ನ್ಯೂಸ್

ಕಾರು ಕಳ್ಳ ಎಂಬಿಎ ಪದವೀಧರ ಬಂಧನ: ಪ್ರವಾಸ ನೆಪದಲ್ಲಿ ಕಾರು ಬುಕ್ ಮಾಡಿದ್ದ ಆರೋಪಿ

ಬೆಂಗಳೂರು: ಟ್ರಾವೆಲ್ ಏಜೆನ್ಸಿಯ ಕಾರನ್ನು ಜಸ್ಟ್ ಡಯಲ್ ಮೂಲಕ ಬುಕ್ ಮಾಡಿ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಎಂಬಿಎ ಪದವೀಧರ ದಾವಣಗೆರೆಯ ಕರಣ್ ಕುಮಾರ್ (27) ಬಂಧಿತ. ಈತ ಕಳವು ಮಾಡಿದ್ದ ಒಟ್ಟು 22 ಲಕ್ಷ ರೂ.ಮೌಲ್ಯದ ಇನ್ನೋವಾ ಕ್ರಿಸ್ಟ ಹಾಗೂ ಸ್ವಿಫ್ಟ್ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಿರುದ್ಯೋಗಿಯಾಗಿದ್ದ ಆರೋಪಿ, ಕಾರುಗಳನ್ನು ಕದ್ದು ಮಾರಾಟ ಮಾಡಿ ಹಣ ಗಳಿಸಲು ಸಂಚು ಮಾಡಿದ್ದ. ಜ.1 ರಂದು ಜಸ್ಟ್ ಡಯಲ್ ಮೂಲಕ ಮೈಸೂರಿಗೆ ಪ್ರವಾಸಕ್ಕೆ ತೆರಳಬೇಕೆಂದು ಹೇಳಿ ಕಾರು ಬುಕ್ ಮಾಡಿದ್ದ. ಕರಣ್ ಹೇಳಿದಂತೆ ಆ ದಿನ ಬೆಳಗ್ಗೆ 8.45ರಲ್ಲಿ ಕಾರು ಚಾಲಕ ಕಾನಿಷ್ಕ ಹೋಟೆಲ್ ಬಳಿ ಆತನನ್ನು ಹತ್ತಿಸಿಕೊಂಡಿದ್ದ. ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಹೋಟೆಲ್​ನಲ್ಲಿ ಪೇಮೆಂಟ್ ಕಲೆಕ್ಷನ್ ಮಾಡಿಕೊಳ್ಳಬೇಕಿದೆ ಎಂದು ಚಾಲಕನಿಗೆ ಹೇಳಿದ್ದಾನೆ. ಚಾಲಕ ಮೆಟ್ರೋ ನಿಲ್ದಾಣದ ಬಳಿಯ ಮಿಸ್ಚಿಫ್ ಹೋಟೆಲ್ ಬಳಿ ಕಾರು ನಿಲ್ಲಿಸಿದಾಗ, ‘ಕೊಠಡಿ ಸಂಖ್ಯೆ 105ರಲ್ಲಿ ನನ್ನ ಸ್ನೇಹಿತ ಇದ್ದಾನೆ. ಆತ 10 ಸಾವಿರ ರೂ. ನೀಡುತ್ತಾನೆ. ಅದನ್ನು ತೆಗೆದುಕೊಂಡು ಬಾ’ ಎಂದು ಸೂಚಿಸಿದ್ದಾನೆ.

ಚಾಲಕ ಕಾರಿನಿಂದ ಇಳಿಯಲು ಮುಂದಾದಾಗ ಎಸಿ ಹಾಕಿ ಹೋಗಲು ಕರಣ್ ಹೇಳಿದ್ದಾನೆ. ಚಾಲಕ ಕಾರಿನ ಕೀ ಹಾಕಿ ಎಸಿ ಆನ್ ಮಾಡಿ ಹೋಟೆಲ್ ಒಳಗೆ ಹೋದಾಗ, 105 ಸಂಖ್ಯೆಯ ರೂಂನಲ್ಲಿದ್ದ ವ್ಯಕ್ತಿ ಕೊಠಡಿ ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಕೂಡಲೇ ಕರೆ ಮಾಡಿ ವಿಷಯ ತಿಳಿಸಿದ ಚಾಲಕನಿಗೆ ಐದು ನಿಮಿಷ ಅಲ್ಲಿಯೇ ಕಾಯುವಂತೆ ಕರಣ್ ಹೇಳಿದ್ದಾನೆ. ಐದು ನಿಮಿಷದ ಬಳಿಕ ಚಾಲಕ, ಮತ್ತೆ ಮೊಬೈಲ್​ಗೆ ಕರೆ ಮಾಡಿದಾಗ ಅದು ಆಫ್ ಆಗಿತ್ತು. ಅನುಮಾನಗೊಂಡು ಹೊರಗೆ ಬಂದು ನೋಡಿದಾಗ ಕಾರಿನ ಸಮೇತ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸುಳಿವು ನೀಡಿದ ಮೊಬೈಲ್ ನಂಬರ್: ಕಳೆದ ಅ.5ರಂದು ಇದೇ ಮಾದರಿಯಲ್ಲಿ ಕಾರು ಕಳವು ಇದೇ ಸ್ಥಳದಲ್ಲಿ ನಡೆದಿತ್ತು. ಆದ್ದರಿಂದ ಜ.1ರಂದು ಸಹ ಅದೇ ಆರೋಪಿ ಕಾರು ಕಳ್ಳತನ ಮಾಡಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತ್ತು. ಆರೋಪಿ ತನ್ನ ಗುರುತು ಪತ್ತೆಯಾಗದಂತೆ ಎಚ್ಚರಿಕೆ ವಹಿಸಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಆರೋಪಿ ಈ ಎರಡು ಕೃತ್ಯಗಳಿಗೂ ಕದ್ದ ಮೊಬೈಲ್​ಗಳನ್ನು ಬಳಸಿದ್ದ. ಆ ಮೊಬೈಲ್ ಕಾರ್ಯನಿರ್ವಹಿಸುತ್ತಿರುವ ಪ್ರದೇಶಕ್ಕೆ ಹೋದಾಗ ಪೊಲೀಸರಿಗೆ ಬೇರೆಯವರು ಸಿಕ್ಕಿದ್ದರು.

