ಬೆಂಗಳೂರು: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಕಳೆದ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸರಗಳ್ಳ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದು, ಜೈಲು ಸೇರಿದ್ದಾನೆ.
ಗುಲ್ಲು ಅಲಿಯಾಸ್ ಗುಲಾಬ್ ಖಾನ್, ೧೯೯೮ರ ಜ.೨೦ರಂದು ಜಯನಗರ ಐದನೇ ಬ್ಲಾಕ್‌ನಲ್ಲಿ ವಸಂತಾ ಎಂಬ ಮಹಿಳೆಯ ಸರ ದೋಚಿದ್ದ. ಈ ಪ್ರಕರಣದಲ್ಲಿ ಜಯನಗರ ಠಾಣೆ ಪೊಲೀಸರು ೧೯೯೮ರಲ್ಲೇ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಗುಲಾಬ್ ಖಾನ್, ೨೬ ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ನ್ಯಾಯಾಲಯ ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ಆರೋಪಿ ವಿಚಾರಣೆಗೆ ಬರದೆ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಲಯವು ಆರೋಪಿ ಗುಲಾಬ್ ಖಾನ್‌ನನ್ನು ಬಂಧಿಸಿ ವಿಚಾರಣೆಗೆ ಕರೆತರುವಂತೆ ಆದೇಶಿಸಿತ್ತು. ಆದರೆ, ಆತ ಬಂಧನ ಭೀತಿಯಿಂದ ಬೆಂಗಳೂರು ಬಿಟ್ಟು ಹೋಗಿದ್ದ. ಹಳೆಯ ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದರು. ಆಯುಕ್ತರ ಆದೇಶದಂತೆ ಆರೋಪಿ ಗುಲಾಬ್ ಖಾನ್‌ನ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಗುಲಾಬ್ ಖಾನ್‌ನ ಸಂಬಂಧಿಕರು ಮತ್ತು ಸ್ನೇಹಿತರ ವಿಚಾರಣೆ ನಡೆಸಿದಾಗ ಆತ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನೆಲೆಸಿರುವುದು ಗೊತ್ತಾಯಿತು. ಆರೋಪಿಯ ಜಾಡು ಹಿಡಿದು ಹೋದಾಗ ಗುಲಾಬ್ ಖಾನ್, ಕನಕಪುರದಲ್ಲಿ ಸಿಕ್ಕಿಬಿದ್ದ. ಗುಲಾಬ್ ಖಾನ್, ತನ್ನ ೨೪ನೇ ವಯಸ್ಸಿನಲ್ಲಿ ಸರಗಳವು ಮಾಡಿದ್ದ. ಈಗ ಆತನಿಗೆ ೫೦ ವರ್ಷ. ಆರೋಪಿಯು ಸದ್ಯ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ. ನಗರಸಭೆ ಕೆಲಸದ ಜತೆಗೆ ವೆಲ್ಡಿಂಗ್ ಶಾಪ್ ನಡೆಸುತ್ತಿದ್ದ. ಆತನನ್ನು ನ್ಯಾಯಾಲಯದ ಆದೇಶದಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.