ನ್ಯೂಸ್

ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ್ದ ಮಹಿಳೆಯ ಸೆರೆ: 35 ಲಕ್ಷ ರೂ. ಮೌಲ್ಯ ಆಭರಣ ಜಪ್ತಿ

ಬೆಂಗಳೂರು : ಕೆಲಸ ಮಾಡುತ್ತಿದ್ದ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ಕಳ್ಳವು ಮಾಡಿದ್ದ ಮನೆಗೆಲಸದ ಮಹಿಳೆಯನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಮೂಲದ ಮಂಜುಳಾ(೩೮) ಬಂಧಿತ ಆರೋಪಿ. ಈಕೆಯಿಂದ ೩೬೩ ಗ್ರಾಂ ಚಿನ್ನ-ವಜ್ರಭದ ಆಭರಣಗಳು, ೧೭೬ ಗ್ರಾಂ ಬೆಳ್ಳಿ ಪದಾರ್ಥಗಳು ಹಾಗೂ ೧ ಲಕ್ಷ ರೂ. ನಗದು ಸೇರಿ ಒಟ್ಟು ೩೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜೆ.ಪಿ.ನಗರ ೧ನೇ ಹಂತದ ಅಪಾರ್ಟ್‌ಮೆಂಟ್ ನಿವಾಸಿ ರೇಖಾ ಕಿರಣ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರೆ ರೇಖಾ ಕಿರಣ್ ದಂಪತಿ ಹಿರಿಯ ನಾಗರಿಕರಾಗಿದ್ದು, ಜೆ.ಪಿ.ನಗರ ೧ನೇ ಹಂತದ ಅಪಾರ್ಟ್‌ಮೆಂಟ್ ಪ್ಲ್ಯಾಟ್‌ನಲ್ಲಿ ನೆಲೆಸಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳು ಇದ್ದು, ವಿದೇಶದಲ್ಲಿ ನೆಲೆಸಿದ್ದಾರೆ. ಹೀಗಾಗಿ ಮನೆಯಲ್ಲಿ ರೇಖಾ ಕಿರಣ್ ದಂಪತಿ ಮಾತ್ರ ನೆಲೆಸಿದ್ದಾರೆ. ಇವರ ಮನೆಯಲ್ಲಿ ಆರೋಪಿ ಮಂಜುಳಾ ಕಳೆದ ೮ ವರ್ಷಗಳಿಂದ ಮನೆಗೆಲಸ ಮಾಡಿಕೊಂಡಿದ್ದಳು.

ಮಾ.೨೭ರಂದು ರೇಖಾ ಕಿರಣ್ ಮೊಮ್ಮಗನ ನಾಮಕರಣವಿತ್ತು. ನಾಮಕರಣ ಕಾರ್ಯಕ್ರಮ ಮುಗಿದ ಬಳಿಕ ರೇಖಾ ಕಿರಣ್ ತಮ್ಮ ಚಿನ್ನ, ವಜ್ರದ ಆಭರಣ ಹಾಗೂ ನಗದು ಹಣವನ್ನು ಲೆಕ್ಕ ಮಾಡಿ ಗಾಡ್ರೇಜ್ ಬೀರುವಿನಲ್ಲಿ ಇರಿಸಿದ್ದರು. ಏ.೪ರಂದು ಬೀರು ತೆರೆದು ಆಭರಣಗಳನ್ನು ಪರಿಶೀಲಿಸಿದಾಗ ೪ ಚಿನ್ನದ ಬಳೆಗಳು ಸೇರಿ ಇತರೆ ಆಭರಣಗಳು ಹಾಗೂ ೫೦ ಸಾವಿರ ರೂ. ನಗದು ಇಲ್ಲದಿರುವುದು ಕಂಡು ಬಂದಿದೆ. ಮನೆಯಲ್ಲಿ ಮೊಮ್ಮಗನ ನಾಮಕರಣವಾದ ಮಾ.೨೭ರಿಂದ ಏ.೧೮ರ ನಡುವೆ ಮನೆಗೆಲಸದ ಮಂಜುಳಾ ಹೊರತುಪಡಿಸಿ ಬೇರೆ ಯಾರು ಮನೆಗೆ ಬಂದಿರಲಿಲ್ಲ. ಈ ಬಗ್ಗೆ ಅನುಮಾನಗೊಂಡು ರೇಖಾ ಕಿರಣ್, ಮಂಜುಳಾನನ್ನು ಪ್ರಶ್ನೆ ಮಾಡಿದಾಗ ನನಗೆ ಗೊತ್ತಿಲ್ಲ ಎಂದು ಆಕೆ ಹೇಳಿದ್ದಾಳೆ. ಆದರೂ ಮನೆಗೆ ಮಂಜುಳಾ ಹೊರತಾಗಿ ಬೇರೆ ಯಾರೂ ಬಾರದಿರುವ ಹಿನ್ನೆಲೆಯಲ್ಲಿ ಆಕೆಯೇ ಕಳವು ಮಾಡಿರುವ ಬಗ್ಗೆ ರೇಖಾ ಕಿರಣ್‌ಗೆ ಅನುಮಾನ ಬಲವಾಗಿದ್ದರಿಂದ ಜೆ.ಪಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮಂಜುಳಾನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿದ್ದು ತಾನೇ ಎದ್ದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೀ ಇಡುವ ಜಾಗ ತಿಳಿದುಕೊಂಡು ಕೃತ್ಯ:
ಆರೋಪಿ ಮಂಜುಳಾ, ರೇಖಾ ಕಿರಣ್ ಮನೆಯಲ್ಲಿ ಬೀರುವಿನ ಕೀ ಇರಿಸುವ ಜಾಗ ನೋಡಿಕೊಂಡಿದ್ದಳು. ಕೆಲಸಕ್ಕೆ ಬಂದಾಗ ಬೀರು ತೆರೆದು ಒಂದೊಂದೇ ಆಭರಣಗಳನ್ನು ಕಳವು ಮಾಡಿದ್ದಳು. ಕಳವು ಮಾಡಿದ್ದ ಚಿನ್ನಾಭರಣಗಳ ಪೈಕಿ ೨ ಬಳೆಗಳನ್ನು ಗಂಡತನ ಮುಖಾಂತರ ಪರಿಚಿತರಿಗೆ ಮಾರಾಟ ಮಾಡಿದ್ದಳು. ಉಳಿದ ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ಚಾಮರಾಜನಗರದ ತವರು ಮನೆಯಲ್ಲಿ ಇರಿಸಿದ್ದಳು. ಆರೋಪಿಯು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಎಲ್ಲಾ ಆಭರಣಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.