ನ್ಯೂಸ್

ಪ್ರವಾಸಿಗರಿಗೆ ವಿಶ್ವ ಯೋಗ ದಿನದ ಗಿಫ್ಟ್​: ಇಂದು ತಾಜ್​​ ಮಹಲ್​ ವೀಕ್ಷಣೆಗಿಲ್ಲ ಪ್ರವೇಶ ಶುಲ್ಕ

ಆಗ್ರಾ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​​ಮಹಲ್​ ಪ್ರವೇಶಕ್ಕೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ. ಹೀಗೆಂದು ಪುರಾತತ್ವ ಇಲಾಖೆ ಘೋಷಿಸಿದೆ.

ಮಂಗಳವಾರ ಬೆಳಗ್ಗೆಯಿಂದ ಇಡೀ ದಿನ ತಾಜ್​ಮಹಲ್​​ ನೋಡಲು ಬರುವ ಪ್ರವಾಸಿಗರು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಅಲ್ಲದೇ ಪಕ್ಕದ ಐತಿಹಾಸಿಕ ಕಟ್ಟಡಗಳ ವೀಕ್ಷಣೆಗೂ ಸಂಪೂರ್ಣ ಉಚಿತ ಅವಕಾಶ ನೀಡಲಾಗಿದೆ ಎಂದು ಹೇಳಿದೆ.

ಎಎಸ್​​ಐ ಮುಖ್ಯಸ್ಥ ರಾಜ್​ಕುಮಾರ್​ ಪಟೇಲ್​ ಈ ಬಗ್ಗೆ ನೀಡಿದ್ದು, ಯೊಗ ದಿನದ ಅಂಗವಾಗಿ ಪ್ರವಾಸಿಗರಿಗೆ ಉಡುಗೊರೆಯಾಗಿ ಉಚಿತ ಪ್ರವೇಶದ ಅನುಮತಿ ನೀಡಲಾಗಿದೆ. ತಾಜ್​ಮಹಲ್​ ಜತೆಗೆ ಆಗ್ರಾ ಕೋಟೆ ಹಾಗೂ ಫತೇಪುರ್​ ಸಿಕ್ರಿ ಪ್ರವೇಶವೂ ಉಚಿತವಾಗಿದೆ ಎಂದು ತಿಳಿಸಿದ್ದಾರೆ.

ಕೇವಲ ಭಾರತೀಯರಿಗಷ್ಟೇ ಅಲ್ಲದೇ ವಿದೇಶಿ ಪ್ರವಾಸಿಗರಿಗೂ ಇದು ಅನ್ವಯವಾಗಲಿದೆ. ಇನ್ನು ಪಥೇಪುರ ಸಿಕ್ರಿಯಲ್ಲಿರುವ ಪಂಚ ಮಹಲ್​​​ನಲ್ಲಿ ನೂರಾರು ಜನರು ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದರು. (ಏಜೆನ್ಸೀಸ್​)