ಅಕ್ರಮವಾಗಿ ಠಾಣೆಯಲ್ಲಿ ಇರಿಸಲಾಗಿದೆ ಎಂದು ಆರೋಪಿಸಿ ಮಾನವಹಕ್ಕು ಆಯೋಗಕ್ಕೆ ದೂರು ನೀಡುತ್ತಿದ್ದ. ಈ ದೂರು ಆಧರಿಸಿ ಮಾನವಹಕ್ಕು ಅಧಿಕಾರಿಗಳು ಪೂರ್ವ ವಿಭಾಗದ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರು. ನಂತರ ಪ್ರಕರಣ ಹಿಂಪಡಿಯುವುದಾಗಿ ಹೇಳಿ ಪೊಲೀಸರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದ.
ಪದೇ ಪದೇ ದಾಳಿಯಿಂದ ಎಚ್ಚೆತ್ತ ಪೊಲೀಸರು:
ಆರೋಪಿ ಇದೇ ರೀತಿ ಹೆಣ್ಣೂರು, ಭಾರತೀನಗರ, ಪುಲಕೇಶಿನಗರ, ರಾಮಮೂರ್ತಿನಗರ ಸೇರಿದಂತೆ ಪೂರ್ವ ವಿಭಾಗದ ವಿವಿಧ ಪೊಲೀಸ್ ಠಾಣೆಗಳಲ್ಲಿಯೂ ಅಕ್ರಮವಾಗಿ ಆರೋಪಿತರನ್ನು ಬಂಧಿಸಿರುವ ಬಗ್ಗೆ ಆರೋಪಿ ದೂರು ನೀಡಿದ ಮೇರೆಗೆ ಮಾನವ ಹಕ್ಕು ಆಯೋಗದ ಅಧಿಕಾರಿಗಳು ಬಂದು ಪರಿಶೀಲಿಸುತ್ತಿದ್ದರು. ಪದೇ ಪದೇ ಅಧಿಕಾರಿಗಳು ದಾಳಿ ನಡೆಸುತ್ತಿರುವ ಬಗ್ಗೆ ಪರಾಮರ್ಶಿಸಿದಾಗ ಇದರ ಹಿಂದೆ ಆರೋಪಿಯ ಕೈಚಳಕವಿರುವುದು ಗೊತ್ತಾಗಿತ್ತು. ಆರೋಪಿ ಪೊಲೀಸರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುವುದೇ ದಂಧೆ ಮಾಡಿಕೊಂಡಿದ್ದ ಎಂದು ಪೂರ್ವ ವಿಭಾಗದ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
50 ಸಾವಿರಕ್ಕೆ ಬ್ಲ್ಯಾಕ್ ಮೇಲ್:
ಪ್ರಕರಣವೊಂದರಲ್ಲಿ ಆರೋಪಿಯನ್ನ ಅಕ್ರಮವಾಗಿ ಬಂಧಿಸಿರುವ ಕುರಿತಂತೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದ ಆರೋಪಿ ಸೈಯದ್ ಸರ್ಫರಾಜ್ ನನ್ನ ಕೈವಾಡವಿರುವುದು ಶಿವಾಜಿನಗರ ಪೊಲೀಸರಿಗೆ ತನಿಖೆಯಲ್ಲಿ ತಿಳಿದುಬಂದಿತ್ತು. ೫೦ ಸಾವಿರ ರೂ.ಹಣ ನೀಡಿದರೆ ದೂರು ಹಿಂಪಡೆಯುವುದಾಗಿ ಆರೋಪಿಯು ತಿಳಿಸಿದ್ದ. ಈತನ ಬಂಧನಕ್ಕೆ ವ್ಯೆಹ ರಚಿಸಿ ೨೫ ಸಾವಿರ ನೀಡುವುದಾಗಿ ಕರೆಯಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಬಳಿಕ ವಿಚಾರಣೆ ನಡೆಸಿದಾಗ ನಗರದ ಸುಮಾರು ೩೦ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿ ತಂತ್ರ ಅನುಸರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಈ ಹಿಂದೆಯೂ ಎರಡ್ಮೂರು ಪೊಲೀಸರಿಗೆ ಬೆದರಿಸಿ ಹಣ ವಸೂಲಿ ಮಾಡುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.