ಅ.5 ರಂದು ಕರಣ್ ಕಾರು ಕಳವು ಮಾಡಿ ಪರಾರಿಯಾಗುತ್ತಿದ್ದಾಗ ಸ್ವಲ್ಪ ದೂರದಲ್ಲಿ ಮತ್ತೊಂದು ಕಾರಿಗೆ ತಾಗಿಸಿ ಅಪಘಾತ ಮಾಡಿದ್ದ. ಈ ವೇಳೆ ತನ್ನ ಸ್ನೇಹಿತರಿಗೆ ಅಪಘಾತವಾಗಿದ್ದು, ತುರ್ತಾಗಿ ಹೋಗುತ್ತಿದ್ದೇನೆ. ನನ್ನ ಮೊಬೈಲ್ ಸಂಖ್ಯೆ ತೆಗೆದುಕೊಳ್ಳಿ ಎಂದು ಅಪಘಾತವಾದ ಕಾರಿನಲ್ಲಿದ್ದ ಮಾಲೀಕನಿಗೆ ಮೊಬೈಲ್ ನಂಬರ್ ಕೊಟ್ಟು ಸ್ಥಳದಿಂದ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಆರೋಪಿ ತನ್ನ ಮೊಬೈಲ್ ಸಂಖ್ಯೆಯ ಒಂದು ಅಂಕೆ ಬದಲಿಸಿ ಸಂಖ್ಯೆ ನೀಡಿದ್ದ. ಕಾರ್ಯಾಚರಣೆ ನಡೆಸಿದ ಪೊಲೀಸರು ಮೆಜೆಸ್ಟಿಕ್​ನಲ್ಲಿದ್ದ ವಸತಿ ಗೃಹವೊಂದರಲ್ಲಿ ವಾಸ್ತವ್ಯ ಹೂಡಿದವರ ವಿಳಾಸವಿರುವ ಪುಸ್ತಕ ಪರಿಶೀಲಿಸಿದ್ದರು. ಆ ವೇಳೆ ಆರೋಪಿ ನೀಡಿದ್ದ ಮೊಬೈಲ್ ಸಂಖ್ಯೆ ಹಾಗೂ ಒಂದು ಅಂಕೆ ಬದಲಿಸಿದ್ದ ಮೊಬೈಲ್ ಸಂಖ್ಯೆ ಪತ್ತೆಯಾಗಿತ್ತು. ಅನುಮಾನಗೊಂಡು ವಸತಿಗೃಹದಲ್ಲಿದ್ದ ಕರಣ್​ನ್ನು ವಶಕ್ಕೆ ಪಡೆದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲುಪಾಲಾಗಿದ್ದ ಹಳೇ ಆರೋಪಿ

ಕರಣ್ ಎಂಬಿಎ ಪದವೀಧರ. ಈತನ ವಿರುದ್ಧ ದಾವಣಗೆರೆ ಠಾಣೆಯಲ್ಲಿ ಕೊಲೆ, ಅಪಹರಣ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಜೈಲಿಗಟ್ಟಿದ್ದರು. ಜೈಲಿನಿಂದ ಹೊರ ಬಂದ ಬಳಿಕ ಆರೋಪಿ ಕುಟುಂಬಸ್ಥರೊಂದಿಗೆ ಜಗಳ ಮಾಡಿ ಮನೆ ಬಿಟ್ಟಿದ್ದ. ಸರ್ಕಾರಿ ಕೆಲಸ ಕೊಡಿಸುವುದಾಗಿ ಪರಿಚಿತರಿಂದ ಸಾವಿರಾರು ರೂ. ಪಡೆದು ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.