ಅಹಮದಾಬಾದ್: ಪಾಟೀದಾರ್ ಮೀಸಲು ಹೋರಾಟ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಅಮಿತ್ ಚಾವ್ಡಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಹಾರ್ದಿಕ್ ಪಟೇಲ್ ಕಳೆದ ವರ್ಷ ಲೋಕಸಭೆ ಚುನಾವಣೆಗೂ ಮೊದಲು ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಬಿಜೆಪಿ ಭದ್ರಕೋಟೆ ಗುಜರಾತ್ನಲ್ಲಿ ಪಾಟೀದಾರ್ ಮೀಸಲಾತಿ ಚಳವಳಿ ಆರಂಭಿಸಿ ದೇಶದ ಗಮನಸೆಳೆದವರು ಹಾರ್ದಿಕ್ ಪಟೇಲ್. ಗುಜರಾತ್ನಲ್ಲಿ ನೆಲಕಚ್ಚಿರುವ ಕಾಂಗ್ರೆಸ್ ಪಕ್ಷವನ್ನು ಬಡಿದೆಬ್ಬಿಸಬೇಕಾದ ಸವಾಲು ಕಾರ್ಯಾಧ್ಯಕ್ಷರಾಗಿ ನೇಮವಾಗಿರುವ ಪಟೇಲ್ ಎದುರಿಗಿದೆ.
2015ರಲ್ಲಿ ಭಾರಿ ಬಲಪಡೆದುಕೊಂಡಿದ್ದ ಚಳವಳಿ ಬಳಿಕ ರಾಜಕೀಯದ ಕಾರಣಕ್ಕೆ ಹಾದಿ ತಪ್ಪಿತು. ನಂತರದಲ್ಲಿ ಅದರ ಮುಂಚೂಣಿಯಲ್ಲಿದ್ದ ನಾಯಕರೆಲ್ಲ ವಿವಿಧ ರಾಜಕೀಯ ಪಕ್ಷ ಸೇರಿಕೊಂಡರು. ಹಾರ್ದಿಕ್ ಕಾಂಗ್ರೆಸ್ ಸೇರಿಕೊಂಡು, ರಾಹುಲ್, ಸೋನಿಯಾ ಗುಣಗಾನ ಮಾಡಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಹಾದಿತಪ್ಪಿದ ಚಳವಳಿಯ ಸಂದರ್ಭದಲ್ಲಿ ಆದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಸಂಬಂಧಿಸಿ ಮತ್ತು ಇತರೆ ಕಾರಣಗಳಿಗೆ ಪಟೇಲ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್)