ಚಿಕ್ಕಮಗಳೂರು: ಜೀವ ತಾಯಿಯ ಭಿಕ್ಷೆ, ಬದುಕು ತಂದೆಯ ಭಿಕ್ಷೆಯಾದರೆ, ಜ್ಞಾನ ಗುರುವಿನ ಭಿಕ್ಷೆ. ಇಂಥ ಜ್ಞಾನ ನೀಡುತ್ತಿರುವ ಶಿಕ್ಷಕರ ಕೆಲಸಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ರೂಪಿಸುವ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.
ನಗರದ ಕುವೆಂಪು ರಂಗಮಂದಿರದಲ್ಲಿ ಶಿಕ್ಷಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕುವ ಬದಲು ಮಕ್ಕಳಿಗಾಗಿ ಸರ್ಕಾರ ಮಂಜೂರು ಮಾಡುವ ಸೌಲಭ್ಯಗಳನ್ನು ತಲುಪಿಸುವ ಮೂಲಕ ಸರ್ಕಾರಿ ಶಾಲೆಗೆ ಕರೆತರಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ಜೀವನದ ಪ್ರತಿ ಹಂತದಲ್ಲೂ ಶಿಕ್ಷಕರ ಮಾರ್ಗದರ್ಶನ ಅತ್ಯವಶಕ ಎಂದರು.
ಉಪ ವಿಭಾಗಾಧಿಕಾರಿ ರಾಜೇಶ್ ಮಾತನಾಡಿ, ಆಧುನಿಕ ಕಾಲದಲ್ಲಿ ಶಿಕ್ಷಕರ ವೃತ್ತಿ ಸವಾಲಿನಲ್ಲಿದೆ. ವಿದ್ಯಾರ್ಥಿಗಳಿಂದ ತಪ್ಪು ನಡೆದಾಗ ಒಳ್ಳೆಯ ಮಾರ್ಗದಲ್ಲಿ ನಡೆಸಲು ಶಿಕ್ಷಕರು ಶಿಕ್ಷೆ ಕೊಡುವಂತಿಲ್ಲ. ಒತ್ತಡಗಳ ನಡುವೆ ಕರ್ತವ್ಯ ನಿರ್ವಹಿಸುವಂತಾಗಿದೆ. ಶಿಕ್ಷಣ ವ್ಯವಸ್ಥೆ ಅಭಿವೃದ್ಧಿ ಹೊಂದಲು ಮೂಲ ಕಾರಣ ಶಿಕ್ಷಕರು ಎಂದರು.
ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಉಪನ್ಯಾಸಕ ಎಚ್.ಎಸ್.ಸತ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್, ಅಧಿಕಾರಿಗಳಾದ ಕೆ.ಆರ್.ಉದಯ್‌ಕುಮಾರ್, ಎಂ.ಎಂ.ನಾಗರಾಜ್, ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಇತರರಿದ್ದರು.